ಬಿತ್ತನೆ ಈರುಳ್ಳಿ ಬೆಲೆ ಏರಿಕೆ, ಹೋಟೆಲ್ ಈರುಳ್ಳಿ ದೋಸೆಗೆ ಡಿಮ್ಯಾಂಡ್

By Kannadaprabha NewsFirst Published Nov 29, 2019, 3:02 PM IST
Highlights

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಹೆದ್ದಾರಿ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಬಿತ್ತನೆ ಈರುಳ್ಳಿ ಬೆಲೆ ಏಕಾಏಕಿ ಹೆಚ್ಚಿಸಿದ್ದಾರೆ ಎಂದು ಆರೋಪಿಸಿ ರೈತರು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ಚಾಮರಾಜನಗರ(ನ.29): ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಹೆದ್ದಾರಿ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಬಿತ್ತನೆ ಈರುಳ್ಳಿ ಬೆಲೆ ಏಕಾಏಕಿ ಹೆಚ್ಚಿಸಿದ್ದಾರೆ ಎಂದು ಆರೋಪಿಸಿ ರೈತರು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ಗ್ರಾಮದ ಗುಂಡ್ಲುಪೇಟೆ ರಸ್ತೆಯಲ್ಲಿರುವ ಎಸ್‌ಬಿಎಂ ಬ್ಯಾಂಕ್‌ ಮುಂದೆ ಬಿತ್ತನೆ ಈರುಳ್ಳಿಯನ್ನು ಮಾರಾಟಗಾರರು ಹಾಗೂ ಮಧ್ಯವರ್ತಿಗಳು ಕಳೆದ ವಾರದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ರೈತರು ಧಿಡೀರ್‌ ಹೋರಾಟ ನಡೆಸಿ ರಸ್ತೆಗಿಳಿದು ಪ್ರತಿಭಟಿಸಿದರು. ಗುಂಡ್ಲುಪೇಟೆ-ಚಾಮರಾಜನಗರ ಹೆದ್ದಾರಿಯಲ್ಲಿ ರೈತರು ಬೆಲೆ ಏರಿಕೆ ಖಂಡಿಸಿ ರಸ್ತೆ ತಡೆ ನಡೆಸಿ ಎಪಿಎಂಸಿ ಹಾಗೂ ತಾಲೂಕು ಆಡಳಿತ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ಗುರುವಾರ ಕ್ವಿಂಟಲ್‌ಗೆ 13 ಸಾವಿರ:

ಈ ಸಮಯದಲ್ಲಿ ಮಾತನಾಡಿದ ರೈತರು, ಕಳೆದ ವಾರದ ಬಿತ್ತನೆ ಈರುಳ್ಳಿ ಕ್ವಿಂಟಲ್‌ಗೆ 6ರಿಂದ 7 ಸಾವಿರಕ್ಕೆ ರೈತರು ಖರೀದಿಸಿದ್ದಾರೆ. ಇಂದು(ಗುರುವಾರ) 13 ಸಾವಿರ ರು. ಹೇಳುತ್ತಾರೆ ಎಂದು ದೂರಿದರು. ಸ್ಥಳಕ್ಕೆ ಆಗಮಿಸಿದ ತೆರಕಣಾಂಬಿ ಠಾಣೆಯ ಪೊಲೀಸರು ರೈತರ ಮನವೊಲಿಸಿ ಗ್ರಾಮದಲ್ಲಿರುವ ಎಪಿಎಂಸಿ ಪ್ರಾಂಗಣಕ್ಕೆ ಕರೆದೊಯ್ದು ಎಪಿಎಂಸಿ ಅಧಿಕಾರಿಗಳನ್ನು ಕರೆಸಿದರು.

ಕೃಷಿ ಇಲಾಖೆಯಿಂದ ಪರವಾನಗಿ:

ಈ ವೇಳೆ ರೈತರು ಹಾಗೂ ಎಪಿಎಂಸಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಎಪಿಎಂಸಿ ಕಾರ್ಯದರ್ಶಿ ನಾಗೇಂದ್ರ ಎಪಿಎಂಸಿಗೆ ಬಿತ್ತನೆ ಈರುಳ್ಳಿ ಬೆಲೆ ನಿಗದಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಬಿತ್ತನೆ ಈರುಳ್ಳಿ ಮಾರಾಟ ಅಥವಾ ಪರವಾನಗಿ ಎಪಿಎಂಸಿ ನೀಡುವುದಿಲ್ಲ. ಕೃಷಿ ಇಲಾಖೆ ನೀಡುತ್ತದೆ. ಹಾಗಾಗಿ ಮಾರಾಟಗಾರರ ನಿಯಂತ್ರಣ ನನ್ನ ಕೈಯಲ್ಲಿ ಇಲ್ಲ ಎಂದರು.

