
ಬೀದರ್: ಅನೈತಿಕ ಸಂಬಂಧದ ಶಂಕೆಯಿಂದ ಪತಿಯೊಬ್ಬ ತನ್ನ ಪತ್ನಿಯನ್ನು ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದ ಹೃದಯವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮನ್ನಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಮನ್ನಳ್ಳಿ ಗ್ರಾಮದ ನಿವಾಸಿ ಅಶ್ವಿನಿ (28) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಕಿಶನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಶನಿವಾರ ಇಡೀ ರಾತ್ರಿ ಕಿಶನ್ ತನ್ನ ಪತ್ನಿ ಅಶ್ವಿನಿಯೊಂದಿಗೆ ಶೀಲ ಶಂಕೆಯ ವಿಚಾರವಾಗಿ ಜಗಳವಾಡಿದ್ದನು. ಪತ್ನಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಕಿಶನ್‌ನನ್ನು ಕಾಡುತ್ತಿತ್ತು. ಇದೇ ಕಾರಣದಿಂದಾಗಿ ಗಂಡ-ಹೆಂಡತಿಯ ನಡುವೆ ಪದೇಪದೇ ಕಲಹ ನಡೆಯುತ್ತಿತ್ತು. ನಸುಕಿನ ಜಾವ ಸುಮಾರು 4 ಗಂಟೆ ಸುಮಾರಿಗೆ, ಕೋಪ ಮಿತಿಮೀರಿ ಕಿಶನ್ ತನ್ನ ಪತ್ನಿಯ ಮುಖ ಮತ್ತು ತಲೆಯ ಮೇಲೆ ದೊಡ್ಡ ಕಲ್ಲನ್ನು ಎತ್ತಿಹಾಕಿ ಹತ್ಯೆಗೈದಿದ್ದಾನೆ. ಘಟನೆಯಲ್ಲಿ ಅಶ್ವಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಅಶ್ವಿನಿ ತನ್ನ ಪತಿ ಶೀಲ ಶಂಕೆಯಿಂದ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂಬ ವಿಷಯವನ್ನು ಕೆಲ ದಿನಗಳ ಹಿಂದೆಯೇ ತನ್ನ ತಂದೆ ಹಾಗೂ ಕುಟುಂಬಸ್ಥರಿಗೆ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಿಶನ್‌ಗೆ ಬುದ್ಧಿವಾದ ಹೇಳಿ, ದಂಪತಿಯ ನಡುವೆ ಸಂಧಾನಕ್ಕೆ ಪ್ರಯತ್ನಿಸಿದ್ದರೂ, ಗಂಡ-ಹೆಂಡತಿಯ ನಡುವಿನ ಜಗಳ ಶಮನವಾಗಿರಲಿಲ್ಲ. ಕೊನೆಗೆ ಈ ದೀರ್ಘಕಾಲದ ಅನುಮಾನ ಮತ್ತು ಕಲಹ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ.
ಆರೋಪಿ ಕಿಶನ್ ಮಹಾರಾಷ್ಟ್ರದ ದಾಬಾದೊಂದರಲ್ಲಿ ಕೆಲಸ ಮಾಡುತ್ತಿದ್ದನು. ಪತ್ನಿ ಅಶ್ವಿನಿ ತನ್ನ ಮೂವರು ಮಕ್ಕಳೊಂದಿಗೆ ಮನ್ನಳ್ಳಿ ಗ್ರಾಮದಲ್ಲಿಯೇ ವಾಸವಾಗಿದ್ದಳು. ಕೆಲಸದ ನಿಮಿತ್ತ ದೂರವಿದ್ದರೂ, ಶೀಲ ಶಂಕೆಯ ವಿಚಾರವಾಗಿ ಕಿಶನ್ ಪತ್ನಿಯೊಂದಿಗೆ ನಿರಂತರವಾಗಿ ಜಗಳವಾಡುತ್ತಿದ್ದನು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳಾದ ಪ್ರದೀಪ್ ಗುಂಟೆ, ಮಡಿವಾಳಪ್ಪ ಹಾಗೂ ಸುವರ್ಣಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಮಂಠಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಕಿಶನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.