'ನಂಬರ್‌ ಫ್ಲೇಟ್‌ನಲ್ಲಿ ಅನಧಿಕೃತ ಹುದ್ದೆ ಹೆಸರಿದ್ದರೆ ವಿಧಾನಸೌಧಕ್ಕೆ ಎಂಟ್ರಿ ಬೇಡ'

Kannadaprabha News   | Asianet News
Published : Mar 18, 2021, 08:01 AM IST
'ನಂಬರ್‌ ಫ್ಲೇಟ್‌ನಲ್ಲಿ ಅನಧಿಕೃತ ಹುದ್ದೆ ಹೆಸರಿದ್ದರೆ ವಿಧಾನಸೌಧಕ್ಕೆ ಎಂಟ್ರಿ ಬೇಡ'

ಸಾರಾಂಶ

ವಿಧಾನಸಭೆ, ವಿಧಾನಪರಿಷತ್‌ ಮತ್ತು ಸಂಸತ್ತಿನ ಹಾಲಿ ಮಾಜಿ ಸದಸ್ಯರು ತಮ್ಮ ಖಾಸಗಿ ವಾಹನಗಳ ಮೇಲೆ ಹೆಸರು, ಹುದ್ದೆ ಹಾಗೂ ಸರ್ಕಾರಿ ಲಾಂಛನ, ಚಿಹ್ನೆ ಒಳಗೊಂಡ ಯಾವುದೇ ರೀತಿಯ ನಾಮಫಲಕ ಅಳವಡಿಸದಂತೆ ತಡೆಯಲು ಹೈಕೋರ್ಟ್‌ ಆದೇಶ 

ಬೆಂಗಳೂರು(ಮಾ.18): ಹುದ್ದೆ ಹೆಸರು ಹಾಗೂ ಸರ್ಕಾರಿ ಸಂಸ್ಥೆಗಳ ಲಾಂಛನವನ್ನು ನಂಬರ್‌ ಪ್ಲೇಟ್‌ಗಳ ಮೇಲೆ ಅನಧಿಕೃತವಾಗಿ ಅಳವಡಿಸಿರುವ ಕಾರುಗಳನ್ನು ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡದ ಆವರಣದೊಳಗೆ ಪ್ರವೇಶಿಸದಂತೆ ಕೂಡಲೇ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ರಾಷ್ಟ್ರೀಯ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಹೆಸರು ಹಾಗೂ ಲಾಂಛನಕ್ಕೆ ಹೋಲಿಕೆಯಾಗುವ ನಂಬರ್‌ ಪ್ಲೇಟ್‌ಗಳನ್ನು ವಾಹನಗಳ ಮೇಲೆ ಅಳವಡಿಸಿದವರ ವಿರುದ್ಧ ಕ್ರಮ ಜರುಗಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿ ಸಂಬಂಧ ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ಹುದ್ದೆಯ ಹೆಸರು ಹಾಗೂ ಸರ್ಕಾರಿ ಸಂಸ್ಥೆಗಳ ಲಾಂಛನ, ಚಿಹ್ನೆಗಳನ್ನು ನಂಬರ್‌ ಪ್ಲೇಟ್‌ಗಳ ಮೇಲೆ ಅನಧಿಕೃತವಾಗಿ ಅಳವಡಿಸಿರುವ ಕಾರುಗಳು ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡದ ಆವರಣದೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೂಡಲೇ ಭದ್ರತಾ ಸಿಬ್ಬಂದಿಗೆ ನಿರ್ದೇಶನ ನೀಡಬೇಕು. ವಿಧಾನಸಭೆ ಮತ್ತು ವಿಧಾನಪರಿಷತ್‌ ಸದಸ್ಯರ ಕಾರುಗಳು ಪ್ರವೇಶಿಸಲು ಪಾಸು ನೀಡಿದ್ದರೆ, ಅದು ಸೂಕ್ತವಾಗುತ್ತದೆ. ಆದರೆ, ಯಾವುದೇ ಕಾರಣಕ್ಕೂ ಅನಧಿಕೃತ ನಂಬರ್‌ ಪ್ಲೇಟ್‌ ಹೊಂದಿರುವ ಖಾಸಗಿ ಕಾರುಗಳು ಪ್ರವೇಶಿಸದಂತೆ ನೋಡಿಕೊಳ್ಳಬೇಕೆಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

'ಒನ್‌ ರ‍್ಯಾಂಕ್ ಒನ್‌ ಪೆನ್ಷನ್‌' ಪರಿಷ್ಕರಣೆ: ರಕ್ಷಣಾ ಸಚಿವಾಲಯಕ್ಕೆ ಹೈಕೋರ್ಟ್‌ ನೋಟಿಸ್‌

ಅಲ್ಲದೆ, ವಿಧಾನಸಭೆ, ವಿಧಾನಪರಿಷತ್‌ ಮತ್ತು ಸಂಸತ್ತಿನ ಹಾಲಿ ಮಾಜಿ ಸದಸ್ಯರು ತಮ್ಮ ಖಾಸಗಿ ವಾಹನಗಳ ಮೇಲೆ ಹೆಸರು, ಹುದ್ದೆ ಹಾಗೂ ಸರ್ಕಾರಿ ಲಾಂಛನ, ಚಿಹ್ನೆಯನ್ನು ಒಳಗೊಂಡ ಯಾವುದೇ ರೀತಿಯ ನಾಮಫಲಕ ಅಳವಡಿಸದಂತೆ ತಡೆಯಲು ಹೈಕೋರ್ಟ್‌ ಆದೇಶ ಅನುಸಾರ ವಿಧಾನಸಭೆ ಸ್ಪೀಕರ್‌ ಮತ್ತು ವಿಧಾನ ಪರಿಷತ್‌ ಸಭಾಧ್ಯಕ್ಷರು ನೀಡಿರುವ ನಿರ್ದೇಶನಗಳ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಅನಧಿಕೃತ ನಂಬರ್‌ ಪ್ಲೇಟ್‌ ಹೊಂದಿರುವ ಕಾರುಗಳನ್ನು ಗುರುತಿಸಿ, ಮಾಲೀಕರಿಗೆ ದಂಡ ವಿಧಿಸುವ ಕುರಿತು ಹಿಂದೆ ನೀಡಿರುವ ಆದೇಶದ ಅನುಪಾಲನಾ ವರದಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನ್ಯಾಯಪೀಠ ಇದೇ ವೇಳೆ ಸೂಚಿಸಿದೆ.

ಹೈಕೋರ್ಟ್‌ ಬೇಸರ

ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಅನಧಿಕೃತವಾಗಿ ನಂಬರ್‌ ಪ್ಲೇಟ್‌ ಮೇಲೆ ಹುದ್ದೆಯ ಹೆಸರು ಹಾಗೂ ಸರ್ಕಾರಿ ಸಂಸ್ಥೆಗಳ ಲಾಂಛನ, ಚಿಹ್ನೆಗಳನ್ನು ಅಳವಡಿಸಿರುವ ವಾಹನಗಳು ಈಗಲೂ ರಸ್ತೆಯಲ್ಲಿ ಕಾಣಸಿಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್‌, ಈ ಉಪಟಳಕ್ಕೆ ಅಂತ್ಯ ಕಾಣಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC