ಮಹಾಮಾರಿ ಕೊರೋನಾಗೆ ಬಿಪಿ, ಶುಗರ್‌ ರೋಗಿಗಳೇ ಅಧಿಕ ಬಲಿ!

By Kannadaprabha News  |  First Published Sep 25, 2020, 12:41 PM IST

60 ವರ್ಷ ಮೇಲ್ಪಟ್ಟ ಈ ರೋಗಿಗಳೇ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ಸಾವು| ಶೇ. 47 ರಷ್ಟು ಮಧುಮೇಹಿಗಳು, ಶೇ. 45 ರಷ್ಟು ಸಕ್ಕರೆ ಕಾಯಿಲೆ ಹೊಂದಿದ ಸೋಂಕಿತರು ಸಾವು| ರಾಜ್ಯದ ಪೈಕಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಶೇ. 34 ರಷ್ಟು ಸೋಂಕಿತರು ಸಾವು| ಮಾ. 31ರಿಂದ ಸೆ. 1ರ ವರೆಗೆ ನಡೆಸಿದ ಅಧ್ಯಯನದಿಂದ ನಿಜಾಂಶ ಬಯಲು| 


ಬಸವರಾಜ ಹಿರೇಮಠ

ಧಾರವಾಡ(ಸೆ.25): ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಮಧುಮೇಹ (ಸಕ್ಕರೆ ಕಾಯಿಲೆ), ರಕ್ತದ ಒತ್ತಡ (ಬಿಪಿ) ಕಾಯಿಲೆಗಳಿಂದ ಬಳಲುತ್ತಿರುವವರೇ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ!

Tap to resize

Latest Videos

ಇಡೀ ಜಗತ್ತಿಗೆ ಕಂಟಕವಾಗಿರುವ ಕೋವಿಡ್‌-19 ರಾಜ್ಯದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದ ಅಡಿ ಜೆಎಸ್ಸೆಸ್‌ ಜನಸಂಖ್ಯಾ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಜ್ಯೋತಿ ಹಳ್ಳದ ಅವರು ಮಾ. 31ರಿಂದ ಸೆ. 1ರ ವರೆಗೆ ನಡೆಸಿದ ಅಧ್ಯಯನದಿಂದ ಈ ಸಂಗತಿ ತಿಳಿದು ಬಂದಿದೆ.

ಅಧ್ಯಯನಕ್ಕೆ ಒಳಪಡಿಸಿದ 5700 ಮರಣ ಪ್ರಕರಣಗಳಲ್ಲಿ ಶೇ. 72ರಷ್ಟು ಜನರಿಗೆ ಸೋಂಕಿನ ಜತೆ ಬೇರೆ ತೀವ್ರತರ ಕಾಯಿಲೆಗಳು ಇದ್ದಿರುವುದು ಕಂಡು ಬಂದಿದೆ. ಮಧುಮೇಹ ಹೊಂದಿದ ಕೊರೋನಾ ಸೋಂಕಿತರು ಶೇ. 47ರಷ್ಟು ಮೃತಪಟ್ಟಿದ್ದರೆ, ರಕ್ತದ ಒತ್ತಡದಿಂದ ಬಳಲುತ್ತಿರುವ ಶೇ. 45ರಷ್ಟು ಸೋಂಕಿತರು ಮೃತಪಟ್ಟಿದ್ದಾರೆ. ಹಾಗೆಯೇ, ಹೃದಯ ಸಂಬಂಧಿ ಕಾಯಿಲೆ ಹೊಂದಿದ ಸೋಂಕಿತರು ಶೇ. 12, ಕಿಡ್ನಿ ಸಮಸ್ಯೆ ಶೇ. 8, ಉಸಿರಾಟದ ಸಮಸ್ಯೆ ಶೇ. 3, ಪಾಶ್ರ್ವವಾಯು ಹಾಗೂ ಯಕೃತ್ತು ಸಮಸ್ಯೆ ಶೇ .2ರಷ್ಟುಸೋಂಕಿತರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕೊರೋನಾ ಮಹಾಮಾರಿ : ಭಾರತೀಯರಿಗೆ ಇದು ಗುಡ್ ನ್ಯೂಸ್

ಶೇ. 7 ರಷ್ಟು ಮನೆಯಲ್ಲಿ ಸಾವು:

ಸಾಮಾನ್ಯವಾಗಿ ಅಧಿಕ ಪ್ರಮಾಣದಲ್ಲಿ ಸೋಂಕಿತರು ಆಸ್ಪತ್ರೆಯಲ್ಲಿಯೇ ಅಸುನೀಗಿದರೂ ಶೇ. 7ರಷ್ಟು ಸೋಂಕಿತರು ಮನೆಯಲ್ಲಿ ಮೃತರಾಗಿದ್ದಾರೆ. ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಮನೆಯಲ್ಲಿ ಮೃತಪಟ್ಟವರ ಸಂಖ್ಯೆ ತುಸು ಹೆಚ್ಚಾಗಿದೆ. ಇನ್ನು, ವಯೋಮಾನಕ್ಕೆ ಅನುಗುಣವಾಗಿ ವಿಶ್ಲೇಷಿಸಿದಾಗ ಶೇ. 56 ರಷ್ಟು 60 ವರ್ಷ ಮೇಲ್ಪಟ್ಟವರು, ನಂತರದ ಸ್ಥಾನದಲ್ಲಿ 40ರಿಂದ 59 ವಯೋಮಾನದ ಶೇ. 37ರಷ್ಟು ರೋಗಿಗಳು ಮರಣ ಹೊಂದಿದ್ದಾರೆ.

