ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ

By Anusha Kb  |  First Published Sep 28, 2022, 6:52 PM IST

ಇಂದು ವಿಶ್ವ ರೇಬೀಸ್ ದಿನಾಚರಣೆ ನಿಮಿತ್ತ ಕಲಬುರಗಿ ನಗರದಲ್ಲಿ ನಾಯಿಗಳಿಗೆ ಉಚಿತ ರೇಬೀಸ್ ಲಸಿಕೆ ನೀಡಲಾಯಿತು. ಪ್ರತಿಯೊಬ್ಬರೂ ತಮ್ಮ ತಮ್ಮ ಸಾಕು ನಾಯಿಗಳಿಗೆ ತಪ್ಪದೇ ರೇಬಿಸ್ ಲಸಿಕೆ ಕೊಡಿಸಬೇಕು ಎಂದು ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಕರೆ ನೀಡಿದರು.


ಕಲಬುರಗಿ: ಪ್ರತಿಯೊಬ್ಬರೂ ತಮ್ಮ ತಮ್ಮ ಸಾಕು ನಾಯಿಗಳಿಗೆ ತಪ್ಪದೇ ರೇಬಿಸ್ ಲಸಿಕೆ ಕೊಡಿಸಬೇಕು ಎಂದು ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಕರೆ ನೀಡಿದ್ದಾರೆ. ಕಲಬುರಗಿ ನಗರದಲ್ಲಿ ಇಂದು ವಿಶ್ವ ರೇಬೀಸ್ ದಿನಾಚರಣೆ ನಿಮಿತ್ತ ನಾಯಿಗಳಿಗೆ ಉಚಿತ ರೇಬೀಸ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಾರಣಾಂತಿಕ ಪ್ರಾಣಿಜನ್ಯ ರೋಗವಾಗಿರುವ ರೇಬೀಸ್ ರೋಗವನ್ನು ನಿರ್ಮೂಲನೆಗೊಳಿಸುವ ಉದ್ದೇಶದಿಂದ ರಾಜ್ಯಾದ್ಯಂತ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ರೇಬೀಸ್ ರೋಗದ ನಿರ್ಮೂಲನೆಗಾಗಿ ಜಾಗೃತಿ‌ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 28ರಂದು ವಿಶ್ವ ರೇಬೀಸ್ ದಿನವನ್ನು ಆಚರಿಸಲಾಗುತ್ತಿದೆ. ಸಾರ್ವಜನಿಕರು ರೇಬೀಸ್ ರೋಗದ ಬಗ್ಗೆ ಜಾಗೃತಿ ವಹಿಸಬೇಕು. ತಾವು ಸಾಕಿದ ನಾಯಿಗಳಿಗೆ ತಪ್ಪದೇ ಲಸಿಕೆ ಕೊಡಿಸುವ ಮೂಲಕ ರೇಬೀಸ್ ನಿಯಂತ್ರಣಕ್ಕಾಗಿ ಸರ್ಕಾರದ ಕೆಲಸಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

Latest Videos

undefined

ರೇಬೀಸ್ ಪೀಡಿತ ನಾಯಿ ಇತರೆ ಪ್ರಾಣಿ ಮತ್ತು ಮನುಷ್ಯರಿಗೆ ಕಚ್ಚಿದರೆ ಶರೀರದೊಳಗೆ ರೇಬೀಸ್ (rabies) ವೈರಾಣು ಪ್ರವೇಶಿಸಿ, ರೇಬೀಸ್ ರೋಗ ಉಂಟಾಗುತ್ತದೆ. ಈ ರೋಗದಿಂದ ದೇಶದಲ್ಲಿ ಪ್ರತಿ ವರ್ಷ 30 ಸಾವಿರ ಜನ ಸಾವನ್ನಪ್ಪುತ್ತಿದ್ದಾರೆ.‌ಹಾಗಾಗಿ ರೋಗ ಪತ್ತೆ ಹಚ್ಚುವಿಕೆ ಮತ್ತು ರೋಗ ನಿಯಂತ್ರಣ (Disease control) ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಅಧಿಕಾರಿಗಳು ಪರಿಣಾಮಕಾರಿಯಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ ನಾಯಿಗಳ ಸಂತಾನ ಹರಣ ಚಿಕಿತ್ಸೆಗಾಗಿ ವಿಶೇಷ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದ್ದು ಅದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಶುಪಾಲನೆ ಇಲಾಖೆ, ಕಲಬುರಗಿ ಮಹಾನಗರ ಪಾಲಿಕೆ ಹಾಗೂ  ಡಾ.ಮಣೂರ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರಾದ ಡಾ. ಎಸ್.ಡಿ ಅವಟಿ, ಸಹಾಯಕ ನಿರ್ದೇಶಕರಾದ ಡಾ.ಶಂಕರ ಟಕ್ಕಳಕಿ, ಮಣೂರ ಆಸ್ಪತ್ರೆ ಡಾ.ಫಾರುಕ್ ಮಣೂರ, ಮಹಾನಗರ ಪಾಲಿಕೆಯ ವೈದ್ಯಾಧಿಕಾರಿ ಡಾ.ವಿವೇಕಾನಂದ ಇತರರು ಉಪಸ್ಥಿತರಿದ್ದರು.

click me!