ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಇದರ ಮಧ್ಯೆ ಬಿಸಿಲನಾಡು ಕೊಪ್ಪಳ ಜಿಲ್ಲೆಯಲ್ಲೂ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡು, ಶಾಲೆ ಕಾಲೇಜುಗಳು ರಜೆ ಘೋಷಿಸಿವೆ.
ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ (ಆ.2) : ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಇದರ ಮಧ್ಯೆ ಬಿಸಿಲನಾಡು ಕೊಪ್ಪಳ ಜಿಲ್ಲೆಯಲ್ಲೂ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡು ಸಾಕಷ್ಟು ತೊಂದರೆ ಆಗಿದೆ. ಕೊಪ್ಪಳ(koppala) ಜಿಲ್ಲೆ ಅಂದರೆ ಸಾಕು ನಮಗೆ ನೆನಪಿಗೆ ಬರುವುದು ಇದೊಂದು ಬರಪೀಡಿತ ಹಾಗೂ ಬಿಸಿಲು ಹೆಚ್ಚಾಗಿರುವ ಜಿಲ್ಲೆ ಎಂದು. ಆದರೆ ಈ ವರ್ಷ ಮಾತ್ರ ಅದ್ಯಾಕೋ ಏನೋ ಮಳೆರಾಯ ಕೊಪ್ಪಳ ಜಿಲ್ಲೆಯ ಮೇಲೆ ಕೃಪೆ ತೋರಿದ್ದಾನೆ. ಅದು ಅಲ್ಪಸ್ವಲ್ಪ ಅಲ್ಲ, ಬದಲಾಗಿ ಹೆಚ್ಚಿನ ಪ್ರಮಾಣದಲ್ಲಿ ಕೃಪೆ ತೋರಿದ್ದಾನೆ. ಪರಿಣಾಮವಾಗಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಸಾಕಷ್ಟು ಅವಾಂತರಗಳಾಗಿವೆ.
ಕೊಪ್ಪಳಕ್ಕೆ ಸಿಎಂ ಬಂಪರ್ ಕೊಡುಗೆ; ಶೀಘ್ರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ
ಶಾಲೆ,ಕಾಲೇಜು,ಅಂಗನವಾಡಿಗಳಿಗೆ ರಜೆ :
ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಬೆಳಹಿನ ಜಾವ 5 ಗಂಟೆಯಿಂದ ಆರಂಭವಾದ ಮಳೆ 9 ಗಂಟೆಯಾದರೂ ಮುಂದುವರೆದೇ ಇತ್ತು. ಈ ಹಿನ್ನಲೆಯಲ್ಲಿ ಮಳೆಯಲ್ಲಿಯೇ ವಿದ್ಯಾರ್ಥಿಗಳು ಶಾಲೆ,ಕಾಲೇಜುಗಳಿಗೆ ತೆರಳುವುದು ಕಷ್ಟವಾಯಿತು. ಈ ಹಿನ್ನಲೆಯಲ್ಲಿ ಸಮಸ್ಯೆ ಅರಿತ ಜಿಲ್ಲಾಧಿಕಾರಿ ಸುಂದರೇಶಬಾಬು , ಮಳೆ ಹಿನ್ನಲೆಯಲ್ಲಿ ಇಂದು ಒಂದು ದಿನ ಶಾಲೆ,ಕಾಲೇಜುಗಳಿಗೆ ರಜೆಯನ್ನು ಜಿಲ್ಲಾಧಿಕಾರಿ ಸುಂದರೇಶಬಾಬು(DC Sundaresh Babu) ಘೋಷಿಸಿದರು.
ಮಳೆಯಿಂದ ಚರಂಡಿಗಳು ಬ್ಲಾಕ್ :
ಇನ್ನು ಜಿಲ್ಲೆಯಲ್ಲಿ ಇಂದು ಬೆಳಗ್ಗೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನಲೆಯಲ್ಲಿ ಕೊಪ್ಪಳ(Koppala) ಜಿಲ್ಲೆಯ ಗಂಗಾವತಿ(Gangavati) ನಗರದ 13 ನೇ ವಾರ್ಡ್ ಜುಲಾಯಿ ನಗರ(Julai Nagar)ದಲ್ಲಿ ಮನೆಗಳಿಗೆ ನುಗ್ಗಿದೆ. ಇದಕ್ಕೆ ಪ್ರಮುಖವಾದ ಮನೆಯ ಮುಂದಿನ ಚರಂಡಿಯಿ ಬ್ಲಾಕ್ ಆಗಿದ್ದರಿಂದ ಚರಂಡಿಗೆ ಹೋಗಬೇಕಿದ್ದ ನೀರು, ಮನೆಗಳಿಗೆ ನುಗ್ಗಿದ್ದೆ. ಇದರಿಂದಾಗಿ 13 ನೇ ವಾರ್ಡಿನ ಜನರು ಪಡಬಾರದ ಕಷ್ಟಪಡಬೇಕಾಯಿತು.
