ಮಂಗಳೂರಿಗೆ ಬಂತು ವಿದೇಶಿ ಆನಿಯನ್..! ಅರ್ಧ ಕೆಜಿಗೂ ಹೆಚ್ಚು ತೂಗುತ್ತೆ ಒಂದು ಈರುಳ್ಳಿ

By Kannadaprabha News  |  First Published Dec 4, 2019, 7:48 AM IST

ಮಂಗಳೂರಿಗೆ ಈಜಿಪ್ಟ್‌ ಈರುಳ್ಳಿ ಬಳಿಕ ಇದೇ ಮೊದಲ ಬಾರಿಗೆ ಟರ್ಕಿ ಈರುಳ್ಳಿ ಪಾದಾರ್ಪಣೆ ಮಾಡಿದೆ. ರಾಜ್ಯದಲ್ಲಿ ಈರುಳ್ಳಿ ಅಭಾವ ತಲೆದೋರಿ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಟರ್ಕಿ ಈರುಳ್ಳಿ ಈಗ ತುಳುನಾಡಿನ ಅಡುಗೆ ಮನೆಗೆ ಲಗ್ಗೆಯಿಡಲು ಆರಂಭಿಸಿದೆ.


ಮಂಗಳೂರು(ಡಿ.04): ಮಂಗಳೂರಿಗೆ ಈಜಿಪ್ಟ್‌ ಈರುಳ್ಳಿ ಬಳಿಕ ಇದೇ ಮೊದಲ ಬಾರಿಗೆ ಟರ್ಕಿ ಈರುಳ್ಳಿ ಪಾದಾರ್ಪಣೆ ಮಾಡಿದೆ. ರಾಜ್ಯದಲ್ಲಿ ಈರುಳ್ಳಿ ಅಭಾವ ತಲೆದೋರಿ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಟರ್ಕಿ ಈರುಳ್ಳಿ ಈಗ ತುಳುನಾಡಿನ ಅಡುಗೆ ಮನೆಗೆ ಲಗ್ಗೆಯಿಡಲು ಆರಂಭಿಸಿದೆ.

ಮಂಗಳವಾರ ಬೆಳಗ್ಗೆ ಮಂಗಳೂರು ಹಳೆ ಬಂದರಿಗೆ ಸುಮಾರು 50 ಟನ್‌ನಷ್ಟುಟರ್ಕಿ ಈರುಳ್ಳಿಯನ್ನು ಅನ್‌ಲೋಡ್‌ ಮಾಡಲಾಗಿದೆ. ಇದರ ದರ ಬೆಳಗ್ಗಿನ ಹೊತ್ತು ರಖಂ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 12,000 ರು. (ಕೆಜಿಗೆ 120 ರು.) ಆಗಿದ್ದರೆ, ಮಧ್ಯಾಹ್ನ ವೇಳೆಗೆ 13,000 ರು. (ಕೆಜಿಗೆ 130)ಗೇರಿತ್ತು. ಬುಧವಾರ ಕೆಜಿಗೆ 150 ರು. ಆಗುವ ಸಾಧ್ಯತೆಯನ್ನು ಸಗಟು ವರ್ತಕರು ತಿಳಿಸಿದ್ದಾರೆ.

Latest Videos

ಆನೆ ಗಾತ್ರದ ಈರುಳ್ಳಿ:

ಟರ್ಕಿ ಈರುಳ್ಳಿ ‘ಆನೆ ಗಾತ್ರ’ದ್ದಾಗಿದ್ದು 2-3 ಈರುಳ್ಳಿ ಇಟ್ಟರೂ ಕೆ.ಜಿ.ಯಾಗುವಷ್ಟಿದೆ. ಒಂದೊಂದು ಈರುಳ್ಳಿಯೂ ಏನಿಲ್ಲವೆಂದರೂ 400-600 ಗ್ರಾಂ ತೂಗುತ್ತವೆ! ಟರ್ಕಿ ಈರುಳ್ಳಿ ಬಂದರೂ ಸದ್ಯಕ್ಕಂತೂ ದೇಶಿ ಈರುಳ್ಳಿ ಬೆಲೆ ಕಡಿಮೆಯಾಗದು ಎಂದು ಮಂಗಳೂರಿನ ಕೇಂದ್ರ ಮಾರುಕಟ್ಟೆಯ ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ.

ಮಂಗಳೂರಿನ ಕೇಂದ್ರ ಮಾರುಕಟ್ಟೆಯಲ್ಲಿ ಮಂಗಳವಾರ ದೇಶಿ ಈರುಳ್ಳಿ ಕೆಜಿಗೆ 120 ರು. ಇತ್ತು. ಬಂದರಿಗೆ ಬಂದ ಟರ್ಕಿ ಈರುಳ್ಳಿ ಮಂಗಳವಾರ ಕೇಂದ್ರ ಮಾರುಕಟ್ಟೆಗೆ ಬಂದಿಲ್ಲ. ಸಗಟು ವರ್ತಕರ ಕೈಯಲ್ಲೇ ಇತ್ತು ಎಂದು ತಿಳಿದುಬಂದಿದೆ. ಮಾರುಕಟ್ಟೆಗೆ ಬಂದರೆ ದೇಶಿ ಈರುಳ್ಳಿಗಿಂತ ಟರ್ಕಿಯದ್ದೇ ತುಟ್ಟಿಯಾಗುವ ಸಾಧ್ಯತೆಯೂ ಇದೆ.

