ಸದಾ ಜನಸಮುದಾಯದೊಂದಿಗೆ ಇರುವ ನನಗೆ ಸಾರ್ವಜನಿಕವಾಗಿ ದಾಳಿ ಮಾಡುತ್ತಾರೆಂಬ ಭಯವಿಲ್ಲ. ಆದ್ದರಿಂದ ನನಗೆ ಪೋಲೀಸ್ ಭದ್ರತೆಯ ಅವಶ್ಯಕತೆ ಇಲ್ಲ ಎಂದು ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಕ್ಷೇತ್ರದ ಅಭ್ಯರ್ಥಿ ಡಾ. ಜಿ. ಪರಮೇಶ್ವರ್ ನುಡಿದರು.
ತುಮಕೂರು : ಸದಾ ಜನಸಮುದಾಯದೊಂದಿಗೆ ಇರುವ ನನಗೆ ಸಾರ್ವಜನಿಕವಾಗಿ ದಾಳಿ ಮಾಡುತ್ತಾರೆಂಬ ಭಯವಿಲ್ಲ. ಆದ್ದರಿಂದ ನನಗೆ ಪೋಲೀಸ್ ಭದ್ರತೆಯ ಅವಶ್ಯಕತೆ ಇಲ್ಲ ಎಂದು ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಕ್ಷೇತ್ರದ ಅಭ್ಯರ್ಥಿ ಡಾ. ಜಿ. ಪರಮೇಶ್ವರ್ ನುಡಿದರು.
ಅವರು ಹೆಗ್ಗೆರೆಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಕೊರಟಗೆರೆ ಕ್ಷೇತ್ರದ ಅರಸಾಪುರ ಪಂಚಾಯ್ತಿಯಲ್ಲಿನ ಭೈರೇನಹಳ್ಳಿಯಲ್ಲಿ ಚುನಾವಣಾ ಪ್ರಚಾರದಲ್ಲಿ ತಲೆಗೆ ಬಿದ್ದ ಕಲ್ಲಿನ ಘಟನೆ ಕುರಿತು ಮಾತನಾಡಿದರು.
ನಾಯಕನಿಗೆ ದೈಹಿಕವಾಗಿ ಪೆಟ್ಟು ಬಿದ್ದಾಗ ಮತ್ತು ಹಲ್ಲೆಯಾದಾಗ ಕಾರ್ಯಕರ್ತರು ಪ್ರತಿಭಟಿಸುವುದು-ಆರೋಪ ಮಾಡುವುದು ಸಹಜ. ತಲೆಯಲ್ಲಿ ಒಂದೂವರೆ ಇಂಚು ಗಾಯವಾಗಿದೆ. ಸರ್ಜಿಕಲ್ ಗಮ್ ಹಾಕಿದ್ದಾರೆ. ನೋವಿದೆ. ಸದ್ಯಕ್ಕೆ ವೈದ್ಯರು ವಿಶ್ರಾಂತಿ ಮಾಡಲು ಹೇಳಿದ್ದಾರೆ. ಅವರ ಸಲಹೆ ಪಡೆಯುತ್ತೇನೆ. ಅವಕಾಶ ನೀಡಿದರೆ ಭಾನುವಾರದಿಂದಲೇ ಪ್ರಚಾರಕ್ಕೆ ಹೋಗ್ತೀನಿ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
35 ವರ್ಷ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಶತ್ರುಗಳು ಕಡಿಮೆ ಅಂದುಕೊಂಡಿದ್ದೇನೆ. ಒಂದು ವೇಳೆ ದ್ವೇಷ ಇದ್ದರೆ ಈ ರೀತಿ ತೀರಿಸಿಕೊಳ್ಳಬಾರದು. ಕೆಲವು ರಾಜಕೀಯ ವಿರೋಧಿಗಳು ನನ್ನನ್ನು ಭಯ ಪಡಿಸುವ ಉದ್ದೇಶ ಹೊಂದಿ, ಈ ರೀತಿಯ ಕ್ಷುಲ್ಲಕ ಕೆಲಸಕ್ಕೇನಾದರೂ ಕೈ ಹಾಕಿದ್ದಲ್ಲಿ ಅದಕ್ಕೆ ನಾನು ಹೆದರುವುದಿಲ್ಲ. ಬದಲಾಗಿ ರಾಜಕೀಯವಾಗಿಯೇ ಉತ್ತರ ನೀಡುತ್ತೇನೆ. ರಾಜಕೀಯ ಬದುಕಿನಲ್ಲಿ ಸೋಲನ್ನು-ಗೆಲುವನ್ನು ನೋಡಿದ್ದೇನೆ. ಸೋತಾಗ ಕುಗ್ಗಿಲ್ಲ ಅದೇ ರೀತಿ ಗೆದ್ದಾಗಲೂ ಹಿಗ್ಗಿಲ್ಲ. ಬಹಳ ಸ್ಥಿತ ಪ್ರಜ್ಞನಾಗಿ ಇಲ್ಲಿಯವರೆಗೆ ರಾಜಕೀಯವನ್ನು ಮಾಡಿಕೊಂಡು ಬಂದಿದ್ದೇನೆ. ಕೆಟ್ಟರಾಜಕೀಯ ವ್ಯವಸ್ಥೆಗೆ ನಾನು ಮುಂದಾಗಿಲ್ಲ. ನನ್ನ ವ್ಯಕಿತ್ವವನ್ನು ಇಡೀ ರಾಜ್ಯ ಮತ್ತು ರಾಷ್ಟ್ರ ಹಾಗೂ ಕ್ಷೇತ್ರದ ಮತದಾರರು ನೋಡಿದ್ದಾರೆ. ನಾನು ಪಾರದರ್ಶಕ ವ್ಯವಸ್ಥೆಯಲ್ಲಿ ಸಾರ್ವಜನಿಕ ಜೀವನ ನಡೆಸಿಕೊಂಡು ಬಂದಿದ್ದೇನೆ ಎಂದು ಅವರು ನುಡಿದರು.
ಭೈರೇನಹಳ್ಳಿಯಲ್ಲಿ ಎಂದಿನಂತೆ ಪ್ರಚಾರ ನಡೆಸುತ್ತಿದ್ದಾಗ ಅಲ್ಲಿ ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಆಗ ನನ್ನ ಎತ್ತಿಕೊಳ್ಳಲು ತೊಡಗಿದರು. ನಾನು ಬೇಡಿ ಅಂತಾ ಹೇಳುತ್ತಿದ್ದೆ. ಆದರೂ ನನ್ನನ್ನು ಎತ್ತಿಕೊಳ್ಳ ತೊಡಗಿದರು. ಅಷ್ಟರಲ್ಲಿ ಜೆಸಿಬಿಯಲ್ಲಿ ಹೂ, ಕ್ರೇನ್‌ನಲ್ಲಿ ಹಾರ ಹಾಕೋಕೆ ಶುರು ಮಾಡಿದರು. ಕಾರ್ಯಕರ್ತರು ಆ ವೇಳೆ ನನ್ನು ಮೇಲೆ ಎತ್ತಿಕೊಂಡ್ರು, ಆಗ ಸಡನ್ ಆಗಿ ಕಲ್ಲಿನ ಬಲವಾದ ಹೊಡೆದ ನನ್ನ ತಲೆಗೆ ಬಿತ್ತು. ನಾನು ಕೂಗಿದ್ದು ಯಾರಿಗೂ ಕೆಳಲಿಲ್ಲ. ಆಗ ಬ್ಲಡ್ ಕೂಡ ಬರೋಕೆ ಶುರು ಆಯ್ತು ಎಂದರು.
ರಕ್ತ ಚಿಮ್ಮಿ ಬಟ್ಟೆಮೇಲೆ ಬಿದ್ದಾಗ ನನ್ನನ್ನು ಗಮನಿಸಿ ಕೆಳಗೆ ಇಳಿಸಿದ್ರು ಎಂದು ಘಟನೆಯನ್ನು ವಿವರಿಸಿದರು. ಅದಕ್ಕೂ ಮುಂಚೆ ನನ್ನನ್ನ ಭೇಟಿ ಮಾಡೋಕೆ ನಮ್ಮ ಸಿದ್ದಾರ್ಥ ಕಾಲೇಜಿನ ವೈದ್ಯರೊಬ್ಬರು ಬಂದಿದ್ದರು. ಕೂಡಲೇ ಅವರೇ ನನ್ನನ್ನ ಅಕ್ಕಿರಾಂಪುರದಲ್ಲಿನ ಆರೋಗ್ಯ ಕೆಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ತುಮಕೂರಿಗೆ ಕರೆದುಕೊಂಡು ಬಂದರು. ನನ್ನ ತಲೆಗೆ ಬಿದ್ದ ಕಲ್ಲು ಹೂವಿನಲ್ಲಿ ಬಂತು ಅಂತಾ ಹೇಳೋಕೆ ಆಗಲ್ಲಾ. ಅದು ತುಂಬಾ ದಪ್ಪ ಇತ್ತು. ಆದ್ದರಿಂದಲೇ ರಕ್ತ ಚಿಮ್ಮಿ ಹರಿಯಿತು. ಸಮಯ ನೋಡಿ ಯಾರೋ ದುಷ್ಕರ್ಮಿಗಳು ಕಲ್ಲು ಹಾಕಿದ್ದರು. ಅನ್ನಿಸುತ್ತದೆ. ಬೇಕಂತಲೇ ಎಸೆದಿದ್ರೇ? ಯಾರು? ಮತ್ತು ಯಾಕೆ ಎಸೆದರು ಗೊತ್ತಿಲ್ಲಾ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ. ತನಿಖೆಯಾಗಲಿ ಎಂದು ಪರಮೇಶ್ವರ ಆಗ್ರಹಿಸಿದರು.
