
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.12): ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ದೇವಾಲಯದಲ್ಲಿ ಸಾಂಪ್ರದಾಯಿಕ ಉಡುಗೆಗೆ ವಿಧಿಸಿದ್ದ ನಿರ್ಬಂಧಕ್ಕೆ ರಾಜ್ಯ ಉಚ್ಛನ್ಯಾಯಾಲಯವು ತಾತ್ಕಾಲಿಕ ತಡೆ ನೀಡಿದೆ. ಕಳೆದ ಒಂದು ವರ್ಷದ ಹಿಂದೆ ಜೀರ್ಣೋದ್ಧಾರ ಮಾಡಿ 2024 ರ ಡಿಸೆಂಬರ್ 28 ರಂದು ನಡೆಯುತ್ತಿದ್ದ ವಾರ್ಷಿಕೋತ್ಸವದ ಸಂದರ್ಭ ಆರಂಭವಾಗಿದ್ದ ಸಾಂಪ್ರದಾಯಿಕ ಉಡುಗೆಗೆ ನಿರ್ಬಂಧದ ವಿಷಯ ಸಾಕಷ್ಟು ವಿವಾದ ಹಾಗೂ ಎರಡು ಪ್ರಬಲ ಸಮುದಾಯಗಳ ನಡುವೆ ವೈಷ್ಯಮ್ಯಕ್ಕೂ ಕಾರಣವಾಗಿತ್ತು.
ಒಮ್ಮೆ ಗೌಡ ಸಮುದಾಯದ ಐದಾರು ಸಾವಿರ ಜನರು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೃಹತ್ ಹೋರಾಟ ರೂಪಿಸಿದರೆ, ಅದಾದ ಕೆಲವೇ ದಿನಗಳ ಅಂತರದಲ್ಲಿ ಕೊಡವ ಮತ್ತು ಕೊಡವ ಭಾಷಿಕ ಸಮುದಾಯದ ಬರೋಬ್ಬರಿ 30 ಸಾವಿರಕ್ಕೂ ಹೆಚ್ಚು ಜನರು ಕೇರಳ ಹಾಗೂ ಕೊಡಗು ಗಡಿಭಾಗ ಕುಟ್ಟದಿಂದ ಜಿಲ್ಲಾ ಕೇಂದ್ರ ಮಡಿಕೇರಿ ವರೆಗೆ ಬೃಹತ್ ಪಾದಯಾತ್ರೆ ಮಾಡಿದ್ದರು. ಇದರ ನಡುವೆ ವಿರುದ್ಧ ಮಡಿಕೇರಿ ಕೊಡವ ಸಮಾಜದ ನಿರ್ದೇಶಕರಾಗಿದ್ದ ಸಿ.ಎ. ಸಂಜು ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ರಾಜ್ಯ ಉಚ್ಛನ್ಯಾಯಾಲಯವು ಸಾಂಪ್ರದಾಯಿಕ ಉಡುಗೆಗೆ ಯಾವುದೇ ನಿರ್ಬಂಧ ಇಲ್ಲ ಎಂದು ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಖಾಲಿ ಚೆಂಬು, ತೆಂಗಿನ ಚಿಪ್ಪು ಪ್ರದರ್ಶಿಸಿ ಕೇಂದ್ರ ಬಜೆಟ್ ಬಗ್ಗೆ ಅಸಮಾಧಾನ ಹೊರ ಹಾಕಿದ ಎಂ.ಲಕ್ಷ್ಮಣ್
ಯಾವುದೇ ಸಮುದಾಯದ ಸಾಂಪ್ರದಾಯಿಕ ವಸ್ತ್ರ ಧರಿಸಿ ದೇವಾಲಯ ಪ್ರವೇಶಿಸುವಂತಿಲ್ಲ ಎಂದು ಕಟ್ಟೆಮಾಡಿನ ಮಹಾಮೃತ್ಯುಂಜಯ ದೇವಾಲಯದಲ್ಲಿ ನಿಯಮ ವಿಧಿಸಲಾಗಿತ್ತು. ದೇವಾಲಯ ಸಮಿತಿಯು ಈ ಕುರಿತು ತನ್ನ ಬೈಲಾದಲ್ಲೇ ನಿಯಮ ರೂಪಿಸಿತ್ತು. ಹೀಗಾಗಿ ಸಿ.ಎ. ಸಂಜು ಅವರು ಬೈಲಾವನ್ನು ಪ್ರಶ್ನಿಸಿ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಸಿ. ಎ ಸಂಜು ಅವರು ಸಹಕಾರ ಸಂಘಗಳ ಉಪನಿಬಂಧಕರನ್ನು ಪ್ರತಿವಾದಿಯನ್ನಾಗಿಸಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಮಾತನಾಡಿರುವ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಎಂ.ಪಿ. ಮುತ್ತಪ್ಪ ಅವರು ಹೈಕೋರ್ಟ್ ಮಧ್ಯಂತರ ಆದೇಶ ತುಂಬಾ ಸಂತೋಷ ತಂದಿದೆ. ಯಾವುದೇ ದೇವಾಲಯಗಳಲ್ಲಿ ಅರೆಬರೆ ಬಟ್ಟೆಗಳನ್ನು ತೊಟ್ಟು ಬರಬಾರದು ಎನ್ನುವ ರೀತಿಯಲ್ಲಿ ವಸ್ತ್ರ ಸಂಹಿತೆ ಮಾಡಿರುವುದು ಗೊತ್ತಿದೆ.
