ನಾರಾಯಣ ಹೆಗಡೆ
ಹಾವೇರಿ (ನ.25) : ರಕ್ತದಾನ ಮಾಡುವುದೆಂದರೆ ಹಿಂಜರಿಯುವ ಮಂದಿಯೇ ಹೆಚ್ಚು. ಆದರೆ, ಈ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ರಕ್ತ ಸೈನಿಕರಿದ್ದು, ರಕ್ತದಾನಿಗಳ ತವರೂರು ಎಂದೇ ಖ್ಯಾತಿ ಪಡೆದಿದೆ. ಹೋಮ್ ಟೌನ್ ಆಫ್ ಬ್ಲಡ್ ಡೋನರ್ಸ್ ಎಂದು ಗೂಗಲ್‌ನಿಂದ ಟ್ಯಾಗ್ ಆಗುವ ಮೂಲಕ ಜಗತ್ತಿನ ಭೂಪಟದಲ್ಲಿ ಈ ಗ್ರಾಮ ಗುರುತಿಸಿಕೊಂಡಿದೆ.
undefined
ಇಂಥ ವಿಶೇಷತೆಯಿಂದ ಗುರುತಿಸಿಕೊಂಡಿರುವುದು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಅಕ್ಕಿಆಲೂರು ಗ್ರಾಮ. ಈ ಗ್ರಾಮದ ಮನೆಮನೆಯಲ್ಲೂ ರಕ್ತದಾನಿಗಳು ಇದ್ದಾರೆ. ‘ಸ್ನೇಹ ಮೈತ್ರಿ ಬ್ಲಡ್ ಆರ್ಮಿ’ ಎಂಬ ಸಂಘಟನೆ ಕಟ್ಟಿಕೊಂಡು ಸುತ್ತಮುತ್ತಲಿನ ಗ್ರಾಮಗಳಲ್ಲೂ ರಕ್ತ ದಾನದ ಶಿಬಿರ ಏರ್ಪಡಿಸಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲೂ ಅಕ್ಕಿಆಲೂರಿನ ರಕ್ತ ಸೈನಿಕರು ನಿರತರಾಗಿದ್ದಾರೆ. ಇತ್ತೀಚೆಗೆ ನೇತ್ರ ದಾನದ ಜಾಗೃತಿಯಲ್ಲೂ ತೊಡಗಿಕೊಂಡು 50ಕ್ಕೂ ಹೆಚ್ಚು ಜನರಿಂದ ನೇತ್ರ ದಾನದ ವಾಗ್ದಾನ ಮಾಡಿಸಿದ ಹೆಗ್ಗಳಿಗೆ ಈ ಗ್ರಾಮದ ಜನರದ್ದು.
BIG 3 Heroes: ರಕ್ತದಾನಿ ಗಣೇಶ್ ಶರ್ಮಾ ಮತ್ತು ಸುಂದರ ಅಂಗನವಾಡಿಯ ರೂವಾರಿ
68 ಸಲ ರಕ್ತದಾನ ಮಾಡಿದ ಪೇದೆ
ಅಕ್ಕಿಆಲೂರು ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬರ್ ಆಗಿರುವ ಕರಬಸಪ್ಪ ಗೊಂದಿ ಎಂಬವರೇ ಈ ಎಲ್ಲ ಕಾರ್ಯಕ್ಕೆ ಪ್ರೇರಣೆ. ಸ್ನೇಹಮೈತ್ರಿ ಬ್ಲಡ್ ಆರ್ಮಿ ಎಂಬ ಗುಂಪು ರಚಿಸಿಕೊಂಡು ರಕ್ತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಸ್ವತಃ ಕರಬಸಪ್ಪ ಗೊಂದಿ ಅವರು 68 ಬಾರಿ ರಕ್ತದಾನ ಮಾಡಿದ್ದಾರೆ. ಹತ್ತಿಪ್ಪತ್ತು ಸಲ ರಕ್ತದಾನ ಮಾಡಿದ ನೂರಾರು ಜನರು ಅಕ್ಕಿಆಲೂರಿನಲ್ಲಿದ್ದಾರೆ. ಈ ಗ್ರಾಮದಲ್ಲಿರುವ ವಿರಕ್ತಮಠದ ಶಿವಬಸವ ಶ್ರೀಗಳು 9 ಬಾರಿ, ಮುತ್ತಿನಕಂತಿ ಮಠದ ಚಂದ್ರಶೇಖರ ಶಿವಾಚಾರ್ಯರು 12 ಸಲ ರಕ್ತದಾನ ಮಾಡಿದ್ದಾರೆ. ಇವರೆಲ್ಲರಿಂದ ಪ್ರೇರಣೆ ಪಡೆದು ಸುತ್ತಮುತ್ತಲಿನ ಗ್ರಾಮಗಳ ಜನರೂ ಬ್ಲಡ್ ಆರ್ಮಿ ಗುಂಪಿನ ಸದಸ್ಯರಾಗುತ್ತಿದ್ದಾರೆ. ಈಗ ಈ ಗುಂಪಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ರಕ್ತದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ತುರ್ತಾಗಿ ರಕ್ತ ಬೇಕಾದವರಿಗೆ, ಥಲಸ್ಸೇಮಿಯಾ ಕಾಯಿಲೆ ಇರುವವರಿಗೆ ಈ ಗ್ರಾಮದ ರಕ್ತ ಸೈನಿಕರು ರಕ್ತದಾನ ಮಾಡುತ್ತಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ರಕ್ತ ಸೈನಿಕರೂ ಅನೇಕರಿದ್ದಾರೆ.
