ಹೆಬ್ಬಾಳ-ಸರ್ಜಾಪುರ ಮೆಟ್ರೋ ಕೆಂಪು ಮಾರ್ಗ ಕಾಮಗಾರಿ 1 ವರ್ಷ ವಿಳಂಬ

Asianet Kannada   | Kannada Prabha
Published : Jun 13, 2025, 06:06 AM IST
Namma Metro

ಸಾರಾಂಶ

ಹೆಬ್ಬಾಳದಿಂದ ಸರ್ಜಾಪುರ ಸಂಪರ್ಕಿಸಲಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ರೂಪಿಸಿರುವ ‘ಕೆಂಪು ಮಾರ್ಗ’(3 ಎ) ಅಂದಾಜು ಯೋಜನಾ ವೆಚ್ಚ ಹೆಚ್ಚಾಗಿರುವುದಕ್ಕೆ ಕೇಂದ್ರ ಸರ್ಕಾರ ಕಾರಣ ಕೇಳಿದೆ.

ಬೆಂಗಳೂರು (ಜೂ.13): ಹೆಬ್ಬಾಳದಿಂದ ಸರ್ಜಾಪುರ ಸಂಪರ್ಕಿಸಲಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ರೂಪಿಸಿರುವ ‘ಕೆಂಪು ಮಾರ್ಗ’(3 ಎ) ಅಂದಾಜು ಯೋಜನಾ ವೆಚ್ಚ ಹೆಚ್ಚಾಗಿರುವುದಕ್ಕೆ ಕೇಂದ್ರ ಸರ್ಕಾರ ಕಾರಣ ಕೇಳಿದೆ. ಈ ಯೋಜನೆ ಕಾಮಗಾರಿ ಆರಂಭ ಒಂದು ವರ್ಷ ವಿಳಂಬವಾಗುವ ಸಾಧ್ಯತೆಯಿದೆ. 22.14 ಕಿಮೀ ಎತ್ತರಿಸಿದ ಮಾರ್ಗ ಹಾಗೂ 14.45 ಕಿಮೀ ಸುರಂಗ ಮಾರ್ಗ ಸೇರಿ ಕೆಂಪು ಮಾರ್ಗವು ಒಟ್ಟು 36.55ಕಿಮೀ ಉದ್ದವಿರಲಿದೆ.

ಪ್ರತಿ ಕಿಲೋಮೀಟರ್‌ಗೆ ₹ 776.3 ಕೋಟಿಯಂತೆ ಒಟ್ಟಾರೆ ₹ 28,405 ಅಂದಾಜು ವೆಚ್ಚದ ವಿಸ್ತ್ರತ ಯೋಜನಾ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿ ಯೋಜನೆ ಅನುಮೋದನೆಗೆ ಕೋರಿತ್ತು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈ ವೆಚ್ಚ ನಿಗದಿತ ಮಾನದಂಡಕ್ಕಿಂತ ಹೆಚ್ಚಾಗಿದ್ದು, ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರದ ಸೂಚನೆ ಮೇರೆಗೆ ಸ್ವತಂತ್ರ ಸಮಿತಿ ರಚಿಸಿ ಮೂರು ತಿಂಗಳಲ್ಲಿ ವರದಿ ಪಡೆದು ಕೇಂದ್ರಕ್ಕೆ ಸಲ್ಲಿಸಲಾಗುವುದು. ಯೋಜನಾ ವೆಚ್ಚಕ್ಕೆ ಕಾರಣವೇನು ಎಂಬುದರ ಬಗ್ಗೆ ವಿಸ್ತ್ರತವಾಗಿ ವರದಿ ರೂಪಿಸಿ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.

ಕೇಂದ್ರ ಸರ್ಕಾರ ಮತ್ತು ಬಾಹ್ಯ ಮೂಲಗಳಿಂದ ಸಾಲ ಪಡೆಯಲು ಕೇಂದ್ರದಿಂದ ಒಪ್ಪಿಗೆ ದೊರೆತ ಬಳಿಕ ರಾಜ್ಯ ಸರ್ಕಾರ ಕಳೆದ ವರ್ಷ ಡಿಸೆಂಬರ್‌ 24ರಂದು ತನ್ನ ಒಪ್ಪಿಗೆ ನೀಡಿತ್ತು. ಬಳಿಕ ಕಾಳೇನಅಗ್ರಹಾರ-ನಾಗವಾರ ‘ಗುಲಾಬಿ’ ಮಾರ್ಗ ಯೋಜನೆಯ ಮಾದರಿಯಾಗಿ ಇಟ್ಟುಕೊಂಡು ಬಿಎಂಆರ್‌ಸಿಎಲ್‌ ಕೆಂಪು ಮಾರ್ಗದ ಯೋಜನೆಯ ವರದಿಯನ್ನು ತಯಾರಿಸಿತ್ತು.

ಭೂಸ್ವಾಧೀನ, ಸುರಂಗದ ಒಳಗಿನ ಮಾರ್ಗ ಹಾಗೂ ನಿಲ್ದಾಣ, ರೈಲುಗಳು, ಕಮಾಂಡ್‌ ಸೆಂಟರ್‌ ಸೇರಿದಂತೆ ಎಲ್ಲವನ್ನು ಒಳಗೊಂಡು ವರದಿ ಸಲ್ಲಿಸಲಾಗಿತ್ತು. ಆದರೆ, ಈಗ ಯೋಜನೆಗೆ ಕೇಂದ್ರದ ಒಪ್ಪಿಗೆ ಸಿಗದಿರುವುದು ಕಾಮಗಾರಿ ಆರಂಭಕ್ಕೆ ವಿಳಂಬವಾಗಲಿದೆ. 2030ರ ವೇಳೆಗೆ ಈ ಮಾರ್ಗ ರೂಪಿಸಿಕೊಳ್ಳಲು ಯೋಜನೆ ರೂಪಿಸಿಕೊಳ್ಳಲಾಗಿತ್ತು. ಇದೀಗ ಒಂದು ವರ್ಷ ವಿಳಂಬ ಆಗಬಹುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೆಂಪು ಮಾರ್ಗ: ಕೆಂಪು ಮಾರ್ಗದಲ್ಲಿ 4 ಇಂಟರ್‌ಚೇಂಜ್‌ ಸೇರಿ ಒಟ್ಟು 28 ನಿಲ್ದಾಣಗಳು ಇರಲಿವೆ. ಹೆಬ್ಬಾಳದಲ್ಲಿ ಕೇಸರಿ ಮತ್ತು ನೀಲಿ ಮಾರ್ಗ, ಕೆ.ಆರ್‌.ಸರ್ಕಲ್‌ನಲ್ಲಿ ನೇರಳೆ ಮಾರ್ಗ, ಡೇರಿ ಸರ್ಕಲ್‌ನಲ್ಲಿ ಗುಲಾಬಿ ಮಾರ್ಗ ಮತ್ತು ಆಗರದಲ್ಲಿ ಪುನಃ ನೀಲಿ ಮಾರ್ಗವನ್ನು ಕೆಂಪು ಮಾರ್ಗ ಸಂಧಿಸಲಿದ್ದು, ಇಂಟರ್‌ಚೇಂಜ್‌ ನಿಲ್ದಾಣಗಳು ತಲೆ ಎತ್ತಲಿವೆ.

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