* ಮಳೆಯ ಅಬ್ಬರ ತಗ್ಗಿಸುವಂತೆ ದೇವರ ಮೊರೆ
* ಮಲೆನಾಡಿನ ಜನತೆ , ರಾಜಕಾರಣಿಗಳಿಂದ ದೇವರಲ್ಲಿ ಪ್ರಾರ್ಥನೆ
* ಚಿಕ್ಕಮಗಳೂರಿನ ಮಳೆ ದೇವರೆಂದು ಪ್ರಸಿದ್ದಿ ಪಡೆದಿರುವ ಕಿಗ್ಗಾ, ಶೃಂಗೇರಿ ಶಾರದಾಂಭೆಗೆ ಪೂಜೆ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಜುಲೈ.12): ಮಳೆ ಅಬ್ಬರಕ್ಕೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ತತ್ತರಿಸಿ ಹೋಗುತ್ತಿದೆ. ಕಳೆದ 8 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ವರುಣಾರ್ಭಟದಿಂದ ನಲುಗಿರುವ ಮಲೆನಾಡಿನ ಜನತೆ ಹಾಗೂ ರಾಜಕಾರಣಿಗಳು ಈಗ ಮಳೆಯ ಅಬ್ಬರ ತಗ್ಗಿಸುವಂತೆ ದೇವರ ಮೊರೆ ಹೋಗಿದ್ದಾರೆ. ಮಳೆ ದೇವರೆಂದು ಪ್ರಸಿದ್ದಿ ಪಡೆದಿರುವ ಕಿಗ್ಗಾ, ಶೃಂಗೇರಿ ಶಾರದಾಂಭೆಯ ಬಳಿ ಮಳೆ ಅಬ್ಬರ ತಗ್ಗಿಸುವಂತೆ ಮಲೆನಾಡಿನ ಜನತೆ, ರಾಜಕಾರಣಿಗಳು ಪ್ರಾರ್ಥನೆ ಮಾಡಿದ್ದಾರೆ.
Chikkamagaluru: ಪುನರ್ವಸು ಮಳೆ ಅಬ್ಬರಕ್ಕೆ ಕಾಫಿನಾಡು ತತ್ತರ!
ವಾಡಿಕೆಗಿಂತಲೂ ದುಪ್ಪಟ್ಟು ಮಳೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಡಿಕೆಗಿಂತಲೂ ದುಪ್ಪಟ್ಟು ಮಳೆ ಆಗುತ್ತಿದೆ. ಇದರಿಂದ ಆತಂಕಗೊಂಡಿರುವ ಮಲೆನಾಡಿನ ರಾಜಕಾರಣಿಗಳು ದೇವರನೊರೆಹೋಗಿದ್ದಾರೆ. ರಾಜ್ಯದಲ್ಲಿ ಮಳೆ ದೇವರೆಂದು ಪ್ರಸಿದ್ದ ಪಡೆದಿರುವ ಶೃಂಗೇರಿ ಕಿಗ್ಗಾದ ಋಷ್ಯಶೃಂಗ ,ಶೃಂಗೇರಿಯ ಶಾರದಾಂಬೆ ದೇವಿಯ ಮೊರೆ ಹೋಗಿದ್ದಾರೆ.ಶೃಂಗೇರಿ ಸೇರಿದಂತೆ ಮಲೆನಾಡಿನ ಎಲ್ಲಾ ತಾಲ್ಲೂಕುಗಳಲ್ಲಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಸಾಕಷ್ಟು ಆಸ್ತಿ, ಪಾಸ್ತಿ ಹಾಗೂ ಜೀವ ಹಾನಿ ಸಂಭವಿಸಿದ್ದು, ಮಳೆ ಹೀಗೆ ಮುಂದುವರಿದಲ್ಲಿ ಇನ್ನಷ್ಟು ಅನಾಹುತಗಳು ಉಂಟಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಅತೀವೃಷ್ಟಿ ನಿಲ್ಲಿಸುವಂತೆ ದೇವರಲ್ಲಿ ಪ್ರಾರ್ಥಿಸಲಾಗುತ್ತಿದೆ. ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಇಬ್ಬರೂ ಒಟ್ಟಿಗೆ ಶಾರದಾಂಭೆಯ ದರ್ಶನ ಪಡೆದು ಮಳೆ ಅಬ್ಬರ ತಗ್ಗಿಸುವಂತೆ ಪ್ರಾರ್ಥಿಸಿದರು.