ರಕ್ತದಾನಕ್ಕೆ ಪ್ರೇರಣೆ
ರಕ್ತ ದಾನದ ಬಗ್ಗೆ ಅನೇಕರಲ್ಲಿರುವ ತಪ್ಪು ಕಲ್ಪನೆ, ಮೂಢ ನಂಬಿಕೆಗಳನ್ನು ಹೋಗಲಾಡಿಸಿ ರಕ್ತ ದಾನಕ್ಕೆ ಪ್ರೇರಣೆ ನೀಡುವ ಕಾರ್ಯವನ್ನು ಕರಬಸಪ್ಪ ಗೊಂದಿ ನೇತೃತ್ವದಲ್ಲಿ ಬ್ಲಡ್ ಆರ್ಮಿ ತಂಡ ಕೆಲಸ ಮಾಡುತ್ತಿದೆ. ರಕ್ತದಾನದ ಜಾಗೃತಿಗೆಂದೇ ಸಾರಿಗೆ ಸಂಸ್ಥೆಯ ಬಸ್ ಒಂದಕ್ಕೆ ರಕ್ತದಾನ ರಥ ಎಂದು ನಾಮಕರಣ ಮಾಡಲಾಗಿದೆ. ಈ ಬಸ್ಸಿನ ಒಳಗಡೆಯೂ ರಕ್ತದಾನದ ಬಗ್ಗೆ ಅರಿವು ಮೂಡಿಸುವ ವಾಕ್ಯಗಳನ್ನು ಬರೆಯಲಾಗಿದೆ.
ಅಕ್ಕಿಆಲೂರು ಅಕ್ಕಪಕ್ಕದ ಹಳ್ಳಿಗಳಲ್ಲಿ ಥಲಸ್ಸೆಮಿಯಾದಿಂದ ಬಳಲುತ್ತಿರುವ ಹತ್ತಾರು ಮಕ್ಕಳಿಗೆ ನಿಯಮಿತವಾಗಿ ರಕ್ತವನ್ನು ಪೂರೈಸುವ ಕಾರ್ಯವನ್ನು ಇಲ್ಲಿಯ ರಕ್ತ ಸೈನಿಕರು ಮಾಡುತ್ತಿದ್ದಾರೆ. ಇದರಿಂದಾಗಿ ಥಲಸ್ಸೇಮಿಯಾದಿಂದ ಬಳಲುತ್ತಿರುವ ಸುತ್ತಮುತ್ತಲಿನ ಮಕ್ಕಳು ರಕ್ತಕ್ಕಾಗಿ ಅಲೆದಾಡುವ ಸ್ಥಿತಿ ಇದುವರೆಗೂ ಎದುರಾಗಿಲ್ಲ ಎಂದು ಅಕ್ಕಿಆಲೂರಿನ ರಕ್ತ ಸೈನಿಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 2015ರಿಂದ ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಗುಂಪು ಮಾಡಿಕೊಂಡು ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪೇದೆ ಕರಬಸಪ್ಪ ಗೊಂದಿ ಮತ್ತು ಅವರ ತಂಡ ನಿರತವಾಗಿದೆ. ಅಕ್ಕಿಆಲೂರು ಬಸ್ ನಿಲ್ದಾಣಕ್ಕೆ ರಕ್ತದಾನಿಗಳ ತವರೂರು ಎಂದು ನಾಮಕರಣ ಮಾಡಲಾಗಿದೆ.
