ಆಧುನಿಕ ತಂತ್ರಜ್ಞಾನದ ಭರಾಟೆಯ ನಡುವೆ ಕೂಡ ಮಠಮಾನ್ಯಗಳು, ಹರ-ಗುರು ಚರಮೂರ್ತಿಗಳಿಂದ ದೇಶದ ಸಂಸ್ಕೃತಿ, ಪರಂಪರೆ ಉಳಿಸುವ ಕೆಲಸವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.
ಎಚ್.ಡಿ. ರಂಗಸ್ವಾಮಿ
ನಂಜನಗೂಡು (ಜ.31): ಆಧುನಿಕ ತಂತ್ರಜ್ಞಾನದ ಭರಾಟೆಯ ನಡುವೆ ಕೂಡ ಮಠಮಾನ್ಯಗಳು, ಹರ-ಗುರು ಚರಮೂರ್ತಿಗಳಿಂದ ದೇಶದ ಸಂಸ್ಕೃತಿ, ಪರಂಪರೆ ಉಳಿಸುವ ಕೆಲಸವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ತಾಲೂಕಿನ ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿರುವ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಭಜನಾಮೇಳದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಪ್ರಾಚೀನ ಸಂಸ್ಕೃತಿಯನ್ನು ಹೊಂದಿರುವ ಸುತ್ತೂರು ಮಠ ತ್ರಿವಿಧ ದಾಸೋಹದ ಮೂಲಕ ನಾಡು ಕಟ್ಟುವ ಕೆಲಸವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ.
ಅಲ್ಲದೆ ಜಾತ್ರೆ ಬರಿ ಸಡಗರ ಸಂಭ್ರಮಕ್ಕೆ ಸೀಮಿತಗೊಳ್ಳದೆ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು 2047ಕ್ಕೆ ಅಭಿವೃದ್ದಿ ಹೊಂದಿದ ದೇಶವಾಗಿ ಪರಿವರ್ತನೆಗೊಳ್ಳಲು ಸ್ವದೇಶಿ ಉತ್ಪನ್ನಗಳಿಗೆ ಬೆಂಬಲ ನೀಡಬೇಕು ಎಂಬ ಆಶಯಕ್ಕೆ ಶ್ರೀಮಠ ಜಾತ್ರೆ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಜೊತೆಗೆ ರೈತರ ಕೃಷಿಗೆ ಪ್ರೋತ್ಸಾಹ ನೀಡಿ, ಗುಡಿ ಕೈಗಾರಿಕೆಗಳ ಉತ್ಪನ್ನಗಳಿಗೆ, ರೈತರ ಬೆಳೆಗಳಿಗೆ, ಅಲೆಮಾರಿ ಜನಗಳಿಗೂ ಸಹ ಮಾರುಕಟ್ಟೆ ಸೌಲಭ್ಯವನ್ನು ಒದಗಿಸುವ ಮೂಲಕ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದೆ ಎಂದರು. ನಾನು ರಾಜಕಾರಣಿಯಾಗಿ ನಾಡಿನಲ್ಲಿ ಗುರುತಿಸಿಕೊಂಡಿರುವುದು, ಶಿಕಾರಿಪುರದ ಶಾಸಕನಾಗಿ ಆಯ್ಕೆಯಾಗಿರುವುದಕ್ಕೆ ವರುಣ ಕ್ಷೇತ್ರದ ಮತದಾರರು ಮತ್ತು ಕಾರ್ಯಕರ್ತರು ನೀಡಿದ ಪ್ರೀತಿ ಕಾರಣ, ಆದ್ದರಿಂದ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ನಾನು ತಪ್ಪದೆ ಭಾಗಿಯಾಗಿದ್ದೇನೆ ಎಂದು ಅವರು ತಿಳಿಸಿದರು.
