ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಈಗ ರಸ್ತೆ ಗುಂಡಿಗಳ ಊರು!

Published : Feb 01, 2025, 07:50 AM IST
ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಈಗ ರಸ್ತೆ ಗುಂಡಿಗಳ ಊರು!

ಸಾರಾಂಶ

ಬೆಂಗಳೂರು ನಗರದ ಜಂಕ್ಷನ್‌ಗಳಲ್ಲಿ ಹೊಸದಾಗಿ ಸಿಗ್ನಲ್ ಅಳವಡಿಕೆ ಮಾಡುವ ಕಾರ್ಯಕ್ಕೆ ನಗರ ಸಂಚಾರಿ ಪೊಲೀಸ್ ಇಲಾಖೆಯಿಂದ ಜಂಕ್ಷನ್‌ಗಳನ್ನು ಅಗೆವ ಕೆಲಸ ಮಾಡಲಾಗುತ್ತಿದೆ. ಜತೆಗೆ, ಜಲಮಂಡಳಿ, ಬೆಸ್ಕಾಂ ಸೇರಿ ವಿವಿಧ ಇಲಾಖೆಗಳು ರಸ್ತೆ ಅಗೆಯುತ್ತಿದ್ದಾರೆ. ಅಗೆದ ರಸ್ತೆಗಳನ್ನು ವ್ಯವಸ್ಥಿತವಾಗಿ ಮುಚ್ಚುವ ಕೆಲಸ ಮಾಡುತ್ತಿಲ್ಲ. ಇದು ವಾಹನ ಸವಾರರಿಗೆ ಮತ್ತಷ್ಟು ಸಮಸ್ಯೆ ಉಂಟು ಮಾಡಿದೆ.

ವಿಶ್ವನಾಥ ಮಲೇಬೆನ್ನೂರು 

ಬೆಂಗಳೂರು(ಫೆ.01):  ದೇಶದಲ್ಲಿ ಅತಿ ಹೆಚ್ಚು ರಸ್ತೆ ಗುಂಡಿ ಹಾಗೂ ತೇಪೆ ಹಾಕಿದ ರಸ್ತೆಗಳ ಸ್ಪರ್ಧೆ ನಡೆಸಿದರೆ ಬೆಂಗಳೂರು ಮೊದಲ ಸ್ಥಾನ ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬಂತಿದೆ ರಾಜಧಾನಿಯ ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ.

ಹೌದು. ಸಿಲಿಕಾನ್ ಸಿಟಿ, ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ ರಸ್ತೆಗಳ ಸ್ಥಿತಿ ದಾರುಣವಾಗಿದ್ದು, ನಗರದಲ್ಲಿ ಒಂದೇ ಒಂದು ತೇಪೆ ಹಾಕದ ರಸ್ತೆ ಇಲ್ಲ, ಎಲ್ಲಾ ರಸ್ತೆಗಳಲ್ಲೂ ಗುಂಡಿ ಮುಚ್ಚಿದ ತೇಪೆಗಳು ಕಾಣುತ್ತವೆ. ಇನ್ನು ರಸ್ತೆ ಗುಂಡಿ ಬಗ್ಗೆ ಹೇಳುವುದೇ ಬೇಡ. ವಿಧಾನಸೌಧ, ರಾಜ ಭವನ, ಹೈಕೋರ್ಟ್, ಬಿಬಿಎಂಪಿ, ಕೆ.ಆರ್. ಮಾರುಕಟ್ಟೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಪುಟ ಸಚಿವರ ಸರ್ಕಾರಿ ನಿವಾಸಗಳು ಇರುವ ರಸ್ತೆಗಳು ಹಾಗೂ ಆ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಗುಂಡಿಗಳು ರಾಜಾಜಿಸುತ್ತಿವೆ. ಇನ್ನುಳಿದಂತೆ ಅತಿ ಹೆಚ್ಚು ವಾಹನ ಸಂಚಾರ ಮಾಡುವ ನಗರದ ಕೇಂದ್ರ ಭಾಗದ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು ಆಗಿದೆ.

