ಹಲವೆಡೆ ತೆಗ್ಗು ಪ್ರದೇಶ ಜಲಾವೃತವಾಗಿದ್ದು, ಗ್ರಾಮೀಣದಲ್ಲಿ ಮನೆಗಳು ಬೀಳುವ ಆತಂಕ ಹೆಚ್ಚಾಗಿದೆ.
ಹುಬ್ಬಳ್ಳಿ(ಜು.15): ಜಿಲ್ಲಾದ್ಯಂತ ಮಳೆ ಮುಂದುವರಿದಿದ್ದು, ಗುರುವಾರ ನಸುಕಿನಿಂದ ಮಧ್ಯಾಹ್ನದ ವರಗೆ ಅಬ್ಬರಿಸಿದ ವರುಣ ಬಳಿಕ ಶಾಂತನಾಗಿದ್ದಾನೆ. ಹಲವೆಡೆ ತೆಗ್ಗು ಪ್ರದೇಶ ಜಲಾವೃತವಾಗಿದ್ದು, ಗ್ರಾಮೀಣದಲ್ಲಿ ಮನೆಗಳು ಬೀಳುವ ಆತಂಕ ಹೆಚ್ಚಾಗಿದೆ. ನಸುಕಿನಿಂದ ಬೆಳಗ್ಗೆ ವರೆಗೆ ನಿರಂತರವಾಗಿ ಮಳೆ ಸುರಿಯಿತು. ಪರಿಣಾಮ ಧಾರವಾಡದ ನರೇಂದ್ರ ಗ್ರಾಮದ ಹೊಸಕೆರೆ ಕೋಡಿ ಬಿದ್ದಿದೆ. ಹುಬ್ಬಳ್ಳಿಯ ಬೆಳಗಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣ ಜಲಾವೃತವಾಗಿದ್ದು, ವಿದ್ಯಾರ್ಥಿಗಳು ಪರದಾಡಿದ್ದಾರೆ. ಕುಸುಗಲ್, ಬ್ಯಾಹಟ್ಟಿ ಭಾಗದಲ್ಲಿ ಗ್ರಾಮೀಣ ಭಾಗದಲ್ಲಿ ಹಲವು ಮನೆಗಳ ಗೋಡೆ ಧರಾಶಾಹಿಯಾಗಿದೆ. ಹತ್ತಿ, ಉದ್ದು, ಹೆಸರು ಬಿತ್ತನೆ ಮಾಡಿರುವ ಜಮೀನಿನಲ್ಲಿ ನೀರು ನಿಲ್ಲುವ ಆತಂಕ ರೈತರಲ್ಲಿ ಮನೆ ಮಾಡಿದ್ದು, ಕಳೆ ಹೆಚ್ಚಾಗುವ ಸಾಧ್ಯತೆ ಇದೆ.
ಹುಬ್ಬಳ್ಳಿ-ಶಿರಗುಪ್ಪಿಯಲ್ಲಿ 3, ಸುಳ್ಳ, ಇಂಗಳಳ್ಳಿ, ಬೆಳಗಲಿ ಹಾಗೂ ಬ್ಯಾಹಟ್ಟಿಯಲ್ಲಿ ತಲಾ 2, ಅಗಡಿ ಮತ್ತು ಬಮ್ಮಸಮುದ್ರದಲ್ಲಿ 1 ಮನೆಗಳ ಗೋಡೆ ಉರುಳಿಬಿದ್ದಿವೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆಯಿಂದ ನೆನೆದ ಮಣ್ಣಿನ ಗೋಡೆಗಳು ಉರುಳುತ್ತಿದ್ದು, ನಿವಾಸಿಗಳಲ್ಲಿ ಭೀತಿ ಮೂಡಿಸಿದೆ. ಸಂಬಂಧಿಕರ ಮನೆಗೆ ತೆರಳಿ ನಿವಾಸಿಗಳು ರಾತ್ರಿಯನ್ನು ಕಳೆದಿದ್ದಾರೆ.