ಆದರೆ ಕಟ್ಟೆಮಾಡು ಮಹಾಮೃತ್ಯುಂಜಯ ದೇವಾಲಯದಲ್ಲಿ ನಮ್ಮ ಸಾಂಪ್ರದಾಯಿಕ ಉಡುಗೆಗೆ ನಿರ್ಬಂಧ ವಿಧಿಸಲಾಗಿತ್ತು. ಇದರ ವಿರುದ್ಧ ನಮ್ಮ ತೀವ್ರ ಹೋರಾಟ ನಡೆದಿತ್ತು. ಅದರ ನಡುವೆ ಸಂಜು ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲವು ಕೂಡ ನಮ್ಮ ಪರವಾಗಿ ಮಧ್ಯಂತರ ಆದೇಶ ನೀಡಿದೆ. ಇದು ಸಂತಸದ ವಿಷಯ. ಆದರೆ ಯಾವುದೇ ಒಂದು ಸಮುದಾಯದ ವಿರುದ್ಧ ನಮ್ಮ ಹೋರಾಟವಾಗಿರಲಿಲ್ಲ. ಬದಲಾಗಿ ಎಲ್ಲರೂ ಹೊಂದಾಣಿಕೆಯಿಂದ ಸ್ನೇಹಭಾವದಿಂದಲೇ ಹೋಗಬೇಕೆಂಬುದಷ್ಟೇ ನಮ್ಮ ಭಾವನೆಯಾಗಿತ್ತು.
ಕೊಡವ ಉಡುಗೆ, ಸಂಸ್ಕೃತಿ ಆಚಾರ ರಕ್ಷಣೆಗಾಗಿ ಸಹಸ್ರ ಜನರ ಪಾದಯಾತ್ರೆ
ನ್ಯಾಯಾಲಯದ ಆದೇಶವನ್ನು ಯಾರೂ ಕೂಡ ಧಿಕ್ಕರಿಸುವುದಿಲ್ಲ ಎಂದುಕೊಂಡಿದ್ದೇವೆ. ಸದ್ಯದಲ್ಲಿಯೇ ಕೊಡವ ಸಮಾಜಗಳು ಸೇರಿ ಸಭೆ ನಡೆಸಿ ಯಾವಾಗ ನಮ್ಮ ಸಾಂಪ್ರದಾಯಿ ಉಡುಗೆ ತೊಟ್ಟು ದೇವಾಲಯಕ್ಕೆ ಹೋಗಬೇಕೆಂದು ನಿರ್ಧರಿಸುತ್ತೇವೆ ಎಂದಿದ್ದಾರೆ. ಏನೇ ಆಗಲಿ ಸಾಂಪ್ರದಾಯಿಕ ಉಡುಗೆ ನಿರ್ಬಂಧದ ವಿಚಾರ ಜಿಲ್ಲೆಯಲ್ಲಿ ಸಾಕಷ್ಟು ದೊಡ್ಡ ವಿವಾದಕ್ಕೆ ಕಾರಣವಾಗಿದ್ದರ ಜೊತೆಗೆ ಇದೀಗ ರಾಜ್ಯದ ಉಚ್ಛ ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಕಾನೂನು ಹೋರಾಟಕ್ಕೆ ಮುಂದಾಗಿದ್ದು ಮುಂದೆ ಯಾವ ಸ್ವರೂಪ ಪಡೆದುಕೊಳ್ಳುವುದೋ ಕಾದು ನೋಡಬೇಕಾಗಿದೆ.