ರಾಜಧಾನಿಯಲ್ಲಿ ಹೆಚ್ಚಿನ ಸಾವು

ರಾಜ್ಯದ ಪೈಕಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಶೇ. 34ರಷ್ಟು ಸಾವಿನ ಪ್ರಮಾಣವಿದೆ. ಬೆಂಗಳೂರು ಸೇರಿದಂತೆ ಮೈಸೂರು, ದಕ್ಷಿಣ ಕನ್ನಡ, ಧಾರವಾಡ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಶೇ. 62 ರಷ್ಟಿದೆ. ಹಾಗೆಯೇ, ಒಂದು ಲಕ್ಷ ಜನಸಂಖ್ಯೆಗೆ ಸಾವಿನ ಪ್ರಮಾಣ ಸಹ ಅಧ್ಯಯನದಲ್ಲಿ ಲೆಕ್ಕ ಹಾಕಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ 19 ಸಾವಿನ ಪ್ರಕರಣಗಳು ಸಂಭವಿಸಿವೆ. ಒಂದು ಲಕ್ಷ ಜನಸಂಖ್ಯೆಗೆ ಹೋಲಿಸಿದಾಗ ಒಂದು ಸಾವಿನ ಪ್ರಕರಣದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಸಾವು ಸಂಭವಿಸಿದ ಜಿಲ್ಲೆ ಎಂದು ಡಾ. ಜ್ಯೋತಿ ಹಳ್ಳದ ಅಧ್ಯಯನದಲ್ಲಿ ವಿಶ್ಲೇಷಿಸಿದ್ದಾರೆ.

ಇನ್ನೊಂದು ಮಹತ್ವದ ಸಂಗತಿ ಏನೆಂದರೆ, ಒಟ್ಟಾರೆ ಕೋವಿಡ್‌ಗೆ ಮೃತ ಪಟ್ಟವರಲ್ಲಿ ಶೇ. 68ರಷ್ಟುಪುರುಷರು. ಆದರೆ, ಮಹಿಳೆಯರ ಸಂಖ್ಯೆ ಶೇ. 32 ರಷ್ಟು ಮಾತ್ರವಿದೆ. ವಿಶೇಷ ಎಂದರೆ ಚಿತ್ರದುರ್ಗ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಮಹಿಳೆಯರ ಸಾವಿರ ಪ್ರಮಾಣ ಮಾತ್ರ ಹೆಚ್ಚಿದೆ. ಇಡೀ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ 1.7 ರಷ್ಟಿದ್ದರೆ, ಬೀದರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದರ ಪ್ರಮಾಣ ಶೇ 2.9 ರಷ್ಟಿದೆ. ಬಾಗಲಕೋಟೆ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಶೇ 1.2 ರಷ್ಟಿದೆ ಎನ್ನುತ್ತಾರೆ ಡಾ. ಜ್ಯೋತಿ ಹಳ್ಳದ ಅವರು.

ಜಿಲ್ಲಾವಾರು ಮರಣ ಪ್ರಮಾಣ

ಬೆಂಗಳೂರು ನಗರ ಶೇ. 34.2
ಮೈಸೂರು ಶೇ. 7.8
ದಕ್ಷಿಣ ಕನ್ನಡ ಶೇ. 6.4
ಧಾರವಾಡ ಶೇ. 5.7
ಬಳ್ಳಾರಿ ಶೇ. 4.6
ಕಲಬುರ್ಗಿ ಶೇ. 3.7

ಲಕ್ಷ ಜನಸಂಖ್ಯೆಗೆ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ ಹೆಚ್ಚು ಕಡಿಮೆ

ಬೆಂಗಳೂರು ನಗರ 19 ಚಿತ್ರದುರ್ಗ 01
ದಕ್ಷಿಣ ಕನ್ನಡ 16 ರಾಮನಗರ 03
ಧಾರವಾಡ 16 ಬೆಂಗಳೂರು ಗ್ರಾಮೀಣ 3
ಮೈಸೂರು 14 ಮಂಡ್ಯ 03
ಬಳ್ಳಾರಿ 10 ಯಾದಗಿರಿ 03
ಹಾಸನ 10 ಚಾಮರಾಜನಗರ 03
ಉತ್ತರ ಕನ್ನಡ 03 ಕೊಡಗು 03
 

click me!