ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ: ನನಸಾಗುವತ್ತ ಉತ್ತರಕನ್ನಡ ಜನರ ಬಹುವರ್ಷಗಳ ಕನಸು

By Anusha KbFirst Published Sep 28, 2022, 8:32 PM IST
Highlights

ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ ಜಾರಿಗೆ ಪೂರಕವಾಗಿ ಕೇಂದ್ರದ ರೈಲ್ವೇ ಯೋಜನಾ ಸಮಿತಿ, ಜಿಲ್ಲಾಡಳಿತದ ನೇತೃತ್ವದಲ್ಲಿ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದೆ.

ಹುಬ್ಬಳ್ಳಿ: ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ ಜಾರಿಯಾಗಲು ಉತ್ತರಕನ್ನಡಿಗರು ಬಹಳ‌ ವರ್ಷಗಳಿಂದ‌‌ ಹೋರಾಟ ನಡೆಸುತ್ತಿದ್ದರು. ಇದಕ್ಕೆ ಪೂರಕವೆಂಬಂತೆ ಜಿಲ್ಲೆಗೆ ಭೇಟಿ ನೀಡಿದ ಕೇಂದ್ರದ ರೈಲ್ವೇ ಯೋಜನಾ ಸಮಿತಿ, ಜಿಲ್ಲಾಡಳಿತದ ನೇತೃತ್ವದಲ್ಲಿ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದೆ. ಆದರೆ, ಈ ಸಭೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದಕ್ಕೆ ಮಾಜಿ ಶಾಸಕರು ವಿರೋಧ ವ್ಯಕ್ತಪಡಿಸಿ ಸಭೆಯನ್ನು ಸಾರ್ವಜನಿಕವಾಗಿ ನಡೆಸುವಂತೆ ಆಗ್ರಹಿಸಿದ್ದರು. ಇದು ಕೆಲವು ಹೊತ್ತುಗಳ ಕಾಲ ಮಾಜಿ ಹಾಗೂ ಹಾಲಿ ಶಾಸಕರ ನಡುವೆ ಮಾತಿನ ಚಕಮಕಿಗೂ ಕಾರಣವಾಯ್ತು. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.

ಉತ್ತರಕನ್ನಡಿಗರ ಬಹುವರ್ಷಗಳ ಕನಸ್ಸಾಗಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ (Hubli Ankola Railway Plan) ಜಾರಿಯಿಂದ ಪರಿಸರದ ಮೇಲೆ ಆಗಬಹುದಾದ ಪರಿಣಾಮಗಳ ಅಧ್ಯಯನಕ್ಕೆ ಕೇಂದ್ರದ ರೈಲ್ವೇ ಯೋಜನಾ ಸಮಿತಿ ಜಿಲ್ಲೆಗೆ ಭೇಟಿ ನೀಡಿದೆ. ಕಳೆದೆರಡು ದಿನಗಳಿಂದ ಜಿಲ್ಲೆಯ ಅಂಕೋಲಾ (Ankola) ಹಾಗೂ ಯಲ್ಲಾಪುರ (Yellapura) ತಾಲೂಕುಗಳಲ್ಲಿ ಉದ್ದೇಶಿತ ಯೋಜನಾ ಪ್ರದೇಶಗಳಿಗೆ ಭೇಟಿ ನೀಡಿದ ಸಮಿತಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರಕ್ಕೆ ಮುಂದಾಗಿತ್ತು. 

ಕಾಶ್ಮೀರದ ಸೌಂದರ್ಯಕ್ಕೆ ಕಳಶವಿಟ್ಟ ರೈಲ್ವೆ ಬ್ರಿಡ್ಜ್‌: ಡ್ರೋಣ್‌ ಸೆರೆ ಹಿಡಿದ ಅದ್ಭುತ ಫೋಟೋಗಳು

ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲೇ ಸಭೆಯನ್ನು ಆಯೋಜಿಸಲಾಗಿದ್ದು, ಸಭಾಂಗಣ ಚಿಕ್ಕದಾಗಿದ್ದರಿಂದ ಹಂತ ಹಂತವಾಗಿ ಸಾರ್ವಜನಿಕರನ್ನು ಕರೆಯಿಸಿ ಅಹವಾಲು ಸ್ವೀಕರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಶಾಸಕ ಸತೀಶ್ ಸೈಲ್ ಜನಪ್ರತಿನಿಧಿಗಳನ್ನು ವೇದಿಕೆಯಲ್ಲಿ ಕೂರಿಸಿ ಅಹವಾಲು ಸ್ವೀಕಾರ ಸಭೆಯನ್ನು ಸಭಾಂಗಣದಲ್ಲಿ ಆಯೋಜನೆ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದರು. ಅಹವಾಲು ಸ್ವೀಕಾರ ಸಭೆಯನ್ನು ಸಾರ್ವಜನಿಕ (Public) ಸ್ಥಳದಲ್ಲಿ ನಡೆಸುವಂತೆ ಅವರು ಒತ್ತಾಯಿಸಿದ ಕಾರಣ ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಶಾಸಕಿ ರೂಪಾಲಿ ನಾಯ್ಕ್ ನಡುವೆ ಮಾತಿನ ಚಕಮಕಿ ಕೂಡಾ ನಡೆಯಿತು. 

