ಬೆಂಗಳೂರು: ಇನ್ನಷ್ಟು ಕಡೆ ಪೀಕ್‌ ಅವರಲ್ಲಿ ಭಾರೀ ವಾಹನ ನಿಷೇಧ?

By Kannadaprabha News  |  First Published Nov 24, 2022, 6:30 AM IST

ಪಿಕ್‌ ಆವರ್‌ನಲ್ಲಿ ಸರಕು ಸಾಗಾಣಿಕೆ ವಾಹನಗಳಿಗೆ ಬ್ರೇಕ್‌, ಹೆಬ್ಬಾಳ ಮೇಲ್ಸೇತುವೆ ಸಂಚಾರ ನಿಷೇಧ ಯಶಸ್ವಿ ಬೆನ್ನಲ್ಲೇ ನಿರ್ಧಾರ


ಬೆಂಗಳೂರು(ನ.24): ಹೆಬ್ಬಾಳ ಮೇಲ್ಸೇತುವೆಯಲ್ಲಿ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿಷೇಧವು ತುಸು ಯಶಸ್ವಿಯಾದ ಬೆನ್ನಲ್ಲೇ ಈಗ ರಾಜಧಾನಿಗೆ ಬೆಳಗ್ಗೆ ಮತ್ತು ಸಂಜೆ ಪಿಕ್‌ ಆವರ್‌ನಲ್ಲಿ ಭಾರೀ ವಾಹನಗಳ ಪ್ರವೇಶ ನಿರ್ಬಂಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಂಚಾರ ವಿಭಾಗದ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ. ಭಾರಿ ವಾಹನಗಳಿಗೆ ನಗರ ಪ್ರವೇಶ ನಿಷೇಧ ನಿಯಮವನ್ನು ಬುಧವಾರದಿಂದಲೇ ಪೊಲೀಸರು ಕಟ್ಟು ನಿಟ್ಟಾಗಿ ಜಾರಿಗೊಳಿಸುತ್ತಿದ್ದು, ನಿಯಮ ಉಲ್ಲಂಘಿಸಿ ನಗರ ಪ್ರವೇಶಿಸುವ ವಾಹನಗಳನ್ನು ರಸ್ತೆಯಲ್ಲಿ ಅಡ್ಡಗಟ್ಟಿನಿರ್ಬಂಧಿತ ಅವಧಿ ಮುಗಿಯುವರೆಗೆ ಪೊಲೀಸರು ರಸ್ತೆ ಬದಿ ನಿಲುಗಡೆ ಮಾಡಿಸುತ್ತಿದ್ದಾರೆ.

ಹಲವು ವರ್ಷಗಳಿಂದ ನಗರದಲ್ಲಿ ಬೆಳಗ್ಗೆ 8 ರಿಂದ 11 ಗಂಟೆ ಹಾಗೂ ಸಂಜೆ 4 ರಿಂದ ರಾತ್ರಿ 10 ಗಂಟೆವರೆಗೆ ಲಾರಿಗಳು ಸೇರಿದಂತೆ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧಿಸಲಾಗಿದೆ. ಹೀಗಿದ್ದರೂ ಕೆಲವು ವಾಹನಗಳು ನಿಯಮ ಉಲ್ಲಂಘಿಸಿ ನಗರ ಪ್ರವೇಶಿಸುವುದರಿಂದ ಪ್ರಮುಖ ರಸ್ತೆಗಳಿಗೆ ವಾಹನ ದಟ್ಟಣೆಗೆ ಕಾರಣವಾಗುತ್ತಿದೆ. ಈ ಹಿನ್ನಲೆಯಲ್ಲಿ ಎಚ್ಚೆತ್ತಿರುವ ಸಂಚಾರ ವಿಭಾಗದ ಪೊಲೀಸರು, ಈಗ ಭಾರಿ ವಾಹನಗಳು ನಗರ ಪ್ರವೇಶದಂತೆ ಗಡಿಗಳಲ್ಲಿ ನಿಗಾವಹಿಸಿದ್ದಾರೆ.

Tap to resize

Latest Videos

ಸರಕು ಸಾಗಣೆ ವಾಹನ ನಿಷೇಧ: ತಗ್ಗಿತು ಹೆಬ್ಬಾಳ ಫ್ಲೈಓವರ್‌ ಜಾಂ

ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ನಗರದ ಹೆಬ್ಬಾಳ ಮೇಲ್ಸೇತುವೆಗೆ ಪಿಕ್‌ ಅವರ್‌ನಲ್ಲಿ ಬೆಳಗ್ಗೆ ಎರಡು ಗಂಟೆಗಳು ಸರಕು ಸಾಗಾಣೆ ವಾಹನಗಳ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದರು. ಈ ನಿಯಮ ಜಾರಿಗೆ ಬಂದ ಐದು ದಿನದಲ್ಲೇ ಸಕಾರಾತಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿ ಸಂಚಾರ ದಟ್ಟಣೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿತು. ಈ ಹಿನ್ನಲೆಯಲ್ಲಿ ಈಗ ಸಂಚಾರ ಪೊಲೀಸರು, ಭಾರೀ ವಾಹನಗಳಿಗೆ ನಿಷೇಧದ ಹಳೇ ಆದೇಶಕ್ಕೆ ಮರು ಜೀವ ನೀಡಿ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಾಗಿದ್ದಾರೆ.