'ಬೆಂಗಳೂರು ರಸ್ತೆಗಳ ನಿರ್ವಹಣೆ ಬಿಬಿಎಂಪಿ ಬದಲು ELCITA ಮಾಡಲಿ..' ಸರ್ಕಾರಕ್ಕೆ ಆಗ್ರಹಿಸಿದ ಕಿರಣ್ ಮಜುಂದಾರ್ ಶಾ

ಓಡಾಟವೇ ಸರ್ಕಸ್: 

ರಸ್ತೆಗಳ ಹೆಜ್ಜೆ ಹೆಜ್ಜೆಗೂ ತೇಪೆ ಹಾಗೂ ಗುಂಡಿಗಳು ಇರುವುದರಿಂದ ವಾಹನಗಳ ಸಂಚಾರವೇ ದೊಡ್ಡ ಸರ್ಕಸ್ ಆಗಿದೆ. ಅದರಲ್ಲೂ ಬೈಕ್ ಹಾಗೂ ಗೂಡ್ಸ್ ವಾಹನಗಳ ಸಂಚಾರ ಮಾಡುವ ಚಾಲಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ತೇಪೆ ಹಾಗೂ ರಸ್ತೆ ಗುಂಡಿಗಳ ಸಮಸ್ಯೆಯಿಂದ ಅನೇಕ ದ್ವಿಚಕ್ರ ವಾಹನ ಚಾಲಕರು ಅಪಘಾತಕ್ಕೆ ತುತ್ತಾಗಿ ಹಾಸಿಗೆ ಹಿಡಿಯುವಂತಾಗಿದೆ. ಈ ಹಿಂದೆ ಮಳೆಗಾಲದಲ್ಲಿ ಬಿದ್ದ ಗುಂಡಿಗಳನ್ನು ಅವೈಜ್ಞಾನಿಕವಾಗಿ ಮುಚ್ಚುವ ಕೆಲಸ ಮಾಡಲಾಗಿತ್ತು. ಇದೀಗ ದಿನ ಕಳೆದಂತೆ ತೇಪೆಗಳು ಕಿತ್ತು ಬರುತ್ತಿವೆ. ಜತೆಗೆ, ಕಿತ್ತು ಬಂದ ಡಾಂಬರ್‌ನಲ್ಲಿ ಇರುವ ಜಲ್ಲಿಕಲ್ಲುಗಳು ರಸ್ತೆ ತುಂಬಾ ಹರಡಿಕೊಳ್ಳುತ್ತಿವೆ. ಇದರಿಂದ ಬೈಕ್ ಸವಾರರು ಜಾರಿ ಬೀಳುತ್ತಿದ್ದಾರೆ. 

3 ವರ್ಷದಿಂದ ಡಾಂಬರ್ ಹಾಕಿಲ್ಲ: 

ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಬೇಕಾದ ಬಿಬಿಎಂಪಿಯ ಅಧಿಕಾರಿಗಳು, ನಗರದಲ್ಲಿರುವ 1,400 ಕಿ.ಮೀ ಉದ್ದದ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳಿಗೆ ಡಾಂಬರ್ ಹಾಕುವ ಕೆಲಸ ಮಾಡಿಲ್ಲ. ಹೀಗಾಗಿ, ರಸ್ತೆಗಳು ಗುಣಮಟ್ಟ ಕಳೆದುಕೊಂಡಿದ್ದು, ಗುಂಡಿಗಳು ಸೃಷ್ಟಿಯಾಗುತ್ತಿವೆ ಎನ್ನುವ ಸಬೂಬು ಹೇಳುತ್ತಿದ್ದಾರೆ. ಆದರೆ, ನಗರದಲ್ಲಿ ಇತ್ತೀಚೆಗೆ ಅಭಿವೃದ್ಧಿಪಡಿಸಿದ ರಸ್ತೆಗಳ ಗುಂಡಿ ಮುಚ್ಚಿ ನಿರ್ವಹಣೆಯನ್ನು ಕಾಮಗಾರಿ ನಡೆಸಿದ ಗುತ್ತಿಗೆ ಸಂಸ್ಥೆ ಅಥವಾ ಗುತ್ತಿಗೆದಾರ ಮಾಡಬೇಕು. ಆದರೆ, ಗುತ್ತಿಗೆದಾರರು ಮಾಡುತ್ತಿಲ್ಲ. ಬಿಬಿಎಂಪಿ ಅಧಿಕಾರಿಗಳು ಗುತ್ತಿಗೆದಾರರಿಂದ ಕೆಲಸ ಮಾಡಿಸುವ ಗೋಜಿಗೆ ಹೋಗುತ್ತಿಲ್ಲ.