ಕ್ಷೇತ್ರದ ಹಿತ ಕಾಪಾಡುವ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನ
ರಾಜಕೀಯವಾಗಿ ಬದ್ಧವೈರಿಗಳಾಗಿದ್ದರೂ ಕ್ಷೇತ್ರದ ಹಿತ ಕಾಪಾಡುವ ವಿಚಾರದಲ್ಲಿ ರಾಜಕೀಯ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಒಗ್ಗಟ್ಟು ಪ್ರದರ್ಶಿಸಿರುವುದು ವಿಶೇಷವಾಗಿದೆ. ಇಬ್ಬರೂ ನಾಯಕರು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರುಗಳೊಂದಿಗೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಲ್ಲದೆ, ಜಗದ್ಗರು ಶ್ರೀ ಭಾರತೀರ್ಥ ಸ್ವಾಮೀಜಿ ಅವರನ್ನೂ ಭೇಟಿ ಮಾಡಿ ವರುರ್ಣಾಭಟವನ್ನು ತಗ್ಗಿಸುವಂತೆ ಪ್ರಾರ್ಥಿಸಿದರು.
ಋಷ್ಯಶೃಂಗೇಶ್ವರನಿಗೆ ಪೂಜೆ
ಭಾರೀ ಮಳೆಯಿಂದ ನದಿಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಶೃಂಗೇರಿಯ ನೆಮ್ಮಾರ್ ಸೀಮೆಯ ಜನರು ಮಳೆ ದೇವರೆಂದೇ ಪ್ರಸಿದ್ಧಿಯಾಗಿರುವ ಕಿಗ್ಗಾದ ಋಷ್ಯಶೃಂಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಅತೀವೃಷ್ಠಿ ನಿಲ್ಲಿಸುವಂತೆ ಪ್ರಾರ್ಥಿಸಿದ್ದಾರೆ.ಶೃಂಗೇರಿ ತಾಲ್ಲೂಕಿನಲ್ಲಿ ವಾಡಿಕೆಗಿಂತಲೂ ದುಪ್ಪಟ್ಟು ಪ್ರಮಾಣದ ಮಳೆ ಈಗಾಗಲೇ ಸುರಿದಿದೆ. ಇನ್ನೂ ಮಳೆ ಮುಂದುವರಿದಲ್ಲಿ ಭಾರೀ ಅನಾಹುತಗಳ ಉಂಟಾಗುವ ಹಿನ್ನೆಲೆಯಲ್ಲಿ ವರುಣನ ಮುನಿಸು ತಣಿಸಿ ಜನರ ನೆರವಿಗೆ ಬರಬೇಕು ಎಂದು ದೇವರಲ್ಲಿ ಮೊರೆ ಇಡಲಾಗಿದೆ.ಅನಾವೃಷ್ಠಿ ಸಂದರ್ಭದಲ್ಲಿ ಮೊರೆ ಇಟ್ಟರೆ ಮಳೆ ಸುರಿಸುವ ಹಾಗೂ ಅತೀವೃಷ್ಟಿ ಹೆಚ್ಚಾದಾಗ ಪ್ರಾರ್ಥಿಸಿದರೆ ನಿಯಂತ್ರಿಸುವ ಶಕ್ತಿಯನ್ನು ಋಷ್ಯಶೃಂಗ ದೇವರು ಹೊಂದಿದೆ ಎನ್ನುವ ಪ್ರತೀತಿ ತಲೆ ತಲಾಂತರದಿಂದ ನಡೆದು ಬಂದಿರುವ ಹಿನ್ನೆಲೆಯಲ್ಲಿ ಜನರು ಈಗ ವಿಶೇಷ ಪೂಜೆ ಮೂಲಕ ಪ್ರಾರ್ಥನೆ ಸಲ್ಲಿಸಿದ್ದಾರೆ