ಮಲೆನಾಡಿನಲ್ಲಿ ಮತ್ತೆ ಮಳೆಯಬ್ಬರ: ಅನೇಕ ಕಡೆ ರಸ್ತೆ, ಭೂಕುಸಿತ
ಮಳೆಯಿಂದ ನೆನೆದ ಮನೆ ಗೋಡೆ ಉರುಳಿಬಿದ್ದಿದ್ದು, ಅದೃಷ್ಟವಶಾತ್ ಪಾರಾಗಿದ್ದೇವೆ. ಸರ್ಕಾರ ಬಿದ್ದ ಮನೆಗೆ ಬಿಡಿಗಾಸು ಪರಿಹಾರ ನೀಡದೆ ಅಧಿಕಾರಿಗಳ ಮೂಲಕ ಸೂಕ್ತ ಪರಿಶೀಲನೆ ನಡೆಸಿ ಹಣಸಹಾಯ ಮಾಡಬೇಕು ಎಂದು ಅಗಸಿ ಗ್ರಾಮದ ಚನ್ನಬಸವ್ವ ಕಣವಿ ಒತ್ತಾಯಿಸಿದ್ದಾರೆ. ಮನೆ ಗೋಡೆ ಏಕಾಏಕಿ ಕುಸಿದುಬಿದ್ದು ಜೀವನ ಹೇಗೆ ಎಂಬ ಪ್ರಶ್ನೆ ಮೂಡಿಸಿದೆ ಎಂದು ಬೆಳಗಲಿಯ ಹಸನಸಾಬ ಸಣ್ಣರಾಜೆಸಾಬ ಬೇಸರ ತೋಡಿಕೊಂಡರು.
ನಗರದಲ್ಲಿ ಮಳೆಯಿಂದಾಗಿ ತೆಗ್ಗು ಪ್ರದೇಶದಲ್ಲಿ ನೀರು ನಿಲ್ಲುತ್ತಿದೆ. ಇಲ್ಲಿನ ಲೋಕಪ್ಪನ ಹಕ್ಕಲು, ಎಸ್.ಎಂ. ಕೃಷ್ಣ ನಗರ, ಅಯೋಧ್ಯಾನಗರ, ಮಂಟೂರು ರಸ್ತೆ, ನೇಕಾರ ನಗರ, ಮ್ಯಾದರ ಓಣಿ, ಆನಂದ ನಗರ, ಕುಸುಗಲ್ ರಸ್ತೆಯ ಭವಾನಿ ನಗರದಲ್ಲಿ ನೀರು ನಿಲ್ಲುತ್ತಿದೆ. ನವನಗರದ ಬ್ಯಾಂಕರ್ಸ್ ಕಾಲನಿ ರಸ್ತೆಯಲ್ಲೂ ಹೆಚ್ಚಿನ ನೀರು ನಿಲ್ಲುತ್ತಿದೆ. ಅದರಂತೆ ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲನಿ ರಸ್ತೆ, ಹೊಸ ಬಸ್ ನಿಲ್ದಾಣದಿಂದ ಮೆಹಬೂಬ ನಗರಕ್ಕೆ ತೆರಳುವ ರಸ್ತೆ ಸಂಚರಿಸಲು ಅಸಾಧ್ಯವಾಗಿದೆ. ಫ್ಲೈಓವರ್ ಸೇರಿ ಇತರೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಗೋಕುಲ, ವಿದ್ಯಾನಗರ ರಸ್ತೆ ಹಾಗೂ ಹಲವೆಡೆ ಮಳೆಯಿಂದ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದೆ.
ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕುಗಳಲ್ಲಿ ದಿನವಿಡಿ ಜಿಟಿಜಿಟಿ ಮಳೆ ಸುರಿದಿದೆ. ಇಲ್ಲಿನ ಬೆಣ್ಣಿಹಳ್ಳ, ತುಪ್ಪರಿಹಳ್ಳ, ರಾಡಿಹಳ್ಳಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದೆ. ಹಳ್ಳಗಳ ಇಕ್ಕೆಲದ ಜಮೀನುಗಳಿಗೆ ನೀರು ನುಗ್ಗುವ ಭೀತಿ ಉಂಟಾಗಿದೆ. ಕುಂದಗೋಳ ತಾಲೂಕಿನಲ್ಲಿಯೂ ಸಾಕಷ್ಟುಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.