ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟಿದ್ದ ರೈಲು| 3 ಗಂಟೆ ರೈಲು ವಿಳಂಬವಾಗಿ ಪರದಾಡಿದ ಪ್ರಯಾಣಿಕರು| ಸಾವಿರಾರು ಲೀಟರ್ ಡೀಸೆಲ್ ಸೋರಿಕೆ| ಇಂಧನ ಟ್ಯಾಂಕ್ ಹಾನಿ|ಡಿಸೇಲ್ ಟ್ಯಾಂಕ್ ಭಾರೀ ಹಾನಿ ಸಂಭವಿಸಿದ ಕಾರಣ ಸೋರಿಕೆ ತಡೆ ಅಸಾಧ್ಯ|
ಹುಬ್ಬಳ್ಳಿ/ಸವಣೂರು[ಡಿ.04]: ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಜರ್ ರೈಲಿನ ಡೀಸೆಲ್ ಟ್ಯಾಂಕ್‌ಗೆ ಹಾನಿ ಉಂಟಾಗಿ ಅಪಾರ ಪ್ರಮಾಣದ ಇಂಧನ ಸೋರಿಕೆಯಾದ ಘಟನೆ ಹಾವೇರಿ ಜಿಲ್ಲೆಯ ಯಲವಿಗಿ ರೈಲು ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ.
ಈ ವೇಳೆ ಡೀಸೆಲ್ ಅನ್ನು ಸಂಗ್ರಹಿಸಲು ಗ್ರಾಮಸ್ಥರು ಬಿಂದಿಗೆ, ಬಕೆಟ್‌ಗಳೊಂದಿಗೆ ಮುಗಿಬಿದ್ದಿದ್ದರಿಂದ ಅವರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅಲ್ಲದೇ, 3 ಗಂಟೆ ರೈಲು ವಿಳಂಬವಾಗಿ ಪ್ರಯಾಣಿಕರು ಪರದಾಡಿದ್ದಾರೆ. ಸಾವಿರಾರು ಲೀಟರ್ ಡೀಸೆಲ್ ಸೋರಿಕೆಯಾಗಿದ್ದು, ಇಂಧನ ಟ್ಯಾಂಕ್ ಹಾನಿಯಾಗಿದ್ದರ ಬಗ್ಗೆ ನೈಋುತ್ಯ ರೈಲ್ವೆ ವಲಯ ತನಿಖೆಗೆ ಮುಂದಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟಿದ್ದ(ಟ್ರೈನ್ ಸಂಖ್ಯೆ 56516) ಪ್ಯಾಸೆಂಜರ್ ರೈಲು ಗುಡಗೇರಿ- ಯಲವಿಗಿ ನಿಲ್ದಾಣದ ಮಧ್ಯೆ ಬರುವ ಲೇವಲ್ ಕ್ರಾಸಿಂಗ್ ಬಳಿ ಹಾದು ಹೋಗುವಾಗ ರೈಲಿನ ಎಂಜಿನ್‌ನಿಂದ ದೊಡ್ಡದಾದ ಶಬ್ದ ಕೇಳಿ ಬಂದಿದೆ. ರೈಲು ನಿಲ್ಲಿಸಿ ಪರಿಶೀಲಿಸಿದಾಗ ಇಂಧನ ಸೋರಿಕೆಯಾಗುತ್ತಿರುವುದು ಕಂಡು ಬಂದಿದೆ. ಸೋರಿಕೆಯಾಗುತ್ತಿದ್ದ ಇಂಧನವನ್ನು ತಡೆಯಲು ಪೈಲಟ್‌ಗಳು ಪ್ರಯತ್ನಿಸಿದರೂ ಸಾಧ್ಯವಾಗದೇ ಯಲವಿಗಿ ನಿಲ್ದಾಣಕ್ಕೆ ತಂದು ನಿಲ್ಲಿಸಿದ್ದಾರೆ.
ಡಿಸೇಲ್ ಟ್ಯಾಂಕ್ ಭಾರೀ ಹಾನಿ ಸಂಭವಿಸಿದ ಕಾರಣ ಸೋರಿಕೆ ತಡೆ ಅಸಾಧ್ಯವಾಗಿತ್ತು. ಇದನ್ನರಿತ ರೈಲ್ವೆ ಸಿಬ್ಬಂದಿ, ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರೈಲು ಪ್ರಯಾಣಿಕರಿಗೆ ತೊಂದರೆ ಉಂಟಾಗದಿರಲು ಹುಬ್ಬಳ್ಳಿಯಿಂದ ಇನ್ನೊಂದು ಎಂಜಿನ್‌ನ್ನು ಕಳುಹಿಸಿ ರೈಲನ್ನು ಬೆಂಗಳೂರಿಗೆ ಸಾಗಿಸಲಾಯಿತು. ಈ ವೇಳೆಗೆ 3 ಗಂಟೆ ವಿಳಂಬವಾಗಿತ್ತು. ಇದರಿಂದ ಪ್ರಯಾಣಿಕರು ಪರಿತಪಿಸುತ್ತಿದ್ದು ಕಂಡುಬಂದಿತು.
ಸುದ್ದಿ ತಿಳಿದ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ಸಿಕ್ಕ ಸಿಕ್ಕ ವಸ್ತುಗಳಲ್ಲಿ ಡೀಸೆಲ್ ತುಂಬಿಕೊಂಡಿದ್ದಾರೆ. 5 ಸಾವಿರಕ್ಕೂ ಅಧಿಕ ಲೀಟರ್ ಡಿಸೇಲ್ ಸೋರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾಗಿದೆ. ರೈಲು ಸಂಚರಿಸುವ ವೇಳೆ ಬಲವಾದ ಹೊಡೆತ ಬಿದ್ದ ಕಾರಣ ಇಂಧನ ಟ್ಯಾಂಕರ್ ಹಾನಿಗೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.