
ಹುಬ್ಬಳ್ಳಿ (ಜೂ. 13): ಕಳೆದೆರಡು ದಿನಗಳ ಹಿಂದೆ ತೀವ್ರ ಮಳೆಯಿಂದಾಗಿ ತುಂಬಿ ಹರಿದ ಚರಂಡಿಗೆ ವ್ಯಕ್ತಿಯೊಬ್ಬರು ಕೊಚ್ಚಿಕೊಂಡು ಹೋಗಿದ್ದರು. ಈ ಘಟನೆಯ ಬೆನ್ನಲ್ಲಿಯೇ ಎರಡು ದಿನಗಳ ನಿರಂತರ ಕಾರ್ಯಾಚರಣೆ ಬಳಿಕ 2 ಕಿಲೋಮೀಟರ್ ದೂರದಲ್ಲಿ ಶವ ಪತ್ತೆಯಾದ ಭೀಕರ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಚರಂಡಿಗೆ ಬಿದ್ದು ಮೃತರಾದ ವ್ಯಕ್ತಿಯನ್ನು ಹುಸೇನ್ ಕಳಸ (ವಯಸ್ಸು 55) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಆ ವೇಳೆ ಭಾರೀ ಮಳೆಯ ಹಿನ್ನೆಲೆ, ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ತಪ್ಪಾದ ಚಾಲನೆಯಿಂದ ಹುಸೇನ್ ಅವರ ಬೈಕ್ ಚರಂಡಿಗೆ ಜಾರಿದ ಪರಿಣಾಮ ಅವರು ನೀರಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಕೂಡಲೇ ಹುಸೇನ್ ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗುವುದನ್ನು ನೋಡಿದ ಸ್ಥಳೀಯರು ಪೊಲೀಸ್ ಠಾಣೆ ಮತ್ತು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆರಂಭದಲ್ಲಿ ಆಗ್ನಿಶಾಮಕ ಠಾಣೆ ಸಿಬ್ಬಂದಿ ಬಂದು ಶೋಧ ಕಾರ್ಯ ನಡೆಸಿದರೂ ಹುಸೇನ್ ಪತ್ತೆಯಾಗದಿದ್ದಾಗ, ರಾಜ್ಯ ವಿಪತ್ತು ನಿರ್ವಹಣಾ ತಂಡವು (SDRF) ಆಗಮಿಸಿ ಮೃತದೇಹ ಪತ್ತೆಗೆ ಕಾರ್ಯಾಚರಣೆ ಆರಂಭಿಸಿತು. ಎರಡು ದಿನಗಳ ನಿರಂತರ ಕಾರ್ಯಾಚರಣೆ ಫಲವಾಗಿ ಹುಸೇನ್ ಬಿದ್ದ ಜಾಗದಿಂದ 2 ಕಿ.ಮೀ. ದೂರದಲ್ಲಿ ನೀರು ಹರಿದು ಹೋಗುವ ಹಣ್ಣದ ಮುಳ್ಳಿನ ಕಂಟಿಯಲ್ಲಿ ಶವವನ್ನು ಪತ್ತೆ ಮಾಡಿದ್ದಾರೆ. ಶವ ತುಂಬಾ ಕೊಳೆತ ಸ್ಥಿತಿಯಲ್ಲಿ ದೊರೆತಿದ್ದು, ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಸ್ಥಳೀಯ ಪೊಲೀಸರು ಹಾಗೂ ಸಹಾಯ ತಂಡಗಳು ಎರಡು ದಿನಗಳಿಂದ ಶೋಧ ಕಾರ್ಯದಲ್ಲಿ ತೊಡಗಿದ್ದರು. ಕೊನೆಗೆ ಮೃತದೇಹ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಪತ್ತೆಯಾದುದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಪೊಲೀಸ್ ತನಿಖೆ ಮುಂದುವರಿದಿದೆ.