ಗದಗದಲ್ಲಿ ಸರ್ವ ಕಾಲಿಕ ದಾಖಲೆ ಕಂಡ ಈರುಳ್ಳಿ ಬೆಲೆ

ಕಾರ್ಮಿಕರಿಗೆ ಕೆಲಸವಿಲ್ಲ: ಈರುಳ್ಳಿ ಬೆಲೆ ಗಗಗನಕ್ಕೇರಿರುವ ಬಿಸಿ ಕಾರ್ಮಿಕರಿಗೂ ತಟ್ಟಿದೆ. ಹಿಂದೆಯಾದರೆ ಮಂಗಳೂರು ಬಂದರಿನಿಂದ ನಿತ್ಯ ನೂರು ಲಾರಿಗಳು ಈರುಳ್ಳಿಯನ್ನು ಇತರ ಪ್ರದೇಶಗಳಿಗೆ ಕೊಂಡ್ಯೊಯುತ್ತಿದ್ದವು. ಆದರೆ ಬೆಲೆ ಏರಿಕೆಯಾಗಿ ಈಗ ಗ್ರಾಹಕರು ಕಡಿಮೆಯಾಗಿರುವುದರಿಂದ ಅರ್ಧಕ್ಕರ್ಧ ಲಾರಿಗಳೂ ಇಲ್ಲಿಂದ ಹೋಗುತ್ತಿಲ್ಲ. ಹೀಗಾಗಿ ಬಂದರು ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗಿ ಜೀವನೋಪಾಯಕ್ಕೂ ಕಷ್ಟಪಡುತ್ತಿದ್ದಾರೆ.

ದಳ್ಳಾಳಿಗಳ ಆಟೋಟೋಪ:

‘‘ಈರುಳ್ಳಿ ಮಧ್ಯವರ್ತಿಗಳು ಬೇಕಾಬಿಟ್ಟಿದರ ನಿಗದಿ ಮಾಡುತ್ತಿದ್ದಾರೆ. ಅವರನ್ನು ನಿಯಂತ್ರಿಸುವ ಯಾವ ಕ್ರಮಗಳೂ ನಡೆಯುತ್ತಿಲ್ಲ. ಮಂಗಳೂರು ಹಳೆ ಬಂದರಿನ ವಹಿವಾಟು ಎಪಿಎಂಸಿ ನಿಯಂತ್ರಣಕ್ಕೇ ಸಿಗದಷ್ಟುಬೆಳೆದಿದೆ. ಹಿಂದೆಯಾದರೆ ಹುಬ್ಬಳ್ಳಿ, ಪೂನಾ, ಇಂದೋರ್‌ ಕಡೆಯಿಂದ ಬರುವ ಈರುಳ್ಳಿಗೆ ಅದರ ಟ್ರಾನ್ಸ್‌ಪೋರ್ಟ್‌ ಖರ್ಚಿಗೆ ತಕ್ಕಂತೆ ಬೆಲೆ ನಿಗದಿ ಮಾಡಲಾಗುತ್ತಿತ್ತು. ಅದೇ ರೀತಿ ಟರ್ಕಿ ಈರುಳ್ಳಿಗೂ ಬೆಲೆ ನಿಗದಿಯಾಗಿತ್ತು. ಆದರೆ ಈಗ ಏಕಾಏಕಿ ಬೆಲೆ ಏರಿಕೆಯಾಗುತ್ತಲೇ ಇದೆ’’ ಎಂದು ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಇಮ್ತಿಯಾಜ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಇಂದು ಕಾರ್ಮಿಕರ ಪ್ರತಿಭಟನೆ

ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ವರ್ತಕರು ಮತ್ತು ದಳ್ಳಾಲಿಗಳು, ಕಾಳಸಂತೆಕೋರರನ್ನು ನಿಯಂತ್ರಿಸುವ ಯಾವ ಕ್ರಮಗಳೂ ನಡೆಯುತ್ತಿಲ್ಲ ಎಂದು ಆರೋಪಿಸಿ ಬಂದರು ಶ್ರಮಿಕರ ಸಂಘದ ವತಿಯಿಂದ ಡಿ.5ರಂದು ಬೆಳಗ್ಗೆ 9.30ಕ್ಕೆ ಹಳೆ ಬಂದರು ಸಗಟು ಮಾರುಕಟ್ಟೆಯ ಕಾರ್ಮಿಕರ ಕಟ್ಟೆಬಳಿ ಕಾರ್ಮಿಕರ ಪ್ರತಿಭಟನೆ ಆಯೋಜಿಸಲಾಗಿದೆ.

ಕೆ.ಜಿ. ಈರುಳ್ಳಿಗೆ 100 ರೂ: ಸಾರ್ವಕಾಲಿಕ ದಾಖಲೆ!

click me!