1999ರಲ್ಲಿ ನನ್ನ ಮೇಲೆ ಇದೇ ರೀತಿ ಹಲ್ಲೆ ನಡೆದಿತ್ತು. ಫಲಿತಾಂಶ ಬಳಿಕ ವಿಜಯೋತ್ಸವ ಆಚರಿಸುವ ವೇಳೆ ಚಾಕು ಇರಿಯೋದಕ್ಕೆ ಪ್ರಯತ್ನ ನಡೆದಿತ್ತು. ಇತ್ತೀಚಿಗೆ ನಾಮಪತ್ರ ಸಲ್ಲಿಸುವ ವೇಳೆ ಕಲ್ಲು ತೂರಲಾಯಿತು. ಈಗ ಮತ್ತೆ ನನ್ನ ಮೇಲೆ ಕಲ್ಲು ಬಿದ್ದಿದೆ. ಹೀಗಾಗಿ ಪದೇ ಪದೇ ಯಾಕೆ ಹೀಗಾಗ್ತಿದೆ ತಿಳಿಯುತ್ತಿಲ್ಲಾ ಎಂದು ಪರಮೇಶ್ವರ ಆತಂಕ ವ್ಯಕ್ತಪಡಿಸಿದರು.
ನಾನು ಸ್ಪೋಟ್ಸ್‌ರ್ ಪರ್ಸನ್. ಸೋಲು-ಗೆಲುವು ಒಂದೇ ನನಗೆ. ಎಲ್ಲವನ್ನು ಸಮಾನಾಗಿ ಸ್ವೀಕರಿಸಿದ್ದೇನೆ.ಯಾವುದೇ ಕಪ್ಪಚುಕ್ಕೆ ಇಲ್ಲದ ರಾಜಕೀಯ ಜೀವನ ಮಾಡಿದ್ದೇನೆ. ಯಾರೂ ಸಹ ಆತಂಕಕ್ಕೆ ಒಳಗಾಗಬಾರದು, ನಾನು ನಿಮ್ಮೆಲ್ಲರ ಆಶೀರ್ವಾದ ಹಾಗೂ ನೀವು ತೋರಿದ ಪ್ರೀತಿಯಿಂದಾಗಿ ಮತ್ತಷ್ಟುಬಲಿಷ್ಠನಾಗಿದ್ದೇನೆ. ಕ್ರಿಯೆಗೆ, ಪ್ರತಿಕ್ರಿಯೆ ನನ್ನ ಉದ್ದೇಶವಲ್ಲ. ಈ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ್ದೇನೆ ಎಂದರು.
ಆರೋಗ್ಯ ವಿಚಾರಿಸಿದ ಗಣ್ಯರಿಗೆ ಅಬಾರಿ:
ಘಟನೆ ನಡದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಕುಗ್ಗಬೇಡಿ ಎಂದು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಾದ ಎಂ. ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶೀಕೆಂದ್ರ ಮಹಾಸ್ವಾಮೀಜಿ ಸೇರಿದಂತೆ ಅನೇಕರು ಮಠಾಧೀಶರು, ಸಾಹಿತಿಗಳು ಮತ್ತು ಹೋರಾಟಗಾರರು ದೂರವಾಣಿ ಕರೆ ಮಾಡಿ,ಆರೋಗ್ಯ ವಿಚಾರಿಸಿದರು. ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಪರಮೇಶ್ವರ ಹೇಳಿದರು.
ಘಟನೆಯ ವಿವರ:
ಭೈರೇನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದಾಗ ಪರಮೇಶ್ವರ್‌ಗೆ ಬಿದ್ದ ಕಲ್ಲು
ಅಕ್ಕಿರಾಂಪುರದಲ್ಲಿ ಪ್ರಥಮ ಚಿಕಿತ್ಸೆ, ಬಳಿಕ ತುಮಕೂರಲ್ಲಿ ಹೆಚ್ಚಿನ ಚಿಕಿತ್ಸೆ
ತಲೆಯಲ್ಲಿ ಒಂದೂವರೆ ಇಂಚು ಗಾಯ, ಸರ್ಜಿಕಲ್ ಗಮ್ ಹಾಕಿದ ವೈದ್ಯರು
ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲು ಪರಮೇಶ್ವರ್‌ಗೆ ಸೂಚಿಸಿದ ವೈದ್ಯರು
ಪೊಲೀಸರಿಗೆ ದೂರು, ತನಿಖೆಗೆ ಮಾಜಿ ಉಪಮುಖ್ಯಮಂತ್ರಿ ಒತ್ತಾಯ