ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ : ಚುನಾವಣಾಧಿಕಾರಿ ವಿರುದ್ಧ ಪ್ರತಿಭಟನೆ

By Kannadaprabha NewsFirst Published Sep 25, 2020, 12:10 PM IST
Highlights

ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು ಸಲ್ಲಿಸಿದ್ದ ನಾಮಪತ್ರ ತಿರಸ್ಕೃತವಾದ ಹಿನ್ನೆಲೆಯಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗಿದೆ. 

ಶ್ರೀರಂಗಪಟ್ಟಣ (ಸೆ.25):  ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಚುನಾವಣಾಧಿಕಾರಿಗಳು ಮಾಜಿ ಶಾಸಕರು ಹಾಗೂ ಮಾಜಿ ಸಚಿವರ ಅಣತಿಯಂತೆ ವರ್ತಿಸಿ ಜೆಡಿಎಸ್‌ನ 8 ಮಂದಿ ಅಭ್ಯರ್ಥಿಗಳ ಉಮೇದುವಾರಿಕೆಯನ್ನು ತಿರಸ್ಕರಿಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಟಿಎಪಿಸಿಎಂಎಸ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದ ತಿರಸ್ಕೃತ ಅಭ್ಯರ್ಥಿಗಳು ಹಾಗೂ ಮುಖಂಡರು ನ್ಯಾಯಾಲಯವು ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನ ಮಾಡಲು ಆದೇಶ ನೀಡಿದೆ. ಈ ಆದೇಶ ಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದರೂ ಇಲ್ಲದ ಕಾರಣ ಹೇಳಿ ಉಮೇದುವಾರಿಕೆಗಳನ್ನು ತಿರಸ್ಕರಿಸಿದ್ದಾರೆ ಎಂದು ರಿಟರ್ನಿಂಗ್‌ ಅಧಿಕಾರಿ ಎನ್‌.ಎಲ್.ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದ ಜೆಡಿಎಸ್‌ ನಾಯಕ .

ನ್ಯಾಯಾಲಯದ ಆದೇಶದಲ್ಲಿ ಒಟ್ಟು 3007 ಮತದಾರರ ಪೈಕಿ ಕೇವಲ 219 ಮಂದಿ ಸದಸ್ಯರಿಗೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ಚುನಾವಣಾಧಿಕಾರಿಗಳು ಕೇವಲ 219 ಮಂದಿಗೆ ಮತದಾನ ಮಾಡಲು ಅವಕಾಶ ಮಾಡಿಕೊಟ್ಟು ಜೆಡಿಎಸ್‌ನ 8 ಮಂದಿ ಅಭ್ಯರ್ಥಿಗಳ ಉಮೇದುವಾರಿಕೆಯನ್ನು ತಿರಸ್ಕರಿಸಿ ಪ್ರಭಾವಿ ವ್ಯಕ್ತಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯರಾದ ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಸುರೇಶ್‌, ಯುವಘಟಕದ ಅಧ್ಯಕ್ಷ ಸಂಜಯ…, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ವೆಂಕಟೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ಬೆಳಗೊಳ ಸ್ವಾಮಿಗೌಡ, ಪುರಸಭಾ ಸದಸ್ಯರಾದ ಎಂ.ನಂದೀಶ್‌, ಎಸ್‌.ಪ್ರಕಾಶ್‌, ರವಿ, ಮಾಜಿ ಸದಸ್ಯ ಸಾಯಿಕುಮಾರ್‌, ವೆಂಕಟೇಶ್‌, ನೆಲಮನೆ ದಯಾನಂದ್‌, ಅರಕೆರೆ ನಾಗೇಂದ್ರ, ಕಿರಣ್‌ ಇದ್ದರು.

ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಮಾಜಿ ಶಾಸಕರು ಹಾಗೂ ಮಾಜಿ ಸಚಿವರ ಹೆಸರನ್ನು ಏಕೆ ಮಧ್ಯ ತರುತ್ತಿದ್ದಾರೆ ಎಂದು ತಾಪಂ ಸದಸ್ಯ ಸಂತೋಷ್‌, ಶಶಾಂಕ್‌, ನಾಗರಾಜ್, ಉದಯ್‌ ಕುಮಾರ್‌, ಪದ್ಮರಾಜ್, ರವಿ ಸೇರಿದಂತೆ ಇತರರು ಪ್ರಶ್ನಿಸಿದರು.

click me!