ಬೆಂಗಳೂರು: ರಸ್ತೆ ನಿರ್ಮಾಣಕ್ಕೂ ಬಂತು ‘ರ‍್ಯಾಪಿಡ್‌’ ತಂತ್ರಜ್ಞಾನ..!

By Kannadaprabha NewsFirst Published Nov 24, 2022, 5:00 AM IST
Highlights

ಪಾಲಿಕೆಯಿಂದ ದೇಶದಲ್ಲೇ ಮೊದಲ ಪ್ರಯೋಗ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೊಸಮಾರ್ಗ, ಆದಿತ್ಯ ಬಿರ್ಲಾ ಅಲ್ಟ್ರಾಟೆಕ್‌ ಸಂಸ್ಥೆಯ ಸಹಯೋಗ

ಬೆಂಗಳೂರು(ನ.24): ವೈಟ್‌ಟಾಪಿಂಗ್‌ ಅಥವಾ ಟೆಂಡರ್‌ ಶ್ಯೂರ್‌ ರಸ್ತೆ ಕಾಮಗಾರಿ ಸಮಯದಲ್ಲಿ ವಾಹನ ಸಂಚಾರ ನಿಷೇಧಿಸುವುದರಿಂದ ದಟ್ಟಣೆ ಹೆಚ್ಚಾಗುತ್ತದೆ. ಅದನ್ನು ತಪ್ಪಿಸುವ ಸಲುವಾಗಿ ಪಾಲಿಕೆಯು ದೇಶದಲ್ಲೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ರ‍್ಯಾಪಿಡ್‌ ರಸ್ತೆ ಎಂಬ ತಂತ್ರಜ್ಞಾನ ಅಳವಡಿಸಿಕೊಂಡು ರಸ್ತೆ ನಿರ್ಮಿಸುತ್ತಿದೆ.

ರ‍್ಯಾಪಿಡ್‌ ರಸ್ತೆಯನ್ನು ಪ್ರೀಕಾಸ್ಟ್‌ ಪೋಸ್ಟ್‌ ಟೆನ್ಷನಿಂಗ್‌ ಕಾಂಕ್ರೀಟ್‌ ಪೇವ್‌ಮೆಂಟ್‌ (ಪ್ರೀ ಕಾಸ್ಟ್‌ ಪ್ಯಾನಲ್‌) ನಿಂದ ನಿರ್ಮಿಸಲಾಗುತ್ತಿದೆ. ಮೊದಲಿಗೆ ರಸ್ತೆಯನ್ನು ಸಮತಟ್ಟಾಗಿ ಮಾಡಿಕೊಂಡು ಅದರ ಮೇಲೆ ಫ್ರೀಕಾಸ್ಟ್‌ ಪ್ಯಾನಲ್‌ಗಳನ್ನು ಅಳವಡಿಸಲಾಗುತ್ತದೆ. ಪ್ರತಿ ಪ್ರೀಕಾಸ್ಟ್‌ ಪ್ಯಾನಲ್‌ಗಳಲ್ಲಿ 4 ರಂಧ್ರಗಳಿರಲಿದ್ದು, ವಾಹನಗಳು ಇದರ ಮೇಲೆ ಸಂಚರಿಸುವಾಗ ವಾಹನಗಳ ಭಾರದಿಂದ ಪ್ಯಾನಲ್‌ಗಳು ಅಲುಗಾಡದಂತೆ ಒಂದು ಪ್ಯಾನಲ್‌ನಿಂದ ಮತ್ತೊಂದು ಪ್ಯಾನಲ್‌ಗೆ ಪೋಸ್ಟ್‌ ಟೆನ್ಷನಿಂಗ್‌(ಸ್ಟೀಲ್‌ ತಂತಿಗಳು) ಮಾಡಲಾಗುತ್ತದೆ. ಇದರಿಂದ ಎಷ್ಟೇ ಭಾರದ ವಾಹನಗಳು ಸಂಚರಿಸಿದರೂ ಯಾವುದೇ ಸಮಸ್ಯೆಯಾಗುವುದಿಲ್ಲ.

Bengaluru Accidents: ವೈಟ್‌ಟಾಪಿಂಗ್‌ ರಸ್ತೆ ಇದೀಗ ಆ್ಯಕ್ಸಿಡೆಂಟ್‌ ಹಾಟ್‌ಸ್ಪಾಟ್‌

ಒಂದು ಪ್ರೀಕಾಸ್ಟ್‌ ಪ್ಯಾನಲ್‌ 5 ಅಡಿ ಅಗಲ, 20 ಅಡಿ ಉದ್ದ ಹಾಗೂ 7 ಇಂಚು ದಪ್ಪವಿರುತ್ತದೆ. ಪ್ರತಿ 45 ಮೀಟರ್‌ಗೂ ರಾರ‍ಯಪಿಡ್‌ ಹಾರ್ಡನಿಂಗ್‌ ಕಾಂಕ್ರೀಟ್‌ ಹಾಕಲಾಗುತ್ತದೆ. ಫ್ರೀಕಾಸ್ಟ್‌ ಪ್ಯಾನಲ್‌ಗಳನ್ನು ಬೇರೆಡೆ ತಯಾರಿಸಿ ಕ್ಯೂರಿಂಗ್‌ ಮಾಡಿಕೊಂಡು ತರಲಾಗುತ್ತದೆ. ರಸ್ತೆಗಳ ವಿನ್ಯಾಸಕ್ಕೆ ತಕ್ಕಂತೆ ಪ್ಯಾನಲ್‌ಗಳನ್ನು ಸಿದ್ಧಪಡಿಸಲಾಗುತ್ತದೆ ಎಂದು ಪಾಲಿಕೆ ಎಂಜಿನಿಯರ್‌ಗಳು ತಿಳಿಸಿದ್ದಾರೆ.

ಬುಧವಾರ ನಗರದ ಹಳೆ ಮದ್ರಾಸ್‌ ರಸ್ತೆಯ ಹೊಸ ಬಿನ್ನಮಂಗಲ ವೃತ್ತದಲ್ಲಿ ಪ್ರಾಯೋಗಿಕವಾಗಿ ನಿರ್ಮಾಣ ಮಾಡುತ್ತಿರುವ 500 ಮೀಟರ್‌ ಉದ್ದದ ರಾರ‍ಯಪಿಡ್‌ ರಸ್ತೆ (ಪ್ರೀಕಾಸ್ಟ್‌ ಪೋಸ್ಟ್‌ ಟೆನ್ಷನಿಂಗ್‌ ಕಾಂಕ್ರೀಟ್‌ ಪೇವ್‌ಮೆಂಟ್‌) ಕಾಮಗಾರಿಯನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಪರಿಶೀಲಿಸಿದರು.

ಬೆಂಗಳೂರು: ಥಣಿಸಂದ್ರ, ವಿಶ್ವೇಶ್ವರಪುರ ವಾರ್ಡ್‌ ರಸ್ತೆ ಕಾಮಗಾರಿ ಪರಿಶೀಲಿಸಿದ ಮೇಯರ್‌

ದೇಶದಲ್ಲೇ ಮೊದಲು

ಬಿಬಿಎಂಪಿಯು ಆದಿತ್ಯ ಬಿರ್ಲಾ ಅಲ್ಟ್ರಾ ಟೆಕ್‌ ಸಂಸ್ಥೆಯ ಸಹಯೋಗದೊಂದಿಗೆ ರ‍್ಯಾಪಿಡ್‌ ರಸ್ತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸದರಿ ರಸ್ತೆಯು ದೀರ್ಘಕಾಲ ಬಾಳಿಕೆ ಬರಲಿದ್ದು, ದೇಶದಲ್ಲಿ ಇದೇ ಮೊದಲ ಬಾರಿಗೆ ರಾರ‍ಯಪಿಡ್‌ ರಸ್ತೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಹಳೆ ಮದ್ರಾಸ್‌ ರಸ್ತೆಯ ಹೊಸ ಬಿನ್ನಮಂಗಲ ವೃತ್ತದ ಬಳಿ ರಾರ‍ಯಪಿಡ್‌ ರಸ್ತೆ ನಿರ್ಮಾಣ ಮಾಡುತ್ತಿದ್ದು, ಮಂಗಳವಾರದಿಂದ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಈ ಪೈಕಿ 500 ಮೀಟರ್‌ ಉದ್ದದ ರಸ್ತೆಯಲ್ಲಿ ಈವರೆಗೆ ಸುಮಾರು ಸುಮಾರು 100 ಮೀಟರ್‌ಗಳಿಗೆ ಪ್ರೀಕಾಸ್ಟ್‌ ಪ್ಯಾನಲ್‌ಗಳನ್ನು ಅಳವಡಿಸಲಾಗಿದ್ದು, ಇನ್ನೆರಡು ದಿನದೊಳಗಾಗಿ ರಾರ‍ಯಪಿಡ್‌ ರಸ್ತೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ವೈಟ್‌ಟಾಪಿಂಗ್‌ ಅಥವಾ ಇತರೆ ಕಾಮಗಾರಿ ಉದ್ದೇಶದಿಂದ ವಾಹನ ಸಂಚಾರ ನಿಷೇಧಿಸಿದರೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಅದನ್ನು ತಡೆಗಟ್ಟುವ ಉದ್ದೇಶದಿಂದ ರಾರ‍ಯಪಿಡ್‌ ರಸ್ತೆ ತಂತ್ರಜ್ಞಾನದಲ್ಲಿ ಪ್ರೀಕಾಸ್ಟ್‌ ಪ್ಯಾನಲ್‌ ಅಳವಡಿಸಿದ ಕೂಡಲೇ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬಹುದು ಅಂತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ. 
 

click me!