ಅಂತೆಯೇ ಹೊಸೂರು, ಕನಕಪುರ, ಮಾಗಡಿ, ತುಮಕೂರು, ಬಳ್ಳಾರಿ, ಹೊಸಕೋಟೆ, ಕೆ.ಆರ್‌.ಪುರ, ಬನ್ನೇರುಘಟ್ಟಹಾಗೂ ಮೈಸೂರು ರಸ್ತೆ ಸೇರಿದಂತೆ ನಗರ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಭಾರಿ ವಾಹನಗಳಿಗೆ ಪೊಲೀಸರು ಬ್ರೇಕ್‌ ಹಾಕುತ್ತಿದ್ದಾರೆ.

ನೈಸ್‌ ರಸ್ತೆ ಜಂಕ್ಷನ್‌, ಸುಂಕದಕಟ್ಟೆಯಲ್ಲಿ ನಿಲುಗಡೆ-ಡಿಸಿಪಿ

ಹಲವು ವರ್ಷಗಳಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಪಿಕ್‌ ಆವರ್‌ನಲ್ಲಿ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಿದ್ದರೂ ಕೆಲವು ವಾಹನಗಳು ನಿಯಮ ಉಲ್ಲಂಘಿಸಿ ನಗರ ಪ್ರವೇಶಿಸುತ್ತಿವೆ. ಈಗ ನಿರ್ಬಂಧ ನಿಯಮವನ್ನು ಪರಿಣಾಮಕಾರಿ ಜಾರಿಗೊಳಿಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿ ಕುಲದೀಪ್‌ ಕುಮಾರ್‌.ಆರ್‌.ಜೈನ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಬೆಂಗ್ಳೂರಿನ ಟ್ರಾಫಿಕ್‌ ನಿಯಂತ್ರಣಕ್ಕೆ ಸಿಎಸ್‌ ಮದ್ದು

ಹೊಸೂರು, ಕನಕಪುರ ಹಾಗೂ ನೈಸ್‌ ರಸ್ತೆ ಮೂಲಕ ಮೈಸೂರು ರಸ್ತೆಗೆ ಬಂದು ನಗರ ಪ್ರವೇಶಿಸುವ ವಾಹನಗಳನ್ನು ನೈಸ್‌ ರಸ್ತೆ ಜಂಕ್ಷನ್‌ ಬಳಿಯೇ ತಡೆಯಲಾಗುತ್ತದೆ. ಅವುಗಳನ್ನು ನೈಸ್‌ ರಸ್ತೆ ಜಂಕ್ಷನ್‌ ಬಳಿ ನಿಲುಗಡೆ ಮಾಡಿ ಪಿಕ್‌ ಆವರ್‌ ಬಳಿಕ ಕಳುಹಿಸಲಾಗುತ್ತಿದೆ. ಅದೇ ರೀತಿ ಮಾಗಡಿ ರಸ್ತೆ, ನಾಗರಬಾವಿ ಹೊರವರ್ತುಲ ರಸ್ತೆ ಹಾಗೂ ತುಮಕೂರು ರಸ್ತೆ ಮೂಲಕ ನಗರಕ್ಕೆ ಬರುವ ಭಾರಿ ವಾಹನಗಳನನ್ನು ಸುಂಕದಟ್ಟೆಬಳಿ ನಿಲುಗಡೆ ಮಾಡಿಸಲಾಗುತ್ತಿದೆ ಎಂದು ಡಿಸಿಪಿ ವಿವರಿಸಿದರು.

ಹೊಸೂರು ರಸ್ತೆಯಲ್ಲೂ ಭಾರೀ ವಾಹನಗಳಿಗೆ ಬ್ರೇಕ್‌

ಪಿಕ್‌ ಆವರ್‌ನಲ್ಲಿ ಭಾರೀ ವಾಹನಗಳಿಗೆ ಓಡಾಟಕ್ಕೆ ಅವಕಾಶ ನೀಡುವುದಿಲ್ಲ. ಹೊಸೂರು ರಸ್ತೆಯಲ್ಲಿ ಎಲೆಕ್ಟ್ರಾನಿಕ್‌ ಸಿಟಿ, ಬನ್ನೇರುಘಟ್ಟರಸ್ತೆಗೆ ಮೈಕೋ ಲೇಔಟ್‌, ವೈಟ್‌ಫೀಲ್ಡ್‌, ಹೊಸಕೋಟೆಯಿಂದ ಬರುವ ವಾಹನಗಳಿಗೆ ಕೆ.ಆರ್‌.ಪುರದಲ್ಲಿ ತಡೆಯಲಾಗುತ್ತಿದೆ ಎಂದು ಪೂರ್ವ ವಿಭಾಗ (ಸಂಚಾರ) ಡಿಸಿಪಿ ಕಲಾ ಕೃಷ್ಣ ಸ್ವಾಮಿ ತಿಳಿಸಿದ್ದಾರೆ.
 

click me!