ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷೆಗಿಂತ ಜಾಗೃತಿ ಮುಖ್ಯ: ಸಚಿವ ಸಂತೋಷ್‌ ಲಾಡ್‌

Kannadaprabha News   | Kannada Prabha
Published : Jun 13, 2025, 06:47 AM IST
Santosh lad

ಸಾರಾಂಶ

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ವಿಚಾರದಲ್ಲಿ ಶಿಕ್ಷೆ, ದಂಡ ವಿಧಿಸುವುದಕ್ಕಿಂತ ನಿರಂತರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅಭಿಪ್ರಾಯಪಟ್ಟರು. 

ಬೆಂಗಳೂರು (ಜೂ.13): ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ವಿಚಾರದಲ್ಲಿ ಶಿಕ್ಷೆ, ದಂಡ ವಿಧಿಸುವುದಕ್ಕಿಂತ ನಿರಂತರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅಭಿಪ್ರಾಯಪಟ್ಟರು. ಕಾರ್ಮಿಕ ಇಲಾಖೆ ಹಾಗೂ ರಾಜ್ಯ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯಿಂದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರಯುಕ್ತ ಗುರುವಾರ ಮಹಾತ್ಮಾಗಾಂಧಿ ಉದ್ಯಾನವನದಲ್ಲಿ ಆಯೋಜಿಸಿದ್ದ ಬಾಲಕಾರ್ಮಿಕ ನಿರ್ಬಂಧ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು.

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸರ್ಕಾರ ಬದ್ಧವಾಗಿದೆ. 1986 ರಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಬಂಧ ಕಾನೂನು ಜಾರಿಗೊಳಿಸಿ ಬಳಿಕ 2016ರಲ್ಲಿ ತಿದ್ದುಪಡಿ ತಂದು ಕಾನೂನನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. 14 ವರ್ಷದೊಳಗಿನವರಿಗೆ ಬಾಲಕಾರ್ಮಿಕ, 14ರಿಂದ 18ರವರೆಗೆ ಕಿಶೋರ ಕಾರ್ಮಿಕರು ಎನ್ನಲಾಗುತ್ತಿದೆ. ಈ ಕಾನೂನು ಉಲ್ಲಂಘಿಸಿದವರಿಗೆ 6 ತಿಂಗಳಿಂದ 2ವರ್ಷದವರೆಗೆ ಜೈಲು, ₹20 ಸಾವಿರದಿಂದ ₹50 ಸಾವಿರವರೆಗೆ ದಂಡ ವಿಧಿಸಲಾಗುತ್ತದೆ. ಪದೇಪದೆ ನಿಯಮ ಉಲ್ಲಂಘಿಸಿದರೆ ಕಡ್ಡಾಯ 1 ವರ್ಷದಿಂದ 3 ವರ್ಷದವರಗೆ ಜೈಲುಶಿಕ್ಷೆಗೆ ಅವಕಾಶವಿದೆ ಎಂದರು.

ಟಾಸ್ಕ್‌ಫೋರ್ಸ್‌ ರಚನೆ: ಬಾಲಕಾರ್ಮಿಕರ ಮೇಲೆ ಕಣ್ಣಿಡಲು 11 ಇಲಾಖೆಗಳು ಸೇರಿ ಇದಕ್ಕಾಗಿ ಟಾಸ್ಕ್‌ಫೋರ್ಸ್ ರಚಿಸಲಾಗಿದೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಆಗಬೇಕಾದರೆ ಶಿಕ್ಷೆಗೆ ಒಳಪಡಿಸುವುದಕ್ಕಿಂತ ಹೆಚ್ಚಾಗಿ ಜಾಗೃತಿ ಮೂಡಿಸಬೇಕು. ಇದು ಕೇವಲ ಒಂದು ದಿನ ಆಚರಿಸಿ ಬಿಡುವ ಕಾರ್ಯಕ್ರಮ ಅಲ್ಲ. ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಇದರ ಬಗ್ಗೆ ನಿರಂತರವಾಗಿ ಮುತುವರ್ಜಿ ವಹಿಸಬೇಕು. ಮುಖ್ಯವಾಗಿ ಊರ ಹೊರವಲಯದ ಡಾಭಾ, ಹೊಟೇಲ್‌ಗಳು ಸೇರಿ ಮೆಕ್ಯಾನಿಕ್‌ ಗ್ಯಾರೇಜ್‌ಗಳ ಮೇಲೆ ಕಣ್ಣಿಡಬೇಕು ಎಂದು ಸೂಚಿಸಿದರು.

ಜಾಥಾ ಎಂ.ಜಿ. ರಸ್ತೆಯ ಗಾಂಧಿ ಪ್ರತಿಮೆಯಿಂದ ಪ್ರಾರಂಭವಾಗಿ ಕಸ್ತೂರಬಾ ರಸ್ತೆ, ಕಬ್ಬನ್ ಪಾರ್ಕ್ ಮಾರ್ಗವಾಗಿ ಕೆ.ಆರ್. ಸರ್ಕಲ್ ವೃತ್ತದ ಎನ್.ಜಿ.ಓ. ಹಾಲ್‌ವರೆಗೆ ನಡೆಯಿತು. ಜಾಥಾದಲ್ಲಿ ನಟಿ ಅದಿತಿ ಪ್ರಭುದೇವ, ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತರಾದ ಡಾ.ಎನ್.ವಿ.ರವಿಕುಮಾರ್, ಕಾರ್ಮಿಕ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ, ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಜಿಲ್ಲಾಧಿಕಾರಿ ಜಿ.ಜಗದೀಶ್‌ ಸೇರಿ ಇತರರಿದ್ದರು.

2084 ಬಾಲಕಾರ್ಮಿಕರ ರಕ್ಷಣೆ: ಬಾಲ ಹಾಗೂ ಕಿಶೋರ ಕಾರ್ಮಿಕ ಕಾಯ್ದೆಯಡಿ ರಾಜ್ಯದಲ್ಲಿ ಸುಮಾರು 2084 ಬಾಲಕಾರ್ಮಿಕರನ್ನು ಪತ್ತೆಹಚ್ಚಿ ಪುನರ್ವಸತಿ ಕಲ್ಪಿಸಲಾಗಿದೆ. 705 ಪ್ರಕರಣಗಳಿಗೆ ಸಂಬಂಧಿಸಿ ವಿವಿಧ ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಬಾಲಕಾರ್ಮಿಕರಿಂದ ದುಡಿಸಿಕೊಳ್ಳುವುದು ಕಂಡುಬಂದಲ್ಲಿ 24/7 ಸಹಾಯವಾಣಿ 1098 ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು.

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