ಅಹವಾಲು ಸ್ವೀಕಾರ ಸಭೆಗೆ ವಿನಾಕಾರಣ ಅಡ್ಡಿಪಡಿಸದಂತೆ ಶಾಸಕಿ ರೂಪಾಲಿ (Rupali Naik) ತಿಳಿಸಿದ್ದು, ಸಭೆಗೆ ವಿರೋಧ ವ್ಯಕ್ತಪಡಿಸಿ ಸತೀಶ್ ಸೈಲ್ (Sathish sail)ಹೊರನಡೆಯಲು ಮುಂದಾದರು. ಈ ವೇಳೆ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿಗಳು (DC) ಅಧಿಕಾರಿಗಳನ್ನು ಹೊರಗೆ ಕಳುಹಿಸಿ ಸಾರ್ವಜನಿಕರನ್ನೇ ಒಳಗೆ ಬರುವಂತೆ ಸೂಚಿಸಿದರು. ಈ ಬಳಿಕ ಅಹವಾಲು ಸ್ವೀಕಾರ ಸಭೆಯನ್ನ ಮುಂದುವರೆಸಲಾಯಿತು.

Indian Railways: ರೈಲು ಪ್ರಯಾಣದ ಅನುಭವ ಹೆಚ್ಚಿಸಲು ಸಿದ್ಧವಾದ ವಂದೇ ಭಾರತ್ 2..! ವೈಶಿಷ್ಟ್ಯಗಳು ಹೀಗಿವೆ..

ಇನ್ನು ಮಾಜಿ ಹಾಲಿಗಳ ನಡುವಿನ ಮಾತಿನ ಚಕಮಕಿ ಬಳಿಕ ಜನಪ್ರತಿನಿಧಿಗಳನ್ನು ವೇದಿಕೆ ಎದುರು ಕೂರಿಸಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಮಾತ್ರ ವೇದಿಕೆ ಮೇಲೆ ಕುಳಿತು ಸಭೆ ಮುಂದುವರೆಸಿದರು. ಈ ವೇಳೆ ಸಚಿವ ಶಿವರಾಮ ಹೆಬ್ಬಾರ್ (Shivaram Hebbar), ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಸತೀಶ್ ಸೈಲ್ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಯೋಜನೆ ಜಾರಿಗೆ ಬೆಂಬಲವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 

ಬಹುನಿರೀಕ್ಷಿತ ಯೋಜನೆ ಜಾರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಕರಾವಳಿಯಿಂದ ಉತ್ತರ ಕರ್ನಾಟಕದ ಸಂಪರ್ಕಕ್ಕೆ ಈ ಯೋಜನೆ ಪ್ರಮುಖ ಕೊಂಡಿಯಾಗಲಿದೆ ಎಂದು ಶಾಸಕಿ ರೂಪಾಲಿ ನಾಯ್ಕ್, ಮಾಜಿ ಶಾಸಕ ಸೈಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಶಿವರಾಮ ಹೆಬ್ಬಾರ್, ಈ ಸಮಿತಿ ಭೇಟಿಯ ಬಳಿಕ ಯೋಜನೆ ಜಾರಿಗೆ ಪೂರಕವಾಗಿ ತಮ್ಮ ವರದಿಯನ್ನು ಸಲ್ಲಿಸುವ ವಿಶ್ವಾಸವಿದ್ದು, ಎಲ್ಲೋ ಕುಳಿತ ಪರಿಸರ ವಾದಿಗಳು ಉತ್ತರಕನ್ನಡದ (Uttara Kannada) ಕಾಳಜಿ ವ್ಯಕ್ತಪಡಿಸುವ ಬದಲು ಜನರ ಮಧ್ಯೆ ಬಂದು ಮಾತನಾಡಲಿ ಎಂದು ಕಿಡಿ ಕಾರಿದರು.


ಒಟ್ಟಿನಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ ಜಾರಿಗೆ ಕೇಂದ್ರದ ರೈಲ್ವೇ ಸಮಿತಿ ಭೇಟಿಯಿಂದ ಹೆಚ್ಚು ಮಹತ್ವವನ್ನು  ಬಂದಿದ್ದು, ಕೆಲವರು ಯೋಜನೆ ಬೇಡವೆಂದ್ರೆ, ಹೆಚ್ಚಿನ ಜನರು ಯೋಜನೆ ಅನುಷ್ಠಾನವಾಗಲೇಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳ ಜತೆ ಸಾರ್ವಜನಿಕರಿಂದಲೂ ಅಹವಾಲನ್ನು ಸ್ವೀಕರಿಸಿರುವ ಸಮಿತಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಿದ್ದು, ಮುಂದಿನ ತೀರ್ಪು ಯಾವ ಕಡೆಯಿರಲಿದೆ ಎಂದು ಕಾದು ನೋಡಬೇಕಷ್ಟೇ.

ಭರತ್‌ರಾಜ್ ಕಲ್ಲಡ್ಕ ಜತೆ ಕ್ಯಾಮೆರಾಮ್ಯಾನ್ ಗಿರೀಶ್ ನಾಯ್ಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕಾರವಾರ
 

click me!