ಬಿಬಿಎಂಪಿ 243 ವಾರ್ಡ್ ಅಂತಿಮ, 24 ವಾರ್ಡ್‌ ಹೆಸರು ಬದಲಿಸಿ ಸರ್ಕಾರ ಆದೇಶ

By Kannadaprabha News  |  First Published Jul 15, 2022, 7:53 AM IST

ಬಿಬಿಎಂಪಿ ವಾರ್ಡ್‌ವಾರು ಕ್ಷೇತ್ರ ಮರು ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಗುರುವಾರ ಪ್ರಕಟಿಸಿದೆ. 198 ವಾರ್ಡ್‌ಗಳನ್ನು 243 ವಾರ್ಡ್‌ಗಳಾಗಿ ಮರು ವಿಂಗಡಿಸಿದ್ದು, ವಾರ್ಡ್‌ವೊಂದಕ್ಕೆ ದಿವಂಗತ ನಟ ಪುನೀತ್‌ ರಾಜಕುಮಾರ್‌ ಹೆಸರಿಡಲಾಗಿದೆ.


ಬೆಂಗಳೂರು(ಜು.15): 24 ವಾರ್ಡ್‌ಗಳ ಹೆಸರು ಬದಲಾವಣೆ, ವಾರ್ಡ್‌ವೊಂದಕ್ಕೆ ದಿವಂಗತ ನಟ ಪುನೀತ್‌ ರಾಜಕುಮಾರ್‌ ಹೆಸರು ನಾಮಕರಣ ಮಾಡುವುದರೊಂದಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಾರ್ಡ್‌ವಾರು ಕ್ಷೇತ್ರ ಮರು ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಗುರುವಾರ ಪ್ರಕಟಿಸಿದೆ.

ವಾರ್ಡ್‌ಗಳ ಮರು ವಿಂಗಡಣೆದ ವರದಿಗೆ ಸಲ್ಲಿಕೆಯಾದ 3,833 ಆಕ್ಷೇಪಣೆಗಳನ್ನು ಪರಿಶೀಲಿಸಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತು. ಅದರಂತೆ ಅಪರ ಮುಖ್ಯ ಕಾರ್ಯದರ್ಶಿಗಳು ಜುಲೈ 11 ಮತ್ತು 12ರಂದು ಸಭೆ ನಡೆಸಿ ಆಕ್ಷೇಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಶಿಫಾರಸ್ಸು ಮಾಡಿದ ವರದಿಯನ್ನು ಒಪ್ಪಿಕೊಂಡು ಗುರುವಾರ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಪತ್ರದ ಮೂಲಕ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ.

Tap to resize

Latest Videos

ರಾಜ್ಯ ಸರ್ಕಾರವು ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಬೆಂಗಳೂರು ಅಭಿವೃದ್ಧಿ ಮಂಡಳಿ ಹಾಗೂ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ 2021ರ ಜನವರಿಯಲ್ಲಿ ವಾರ್ಡ್‌ಗಳ ಪುನರ್‌ ವಿಂಗಡಣಾ ಸಮಿತಿ ರಚನೆ ಮಾಡಿ 198 ವಾರ್ಡ್‌ಗಳನ್ನು 243 ವಾರ್ಡ್‌ಗಳಾಗಿ ಮರು ವಿಂಗಡಿಸಿ ವರದಿ ನೀಡುವಂತೆ ಸೂಚಿಸಿತ್ತು. ಸಮಿತಿಯು ಕಳೆದ ಜೂನ್‌ 9ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಕರಡು ವರದಿ ಒಪ್ಪಿರುವ ರಾಜ್ಯ ಸರ್ಕಾರ ವಾರ್ಡ್‌ ಮರು ವಿಂಗಡಣೆ ಸಂಬಂಧಿಸಿದಂತೆ ಜೂನ್‌ 23ರಂದು ಕರಡು ವರದಿ ಪ್ರಕಟಿಸಿ 15 ದಿನದಲ್ಲಿ (ಜುಲೈ 7) ಸಾರ್ವಜನಿಕ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು.

ವಾರ್ಡ್‌ಗೆ ಪುನೀತ್‌ ಹೆಸರು: ನಟ ಪುನೀತ್‌ ರಾಜ್‌ ಕುಮಾರ್‌ ಅವರ ಸಮಾಧಿ ಇರುವ ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದ ಕಾವೇರಿ ನಗರ ವಾರ್ಡ್‌ಗೆ ಪುನೀತ್‌ ರಾಜ್‌ಕುಮಾರ್‌ ಅವರು ಹೆಸರನ್ನು ಇಡಲಾಗಿದೆ. ಪುನೀತ್‌ ರಾಜ್‌ಕುಮಾರ್‌ ಅವರ ಹೆಸರನ್ನು ನಾಮಕರಣ ಮಾಡಬೇಕೆಂಬ ಸ್ಥಳೀಯರ ಭಾವನೆಗಳಿಗೆ ಸರ್ಕಾರ ಸ್ಪಂದಿಸಿದೆ.

ಎರಡು ವಾರ್ಡ್‌ಗೆ ಒಂದೇ ಹೆಸರು: ಕರಡು ವರದಿಯಲ್ಲಿ ವಾರ್ಡ್‌ ಸಂಖ್ಯೆ 180ರ ವನ್ನಾರ್‌ ಪೇಟೆ ವಾರ್ಡ್‌ ಹೆಸರನ್ನು ಅಂತಿಮ ಅಧಿಸೂಚನೆಯಲ್ಲಿ ಅಗರ ಎಂದು ಬದಲಾವಣೆ ಮಾಡಲಾಗಿದೆ. ವಾರ್ಡ್‌ ಸಂಖ್ಯೆ 230 ವಾರ್ಡ್‌ಗೆ ಕರಡು ಅಧಿಸೂಚನೆಯಲ್ಲಿ ಪ್ರಕಟಿಸಿದಂತೆ ಅಗರ ಎಂದು ಮುಂದುವರೆಸಲಾಗಿದೆ. ಈ ಮೂಲಕ ಎರಡು ವಾರ್ಡ್‌ಗೆ ಒಂದೇ ಹೆಸರು ಇಟ್ಟಂತಾಗಿದೆ.