ಕುಂಭಮೇಳ ಟೀಕಿಸುವ ಕಾಂಗ್ರೆಸ್‌ನವರು ಅಯೋಗ್ಯರು: ಬಿ.ವೈ.ವಿಜಯೇಂದ್ರ
ಭಜನೆಯಿಂದ ನಮ್ಮ ಧರ್ಮ, ಸಂಸ್ಕೃತಿ ಉಳಿದಿದೆ: ಆರ್.ಎಸ್.ಎಸ್. ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಭಜನೆ ಸಮಾರೋಪ ಭಾಷಣದಲ್ಲಿ ಮಾತನಾಡಿ, ಭಜನೆ ಕೇವಲ ಭಜನೆ ಅಲ್ಲ ನಮ್ಮ ಸಂಸ್ಕೃತಿಯ ಉತ್ಸವ, ಭಜನೆಯಿಂದ ನಮ್ಮ ಧರ್ಮ, ಸಂಸ್ಕೃತಿ, ಸಾಹಿತ್ಯ, ಸಂಗೀತ ಉಳಿದಿದೆ ಜೊತೆಗೆ, ಗ್ರಾಮೀಣ ಜನರ ಭಜನೆ ನಮ್ಮ ಸಮಾಜದಲ್ಲಿ ಜಾತೀಯತೆಯನ್ನು ದೂರ ಮಾಡಿ ಏಕತೆಯನ್ನು ಮೂಡಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಭಜನೆ ನಶಿಸುತ್ತಿರುವ ಕಾಲಘಟ್ಟದಲ್ಲಿ ಸುತ್ತೂರು ಜಾತ್ರೆ ಭಜನೆಯ ಉತ್ತೇಜನಕ್ಕಾಗಿ ಭಜನಾ ಮೇಳವನ್ನು ಆಯೋಜಿಸಿ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಅಲ್ಲದೆ ಮಠಮಾನ್ಯಗಳು ಜನರ ಭೌತಿಕ ಜೀವನಕ್ಕೆ ಬೇಕಾದ ಅನ್ನ, ಅಕ್ಷರ, ಜ್ಞಾನ, ವಸ್ತ್ರಗಳನ್ನು ಇರುವವರಿಂದ ಪಡೆದು ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ, ತಲುಪಿಸುವ ಕಾಯಕದಲ್ಲಿ ತೊಡಗಿ ಸಮಾಜದಲ್ಲಿ ಸೇತುವೆಯಾಗಿ ಕೆಲಸ ನಿರ್ವಹಿಸುವ ಮೂಲಕ ಸಮಾಜ ತನ್ನ ಕಾಲ ಮೇಲೆ ಸ್ವಾವಲಂಬಿಯಾಗಿ ನಿಲ್ಲಲು ನೆರವಾಗುತ್ತಿವೆ. ಮಠಮಾನ್ಯಗಳ ಇಂತಹ ಸೇವಾ ಕಾರ್ಯದಿಂದಾಗಿ ಭಾರತ ದೇಶದಲ್ಲಿ ಸಮಾಜ ತಲೆ ಎತ್ತಿ ನಿಲ್ಲಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ಮೈಸೂರು ಸಾಂಸ್ಕೃತಿಕ ಮತ್ತು ಧಾರ್ಮಿಕ ನಗರಿ: ಮೇಘಾಲಯದ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್ ಮಾತನಾಡಿ, ಮೈಸೂರಿನ ಅರಸರು ಎಲ್ಲ ಹಂತಗಳಲ್ಲೂ ಜನರಿಗೆ ವ್ಯವಸ್ಥಿತ ಬದುಕು ಕಟ್ಟಿಕೊಳ್ಳುವಂತಹ ಸಮಾಜವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿದ್ದಾರೆ, ಆದ್ದರಿಂದ ಮೈಸೂರು ಸಾಂಸ್ಕೃತಿಕ ಮತ್ತು ಧಾರ್ಮಿಕ ನಗರಿ ಎಂದು ಮೈಸೂರಿನ ಬಗ್ಗೆ ಮೇಘಾಲಯದ ಜನರಲ್ಲಿ ಅಪಾರ ಗೌರವವಿದೆ, ಮೈಸೂರು ಅರಸರ ನಂತರ ಇಲ್ಲಿನ ಧಾರ್ಮಿಕ ಪರಂಪರೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸುತ್ತೂರು ಮಠ ಜವಾಬ್ದಾರಿ ಹೊತ್ತು ಮುಂದಿನ ಪೀಳಿಗೆಗೆ ವರ್ಗಾಯಿಸುವಂತಹ ಕೆಲಸವನ್ನು ಮಾಡುತ್ತಿದೆ, ಜೊತೆಗೆ ಮೇಘಾಲಯದ ಅನಾಥ ಮಕ್ಕಳಿಗೂ ಆಶ್ರಯ ನೀಡಿದೆ, ಸುತ್ತೂರು ಶ್ರೀಗಳು ನಾಡಿಗೆ ವಿಪತ್ತು ಒದಗಿ ಸಂಕಷ್ಟದ ಸಮಯದಲ್ಲಿದ್ದಾಗ ಮುಂದೆ ನಿಂತು ಜವಾಬ್ದಾರಿಯನ್ನು ಹೊತ್ತು ಸಂಕಷ್ಟವನ್ನು ನಿವಾರಿಸುವ ಕಾಯಕಕ್ಕೆ ಮುಂದಾಗುವುದು ಸಮಾಜಕ್ಕೆ ಪ್ರೇರಣಾ ಶಕ್ತಿಯನ್ನು ನೀಡುತ್ತದೆ ಎಂದರು.
ಮುಡಾ ಕೇಸಲ್ಲಿ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದ್ರೆ ಹೋರಾಟ: ವಿಜಯೇಂದ್ರ
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜಿ, ಮನಕವಾಡದ ಅನ್ನದಾನೀಶ್ವರ ದೇವಮಂದಿರ ಮಹಾಪೀಠದ ಶ್ರೀಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ಮಾಜಿ ಶಾಸಕ ನಿರಂಜನ್ ಕುಮಾರ್, ಯುಎಸ್.ಎ ಉದ್ಯಮಿ ಸೆಲ್ವಜಯರಾಮನ್, ನವದೆಹಲಿಯ ಉದ್ಯಮಿ ಸಂಜಯ್ ಪಾಟೀಲ್, ಆಕಾಶ್ ಶೆಲ್ವ, ಕಾಲ್ಕೇರಪ್ಪ, ವೆಂಕಟರಾಮನ್ ಜೀ, ವಿನಯಕುಮಾರ್ ಇದ್ದರು. ಡಾ. ಸುದೀಪ್ ಸ್ವಾಗತಿಸಿದರು.