ಕಾರವಾರದ ಗಡಿಯಲ್ಲಿ ಹೈಅಲರ್ಟ್‌: ನಿಶ್ಚಿತಾರ್ಥಕ್ಕೆ ಬಂದವರಿಗೆ ರಾಜ್ಯದೊಳಗೆ ನೋ ಎಂಟ್ರಿ

By Kannadaprabha News  |  First Published Aug 6, 2021, 1:10 PM IST

* ಕರ್ನಾಟಕ-ಗೋವಾದ ಮಾಜಾಳಿ ಗಡಿಯಲ್ಲಿ ತಡೆದು ನಿಲ್ಲಿಸಿದ ಅಧಿಕಾರಿಗಳು
* 35ರಲ್ಲಿ 8 ಜನರಿಗೆ ಮಾತ್ರ ಅವಕಾಶ
* ಕಾರವಾರದ ಯುವತಿಗೆ ಗೋವಾ ಮೂಲದ ಯುವಕನೊಂದಿಗೆ ಮದುವೆ ನಿಶ್ಚಯ
 


ಕಾರವಾರ(ಆ.06): ಕೋವಿಡ್‌ 3ನೇ ಅಲೆ ಆತಂಕ ಹಿನ್ನೆಲೆ ಅಂತರ್‌ ರಾಜ್ಯ, ಜಿಲ್ಲಾ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಗುರುವಾರ ನಿಶ್ಚಿತಾರ್ಥವೊಂದಕ್ಕೆ ಗೋವಾದಿಂದ ಕಾರವಾರಕ್ಕೆ ಬರುತ್ತಿದ್ದವರು ಗಡಿಯಲ್ಲೇ ಕಾಯುವಂತೆ ಆಯಿತು.

ಕರ್ನಾಟಕ-ಗೋವಾ ಗಡಿಯಾದ ತಾಲೂಕಿನ ಮಾಜಾಳಿ ಗೋವಾದಿಂದ ನಿಶ್ಚಿತಾರ್ಥಕ್ಕೆಂದು ಕಾರವಾರಕ್ಕೆ ಬರುತ್ತಿದ್ದವರ ಬಳಿ ಆರ್‌ಟಿಪಿಸಿಆರ್‌ ಪ್ರಮಾಣ ಪತ್ರ ಇಲ್ಲದ ಕಾರಣದಿಂದ ತಡೆದು ನಿಲ್ಲಿಸಲಾಯಿತು. ಕಾರವಾರದ ಯುವತಿಗೆ ಗೋವಾ ಮೂಲದ ಯುವಕನೊಂದಿಗೆ ಮದುವೆ ನಿಶ್ಚಯವಾಗಿದ್ದು, ಗುರುವಾರ ನಿಶ್ಚಿತಾರ್ಥ ನಡೆಯಬೇಕಾಗಿತ್ತು. ಆದರೆ ಜಿಲ್ಲೆಗೆ ಮಹಾರಾಷ್ಟ್ರ ಹಾಗೂ ಕೇರಳದಿಂದ ಆಗಮಿಸುವವರಿಗೆ ಆರ್‌ಟಿಪಿಸಿಆರ್‌ ಕಡ್ಡಾಯಗೊಳಿಸಲಾಗಿದ್ದು, ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಗೋವಾ ಭಾಗದಿಂದ ಪ್ರವೇಶಿಸಿವವರು ಕಡ್ಡಾಯವಾಗಿ ಕೋವಿಡ್‌ ನೆಗೆಟಿವ್‌ ಪ್ರಮಾಣ ಪತ್ರ ಹೊಂದಿರಲೇಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಮಾಡಿದೆ. ಆದರೆ ನಿಶ್ಚಿತಾರ್ಥಕ್ಕೆಂದು ಬಸ್‌ ಮಾಡಿಕೊಂಡು ಕಾರವಾರಕ್ಕೆ ಆಗಮಿಸುತ್ತಿದ್ದ ಗೋವಾದ ವರನ ಕುಟುಂಬಸ್ಥರ ಬಳಿ ಆರ್‌ಟಿಪಿಸಿಆರ್‌ ಪ್ರಮಾಣ ಪತ್ರ ಇರಲಿಲ್ಲ. ಈ ಹಿನ್ನೆಲೆ ಕರ್ನಾಟಕ ಗಡಿಯಲ್ಲಿ ಗೋವಾ ಕುಟುಂಬಸ್ಥರಿಗೆ ಪ್ರವೇಶ ನಿರಾಕರಿಸಿ ಅಧಿಕಾರಿಗಳು ನಿಲ್ಲಿಸಿದ್ದರು. ನಿಶ್ಚಿತಾರ್ಥಕ್ಕೆಂದು ಬಂದವರು ಎರಡು ತಾಸುಗಳ ಕಾಲ ಗಡಿಯಲ್ಲಿಯೇ ಕಾದುಕುಳಿತುಕೊಳ್ಳುವಂತಾಯಿತು.

Latest Videos

undefined

20 ತಿಂಗಳಿಂದ ಇರಾನ್‌ದಲ್ಲಿ ಸಿಲುಕಿದ್ದ ಭಟ್ಕಳದ ಯುವಕ ತಾಯ್ನಾಡಿಗೆ ವಾಪಸ್‌

ಬಳಿಕ ವರ ಹಾಗೂ ವಧುವಿನ ಕಡೆಯವರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕೊನೆಗೆ ಮಾನವೀಯತೆಯ ಆಧಾರದ ಮೇಲೆ ವರನ ಕಡೆಯ 35 ಜನರಲ್ಲಿ ಕೇವಲ 8 ಮಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಕಾರ್ಯಕ್ರಮದ ಬಳಿಕ ವಾಪಸ್ಸಾಗುವಂತೆ ವರನ ಕಡೆಯವರಿಗೆ ಅಧಿಕಾರಿಗಳು ಸೂಚಿಸಿ ಕಾರವಾರಕ್ಕೆ ತೆರಳಲು ಅನುವು ಮಾಡಿಕೊಟ್ಟರು. ವರನೊಂದಿಗೆ ಬಂದಿದ್ದ ಇನ್ನುಳಿದವರು ಗಡಿ ಪ್ರವೇಶಿಸಲಾಗದೇ ವಾಪಸ್‌ ಮನೆಗೆ ತೆರಳಿದರು.
 

click me!