2011ರ ಜನಗಣತಿಯಂತೆ ವಾರ್ಡ್‌ ಮರು ವಿಂಗಡಣೆ: 2011ರ ಜನಗಣತಿಯ ಆಧಾರದ ಮೇರೆಗೆ ವಾರ್ಡ್‌ ಮರು ವಿಂಗಡಣೆ ಮಾಡಲಾಗಿದೆ. ವರದಿಯಲ್ಲಿ ಈವರೆಗೆ ಇದ್ದ 198 ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿದ್ದು, ಪ್ರತಿ ವಾರ್ಡ್‌ಗಳ ಸಂಖ್ಯೆ ಮತ್ತು ವಾರ್ಡ್‌ಗಳ ಹೆಸರು ಹಾಗೂ ಪ್ರತಿ ವಾರ್ಡ್‌ಗಳ ವ್ಯಾಪ್ತಿಯ ಗಡಿಗಳ ಚಕ್ಕಬಂದಿಯ ವಿವರಗಳನ್ನು ನೀಡಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಲಕ್ಷ್ಮೇಪುರ ಗ್ರಾಮ, ಕಾಂಚಿರಾಮ್‌ ನಗರ (ಅಂಬೇಡ್ಕರ್‌ ನಗರ) ಎಂಬ ಗ್ರಾಮಗಳು ಬಿಬಿಎಂಪಿಗೆ ಸೇರ್ಪಡೆಯಾಗಲಿವೆ. ಇದರಿಂದ 6 ಸಾವಿರ ಜನಸಂಖ್ಯೆ ಹೆಚ್ಚಲಿದೆ. ಉಳಿದಂತೆ ಹಳೆಯ 198 ವಾರ್ಡ್‌ ಗಡಿಯೊಳಗೆ ಬಿಬಿಎಂಪಿ ವಾರ್ಡ್‌ ಮರುವಿಂಗಡಿಸಿ 243ಕ್ಕೆ ಹೆಚ್ಚಿಸಲಾಗಿದೆ.

ಅಂತಿಮ ವರದಿಯಲ್ಲಿ ಬದಲಾದ ವಾರ್ಡ್‌ಗಳ ಹೆಸರು

ವಾರ್ಡ್‌ ಸಂಖ್ಯೆ - ಅಂತಿಮ ವರದಿಯ ಹೆಸರು - ಕರಡು ವರದಿಯ ಹೆಸರು

28 ದೊಡ್ಡ ಬಿದರಕಲ್ಲು ಹಂದ್ರಹಳ್ಳಿ

33 ಕೆಂಗೇರಿ ಕೆಂಗೇರಿ ಉಪನಗರ

35 ಹೆಮ್ಮಿಗೆಪುರ ತಲಘಟ್ಟಪುರ

36 ಛತ್ರಪತಿ ಶಿವಾಜಿ ಕನ್ನೇಶ್ವರ ರಾಮ

37 ಚಾಣಕ್ಯ ವೀರಮದಕರಿ

39 ಕನ್ನೇಶ್ವರ ರಾಮ ಚಾಣಕ್ಯ

40 ವೀರಮದಕರಿ ಛತ್ರಪತಿ ಶಿವಾಜಿ

55 ಪುನೀತ್‌ ರಾಜ್‌ಕುಮಾರ್‌ ಕಾವೇರಿ ನಗರ

69 ಮನೋರಾಯನಪಾಳ್ಯ ಚೋಳನಗರ

77 ದೇವರಜೀವನಹಳ್ಳಿ ಮೋದಿ ಗಾರ್ಡನ್‌

84 ರಾಮಮೂರ್ತಿ ನಗರ ಕೌದೆಕೆನಹಳ್ಳಿ

85 ವಿಜಿನಾಪುರ ವಿಜ್ಞಾನಪುರ

87 ಮೇಡಹಳ್ಳಿ ತಂಬುಚಟ್ಟಿಪಾಳ್ಯ

93 ಎಚ್‌ಎಎಲ್‌ ವಿಮಾನನಿಲ್ದಾಣ

95 ನಾಗವಾರ ಗೋವಿಂದನಪುರ

153 ನಾಗರಬಾವಿ ಕಲ್ಯಾಣ ನಗರ

154 ಚಂದ್ರಲೇಔಟ್‌ ನಾಗರಬಾವಿ

180 ಅಗರ ವನ್ನಾರ್‌ಪೇಟೆ

183 ನೀಲಸಂದ್ರ ಆಸ್ಟಿನ್‌ಟೌನ್‌

184 ವನ್ನಾರ್‌ಪೇಟೆ ನೀಲಸಂದ್ರ

220 ಯಲಚೇನಹಳ್ಳಿ ಕನಕನಗರ

221 ಕೋಣನಕುಂಟೆ ಯಲಚೇನಹಳ್ಳಿ

232 ಎಚ್‌ಎಸ್‌ಆರ್‌ ಸಿಂಗಸಂದ್ರ ಎಚ್‌ಎಸ್‌ಆರ್‌ ಲೇಔಟ್‌

241 ಪುಟ್ಟೇನಹಳ್ಳಿ ಸಾರಕ್ಕಿ ಕೆರೆ ಸಾರಕ್ಕಿ ಕೆರೆ

click me!