ಬೆಂಗಳೂರು ಭಾರಿ ಮಳೆ: ರಸ್ತೆ ಗುಂಡಿಯ ನೀರಲ್ಲಿ 'ಈಜಾಡಿದ' ಎಎಪಿ ನಾಯಕ!

ಡಾಂಬರೀಕರಣ ಬಗ್ಗೆ 5 ತಿಂಗಳಿಂದ ಮಾತು, ಕೆಲಸ ಮಾತ್ರ ಇಲ್ಲ

ನಗರದ ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ. ಕಳೆದ ನವೆಂಬರ್ ನಲ್ಲಿಯೇ ನಗರದ 459 ಕಿಮೀ ಉದ್ದದ ಮುಖ್ಯ ರಸ್ತೆಗಳ ಮೇಲದರ ತೆಗೆದು ಹೊಸದಾಗಿ ಡಾಂಬರೀಕರಣ ಮಾಡಲಾ ಗುವುದು, ಅದಕ್ಕಾಗಿ 660 ಕೋಟಿ ರು. ವೆಚ್ಚ ಮಾಡಲಾಗುವುದು ಎಂದು ಕಳೆದ ಐದು ತಿಂಗಳಿನಿಂದ ಹೇಳಿಕೊಂಡು ಬಿಬಿಎಂಪಿ ಅಧಿಕಾರಿಗಳು ಬರುತ್ತಿದ್ದಾರೆ. ಆದರೆ, ಈವರೆಗೆ ಡಾಂಬರೀಕರಣ ಮಾಡುವ ಕಾಮಗಾರಿಯನ್ನು ಆರಂಭಿಸಿಲ್ಲ. ಇನ್ನೇನು ಒಂದೆರಡು ತಿಂಗಳಲ್ಲಿ ಮತ್ತೆ ಪೂರ್ವ ಮುಂಗಾರು ಆರಂಭಗೊಳ್ಳಲಿದೆ. ಆಗ ಮತ್ತೆ ನಗರದಲ್ಲಿ ಮಳೆ ಆರಂಭಗೊಳ್ಳಲಿದ್ದು, ಪರಿಸ್ಥಿತಿ ಮತ್ತಷ್ಟು ಆಫ್ಘಾನವಾಗಲಿದೆ.

ಬೇಕಾಬಿಟ್ಟಿ ರಸ್ತೆ ಅಗೆತ

ನಗರದ ಜಂಕ್ಷನ್‌ಗಳಲ್ಲಿ ಹೊಸದಾಗಿ ಸಿಗ್ನಲ್ ಅಳವಡಿಕೆ ಮಾಡುವ ಕಾರ್ಯಕ್ಕೆ ನಗರ ಸಂಚಾರಿ ಪೊಲೀಸ್ ಇಲಾಖೆಯಿಂದ ಜಂಕ್ಷನ್‌ಗಳನ್ನು ಅಗೆವ ಕೆಲಸ ಮಾಡಲಾಗುತ್ತಿದೆ. ಜತೆಗೆ, ಜಲಮಂಡಳಿ, ಬೆಸ್ಕಾಂ ಸೇರಿ ವಿವಿಧ ಇಲಾಖೆಗಳು ರಸ್ತೆ ಅಗೆಯುತ್ತಿದ್ದಾರೆ. ಅಗೆದ ರಸ್ತೆಗಳನ್ನು ವ್ಯವಸ್ಥಿತವಾಗಿ ಮುಚ್ಚುವ ಕೆಲಸ ಮಾಡುತ್ತಿಲ್ಲ. ಇದು ವಾಹನ ಸವಾರರಿಗೆ ಮತ್ತಷ್ಟು ಸಮಸ್ಯೆ ಉಂಟು ಮಾಡಿದೆ.

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