ಡಿಸಿ ಜೊತೆ ಚರ್ಚೆ:

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್‌ ಎಂ.ನಂಜುಂಡಯ್ಯ ಆಗಮಿಸಿ ಮಾರಾಟಗಾರರ ಹಾಗೂ ರೈತರ ನಡುವೆ ಮಾತುಕತೆ ನಡೆಸಿದರೂ ಸಮಸ್ಯೆ ಬಗೆಹರಿಯಲಿಲ್ಲ. ನಂತರ ಬಿತ್ತನೆ ಈರುಳ್ಳಿ ತುಂಬಿದ ಆರು ವಾಹನಗಳನ್ನು ವಶಕ್ಕೆ ಪಡೆದ ತಹಸೀಲ್ದಾರ್‌ ತೆರಕಣಾಂಬಿ ಪೊಲೀಸರ ವಶಕ್ಕೆ ಒಪ್ಪಿಸಿ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುವ ತನಕ ಇರಿಸಿ ಎಂದು ಹೇಳಿದರು.

ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಜಿಲ್ಲಾಧಿಕಾರಿಗಳು ಹಾಗೂ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರೊಂದಿಗೆ ಸಮಾಲೋಚಿಸುವ ತನಕ ಕಾಯಿರಿ ಎಂದು ರೈತರಿಗೆ ಹೇಳಿದರು.

ಹೋಟೆಲ್‌ಗಳಲ್ಲಿ ಈರುಳ್ಳಿ ದೋಸೆಗೆ ಭಾರೀ ಡಿಮ್ಯಾಂಡ್‌!

ಪೆಟ್ರೋಲ್‌, ಡಿಸೇಲ್‌ ಬೆಲೆ ಗಗನಕ್ಕೇರಿದೆ. ಈ ಬೆನ್ನಲ್ಲೆ ಈರುಳ್ಳಿ ನೂರರ ಗಡಿದಾಟಿರುವ ಕಾರಣ ಗುಂಡ್ಲುಪೇಟೆ ಹೋಟೆಲ್‌ಗಳಲ್ಲಿ ಈರುಳ್ಳಿ ದೋಸೆಗೆ ಭಾರೀ ಡಿಮ್ಯಾಂಡ್‌ ಆಗೋಗಿದೆ.

ಸಾಮಾನ್ಯವಾಗಿ ಬಹುತೇಕ ಹೋಟೆಲ್‌ಗಳಲ್ಲಿ 40ರಿಂದ 50 ರು. ಈರುಳ್ಳಿ ದೋಸೆ ಬೆಲೆ. ಆದರೀಗ ಈರುಳ್ಳಿ ನೂರು ರುಪಾಯಿ ಆಗಿರುವ ಕಾರಣ ಬಹುತೇಕ ಹೋಟೆಲ್‌ಗಲ್ಲಿ ಈರುಳ್ಳಿ ದೋಸೆ ಸಿಗುತ್ತಿಲ್ಲ. ಈ ಸಂಬಂಧ ಈರುಳ್ಳಿ ದೋಸೆ ಪ್ರಿಯರು ಹೋಟೆಲ್‌ ಸಿಬ್ಬಂದಿ ಜೊತೆ ಮಾತಿನ ಚಕಮಕಿ ಕೂಡ ನಡೆದಿದೆ. ಕಾರಣ ಕೆಜಿ ಈರುಳ್ಳಿಗೆ ನೂರು ರುಪಾಯಿ ಕೊಟ್ಟು ದೋಸೆ ಹಾಕಿದರೆ ಲಾಸ್‌ ಆಗಲಿದೆ ಎಂಬುದು ಹೋಟೆಲ್‌ ಮಾಲೀಕರ ವಾದ.

ಕೆ.ಜಿ. ಈರುಳ್ಳಿಗೆ 100 ರೂ: ಸಾರ್ವಕಾಲಿಕ ದಾಖಲೆ!

ಆದರೆ ಹೋಟೆಲ್‌ ಎಂದ ಮೇಲೆ ಈರುಳ್ಳಿ ದೋಸೆ ಇಲ್ಲ ಎಂದರೆ ಏನು ಎಂದು ಗ್ರಾಹಕರು ಪ್ರಶ್ನೆ ಎತ್ತುತ್ತಾರೆ. ಹಾಗಾಗಿ ಬೆಳಗಿನ ವೇಳೆ ಒಂದು ತಟ್ಟೆಯಷ್ಟುಈರುಳ್ಳಿ ಕತ್ತರಿಸುತ್ತಾರೆ. ಕತ್ತರಿಸಿದ ಈರುಳ್ಳಿ ಮುಗಿವ ತನಕ ಈರುಳ್ಳಿ ದೋಸೆ ಕೊಡುತ್ತೇವೆ. ನಂತರ ಇಲ್ಲ ಎಂದರೆ ಗ್ರಾಹಕರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಹೆಸರೇಳಲಿಚ್ಚಿಸದ ಹೋಟೆಲ್‌ ಮಾಲೀಕರೊಬ್ಬರು ತಿಳಿಸಿದರು.

ನೂರರ ಗಡಿ ದಾಟಿದ ಈರುಳ್ಳಿ ಬೆಲೆಯಿಂದಾಗ ಈರುಳ್ಳಿ ದೋಸೆಗೆ ಭಾರೀ ಡಿಮ್ಯಾಂಡ್‌ ಆಗಿದೆ. ಲಾಸ್‌ ಆದರೂ ಪರವಾಗಿಲ್ಲ ಎಂದು ಪಟ್ಟಣದ ಹೋಟೆಲ್‌ವೊಂದು ಈರುಳ್ಳಿ ದೋಸೆ ಕೊಡುತ್ತಿದೆ.

click me!