26 ಜನ ನೇತ್ರದಾನ
ರಕ್ತ ದಾನದ ಜಾಗೃತಿಯಿಂದ ಜನರಲ್ಲಿ ಆಗಿರುವ ಬದಲಾವಣೆಯಿಂದ ಪ್ರೇರಿತರಾಗಿ ಅಕ್ಕಿಆಲೂರಿನ ರಕ್ತ ಸೈನಿಕರು ನೇತ್ರದಾನ, ದೇಹ ದಾನದ ಬಗ್ಗೆಯೂ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಅಕ್ಕಿಆಲೂರಿನಲ್ಲಿಯೇ 26 ಜನರು ನೇತ್ರದಾನಕ್ಕೆ ಒಪ್ಪಿಗೆ ನೀಡಿದ್ದಾರೆ. ಇದುವರೆಗೆ 51 ಜನರಿಂದ ಮರಣಾನಂತರ ಕಣ್ಣುಗಳನ್ನು ಸಂಗ್ರಹಿಸಿ ಹುಬ್ಬಳ್ಳಿ ಕಿಮ್ಸ್, ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ, ಶಿರಸಿಯ ಲಯನ್ಸ್ ನೇತ್ರ ಭಂಡಾರಕ್ಕೆ ದಾನ ಮಾಡಿಸಿದ್ದಾರೆ. ಅಲ್ಲದೇ ಹಾನಗಲ್ಲ ಮತ್ತು ಆಡೂರು ಠಾಣೆ ವ್ಯಾಪ್ತಿಯ ಅಪಘಾತ, ಆತ್ಮಹತ್ಯೆಯಂತಹ ಪ್ರಕರಣಗಳಲ್ಲಿ ಮೃತಪಟ್ಟವರ ಕುಟುಂಬದ ಮನವೊಲಿಸಿ ನೇತ್ರದಾನ ಮಾಡಿಸಿದ್ದಾರೆ. ಶಾಲಾ ಕಾಲೇಜುಗಳಿಗೆ ತೆರಳಿ ರಕ್ತದಾನದ ಬಗ್ಗೆ ಅರಿವು ಮೂಡಿಸಿ ಸುಮಾರು 1200 ಜನರು ರಕ್ತ ಗುಂಪು ವರ್ಗೀಕರಣ ಮಾಡಿಸಿದ್ದಾರೆ. ಇವರು ನಮ್ಮ ಭಾವಿ ರಕ್ತ ಸೈನಿಕರಾಗಲಿದ್ದಾರೆ ಎಂದು ಕರಬಸಪ್ಪ ಗೊಂದಿ ಹೇಳುತ್ತಾರೆ.
ಒಬ್ಬ ಮನುಷ್ಯನ ರಕ್ತದಿಂದ ಮೂರು ಜೀವ ಉಳಿಸಲು ಸಾಧ್ಯ
ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಬಳಗದ ಮೂಲಕ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಕಳೆದ 7 ವರ್ಷಗಳಿಂದ ಮಾಡುತ್ತ ಬಂದಿದ್ದೇವೆ. ಇದುವರೆಗೆ ನಮ್ಮ ಗುಂಪಿನಿಂದ 21 ಸಾವಿರಕ್ಕೂ ಹೆಚ್ಚು ಸಲ ರಕ್ತದಾನ ಮಾಡಲಾಗಿದೆ. ರಕ್ತದಾನದ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಬೇಕಿದೆ. ಅಲ್ಲದೇ ರಕ್ತ ದಾನದಿಂದ ಆರೋಗ್ಯಕ್ಕೆ ಆಗುವ ಅನುಕೂಲಗಳ ಬಗ್ಗೆ ಗೊತ್ತಾಗಬೇಕಿದೆ. ನಮ್ಮ ಪ್ರಯತ್ನಕ್ಕೆ ಸಾರ್ವಜನಿಕರಿಂದ ಉತ್ತಮ ಬೆಂಬಲ ಸಿಗುತ್ತಿದೆ. ನಿತ್ಯವೂ ಅನೇಕರು ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ.
-ಕರಸಬಪ್ಪ ಗೊಂದಿ, ರಕ್ತ ಸೈನಿಕ