
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ಸಮೀಪ, ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇತ್ತೀಚೆಗಷ್ಟೇ ಮದುವೆಯಾದ ನವ ದಂಪತಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ನಿಂತಿದ್ದ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದ್ದು, ನವ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ನುಜ್ಜುಗುಜ್ಜಾಗಿದೆ.
ಮೃತರನ್ನು ಹಾವೇರಿ ನಗರದ ನಿವಾಸಿಗಳಾದ ಕಾರ್ತಿಕ್ ಹೂಗಾರ (34 ವರ್ಷ) ಮತ್ತು ಅವರ ಪತ್ನಿ ಐಶ್ವರ್ಯ (30 ವರ್ಷ) ಎಂದು ಗುರುತಿಸಲಾಗಿದೆ. ಇವರು ಹುಬ್ಬಳ್ಳಿ ಕಡೆಯಿಂದ ಶಿಗ್ಗಾಂವಿ ಕಡೆಗೆ KA-63 M-0522 ವ್ಯಾಗನಾರ್ ಕಾರಿನಲ್ಲಿ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ವ್ಯಾಗನಾರ್ ಕಾರು ಹಿಂಬದಿಯಿಂದ ಭಾರೀ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆ ಇಷ್ಟೊಂದು ಜಾಸ್ತಿಯಾಗಿದ್ದರಿಂದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರ್ತಿಕ್ ಹಾಗೂ ಐಶ್ವರ್ಯ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಾರಿನಲ್ಲಿದ್ದ ಇನ್ನಿಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ರವಾನೆ ಮಾಡಲಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತ ದಂಪತಿ ಫೆಬ್ರವರಿ 13, 2025ರಂದು ವಿವಾಹವಾಗಿದ್ದು, ಮದುವೆಯಾಗಿ ಕೇವಲ 15 ದಿನಗಳಷ್ಟೇ ಕಳೆದಿದ್ದವು. ನವ ದಾಂಪತ್ಯ ಜೀವನದ ಆರಂಭದಲ್ಲೇ ದೇವರ ದರ್ಶನಕ್ಕಾಗಿ ನವಲಗುಂದದ ಕಾಮಣ್ಣನಿಗೆ ಪೂಜೆ ಸಲ್ಲಿಸಲು ತೆರಳಿದ್ದ ದಂಪತಿ, ಪೂಜೆ ಮುಗಿಸಿ ವಾಪಸ್ಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಮದುವೆಯ ಖುಷಿಯಲ್ಲಿ ದೇವರ ಆಶೀರ್ವಾದ ಪಡೆಯಲು ಹೊರಟ ದಂಪತಿ ಹೀಗೆ ಅಕಾಲಿಕ ಮರಣವನ್ನಪ್ಪಿರುವುದು ಕುಟುಂಬಸ್ಥರು, ಸಂಬಂಧಿಕರು ಮತ್ತು ಗ್ರಾಮಸ್ಥರಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಕಾರಿನೊಳಗೆ ಸಿಲುಕಿದ್ದ ಮೃತದೇಹಗಳನ್ನು ಬಹಳ ಪ್ರಯತ್ನದ ನಂತರ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ತಡಸ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಅಂಶಗಳ ಕುರಿತು ತನಿಖೆ ಆರಂಭಿಸಲಾಗಿದ್ದು, ಈ ಸಂಬಂಧ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.