ಪರಶಿವಮೂರ್ತಿ ಮಾಟಲದಿನ್ನಿ
ಕುಷ್ಟಗಿ (ನ.25) : ತಾಲೂಕಿನ ಹೆಸರೂರು ಗ್ರಾಮವು ಮೂಲ ಸೌಕರ್ಯ ಇಲ್ಲದೇ ನರಳುತ್ತಿದ್ದು, ಈ ಕುರಿತು ಗ್ರಾಮಸ್ಥರು ಪರದಾಡುತ್ತಿದರೂ ಸಂಬಂಧಪಟ್ಟವರು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಈ ಗ್ರಾಮವು ದೋಟಿಹಾಳ ಗ್ರಾಪಂ ವ್ಯಾಪ್ತಿಗೆ ಬರುತ್ತಿದ್ದು, ಅಧ್ಯಕ್ಷರ ಸ್ವಗ್ರಾಮವಾದರೂ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಗ್ರಾಮವು 1200 ಜನಸಂಖ್ಯೆ ಹೊಂದಿದ್ದು, 150 ಮನೆಗಳಿವೆ. ಇಲ್ಲಿನ ಜನತಾ ಕಾಲನಿ ಸಂಪರ್ಕಿಸುವ ರಸ್ತೆಯಲ್ಲಿ ಕೊಳಚೆ ನೀರು ನಿಂತು ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ರಸ್ತೆಯಲ್ಲಿ ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಓಡಾಡಲು ಕಷ್ಟವಾಗುತ್ತಿದೆ. ಕೊಳಚೆ ನೀರಿನಲ್ಲಿ ಸೊಳ್ಳೆಗಳು, ನೊಣಗಳು ಉತ್ಪತ್ತಿಗೊಂಡಿವೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಇದರ ಬಗ್ಗೆ ಜನರು ಹಲವಾರು ಬಾರಿ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗುತ್ತಿಲ್ಲ.
undefined
Koppala: ಪ್ರಾಮಾಣಿಕನೆಂದು ಹೇಳಿಕೊಳ್ಳುವ ಸಚಿವರ ಕ್ಷೇತ್ರದಲ್ಲಿ ಅತ್ಯಂತ ಕಳಪೆ ರಸ್ತೆ ಕಾಮಗಾರಿ
ರಸ್ತೆಯಲ್ಲಿಯೇ ಟಿಸಿ:
ಜನತಾ ಕಾಲನಿಯಲ್ಲಿ ಮುಖ್ಯ ರಸ್ತೆಯ ಪಕ್ಕ ಟಿಸಿ ಇದೆ. ಈ ಬಡಾವಣೆ ಜನರು ತಮ್ಮ ಹೊಲಗಳಿಗೆ ಹೋಗಿ ಬರುವಾಗ ತೊಂದರೆ ಅನುಭವಿಸುತ್ತಿದ್ದಾರೆ. ಟಿಸಿಗೆ ಮೇವು ತಗುಲಿದರೆ ಅಪಾಯವಾಗುವುದು ಗ್ಯಾರಂಟಿ ಎಂದು ರೈತರು ಹೇಳುತ್ತಾರೆ. ಇನ್ನೊಂದೆಡೆ ರಸ್ತೆಯ ತುಂಬೆಲ್ಲ ಕೊಳಚೆ ತುಂಬಿರುವುದರಿಂದ ಸಂಚಾರ ಮಾಡಲು ಹರಸಾಹಸ ಪಡುವಂತಾಗಿದೆ.
ಶುದ್ಧ ನೀರು ಮರೀಚಿಕೆ:
ಗ್ರಾಮದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ನಾಮಕಾವಸ್ತೆ ಎಂಬಂತಾಗಿದೆ. ಒಂದು ಘಟಕದಲ್ಲಿ ನೀರು ಶುದ್ಧೀಕರಣ ಮಾಡುವ ಯಂತ್ರವನ್ನೇ ಇನ್ನೂ ಅಳವಡಿಸಿಲ್ಲ. ಇನ್ನೊಂದು ಘಟಕವು ರಿಪೇರಿ ಇದೆ. ಹೀಗಾಗಿ ಶುದ್ಧ ನೀರಿನ ಘಟಕಗಳು ಇದ್ದರೂ ಇಲ್ಲದಂತಾಗಿದೆ ಎಂದು ಗ್ರಾಮದ ಯುವಕ ಪ್ರಶಾಂತ ಹಿರೇಮಠ ಆರೋಪಿಸಿದ್ದಾರೆ.
ಅರೆಬರೆ ಕಾಮಗಾರಿ
ಗ್ರಾಮದಲ್ಲಿ ಹಲವು ಅರೆಬರೆ ಕಾಮಗಾರಿ ಮಾಡಿದ್ದು, ನಡುರಸ್ತೆಯಲ್ಲಿಯೇ ತೆಗ್ಗು ತೆಗೆದಿದ್ದಾರೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಈ ಕುರಿತು ಗ್ರಾಪಂನವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿಸುವ ಗೋಜಿಗೆ ಸಂಬಂಧಪಟ್ಟವರು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಕೊಪ್ಪಳ: ನವಲಿ ಸಮಾನಾಂತರ ಜಲಾಶಯಕ್ಕೆ ಶೀಘ್ರ ಭೂಮಿಪೂಜೆ, ಆನಂದ ಸಿಂಗ್
ಗ್ರಾಮದವರೇ ಗ್ರಾಪಂ ಅಧ್ಯಕ್ಷರಾಗಿದ್ದಾರೆ. ಆದರೂ ಅಭಿವೃದ್ಧಿ ಕಾರ್ಯ ಮರೀಚಿಕೆಯಾಗಿವೆ. ಜತೆಗೆ ಗ್ರಾಮದಲ್ಲಿ ಅನೇಕ ಸಮಸ್ಯೆಗಳು ತಾಂಡವವಾಡುತ್ತವೆ. ಈ ಕುರಿತು ಹಲವು ಬಾರಿ ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಮರಿಯಪ್ಪ ಕುರಿ, ಅಧ್ಯಕ್ಷರು ಕರ್ನಾಟಕ ವಿಶ್ವಮಾನವ ಸೇನೆ