ಕೊಪ್ಪಳದಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅಭಿಯಾನ
ಮಳೆಗೆ ಕೊಚ್ಚಿಹೋದ ಭತ್ತದ ಸಸಿಗಳು:
ಇನ್ನು ಜಿಲ್ಲೆಯ ಗಂಗಾವತಿ ತಾಲೂಕು ಭತ್ತದ ಕಣಜ ಎಂದೇ ಪ್ರಸಿದ್ಧಿ ಪಡೆದಿದೆ.ಈ ಹಿನ್ನಲೆಯಲ್ಲಿ ಭತ್ತ ನಾಟಿ ಮಾಡಲು ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪೂರ (Sanapura) ಭಾಗದಲ್ಲಿ ಸಸಿಗಳನ್ನು ಹಾಕಲಾಗಿತ್ತು. ಆದರೆ ಬೆಳಗ್ಗೆಯಿಂದ ಸುರಿದ ಮಳೆಗೆ ಭತ್ತದ ಸಸಿಗಳು ಕೊಚ್ಚಿ ಹೋಗಿವೆ.ಕಳೆದ ಕೆಲ ದಿನಗಳಿಂದ ರೈತರು ಭತ್ತದ ಸಸಿ ನಾಟಿ ಮಾಡಿದ್ದರು, ಆದರೆ ನಿರಂತರ ಮಳೆ ಹಿನ್ನಲೆ ಭತ್ತ ನಾಟಿ ಮಾಡಿದ್ದ ರೈತರು ಕಂಗಾಲಾಗಿದ್ದಾರೆ.
ತುಂಬಿ ಹರಿದ ಹಳ್ಳ- ಭರ್ತಿಯಾದ ಕೆರೆ :
ಇನ್ನು ಕೊಪ್ಪಳ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಬಹುತೇಕ ಹಳ್ಳಗಳು,ಕೆರೆಗಳು, ಭರ್ತಿಯಾಗಿವೆ. ಅದರಲ್ಲಿ ವಿಶೇಷವಾಗಿ ಕೊಪ್ಪಳ ತಾಲೂಕಿನ ಸೀಗೆ ಹಳ್ಳ ರಭಸವಾಗಿ ಹರಿಯುತ್ತಿದೆ.ಈ ಹಳ್ಳದಲ್ಲಿ ದಾಟುವಾಗ ಕಾರ್ಮಿಕ ಇಲಾಖೆಗೆ ಸೇರಿದ ಶ್ರಮಿಕ ವಾಹನ ಸಿಲುಕಿ ಹಾಕಿಕೊಂಡಿತ್ತು. ಇನ್ನು ಹಳ್ಳ ರಭಸವಾಗಿ ಹರಿಯುತ್ತಿರುವುದರಿಂದ ಕಾಟ್ರಳ್ಳಿ ಸಂಪರ್ಕ ಕಡಿತವಾಗಿದ್ದು, ಜನರು ರಭಸವಾಗಿ ಹರಿಯುವ ನೀರಿನಲ್ಲಿಯೇ ಬೈಕ್,ಕಾರು,ಲಾರಿಗಳನ್ನು ತೆಗೆದುಕೊಂಡು ಹೋಗುವ ಹುಚ್ಚು ಸಾಹಸ ಮಾಡುತ್ತಿದ್ದ ದೃಶ್ಯ,ಸಾಮಾನ್ಯವಾಗಿತ್ತು. ಜೊತೆಗೆ ಮಳೆ ಹಿನ್ನಲೆಯಲ್ಲಿ ಕೊಳೂರು ಗ್ರಾಮದ ಬಳಿ ಇರುವ ಕೆರೆ ಭರ್ತಿಯಾಗಿ ಕೊಡಿ ಬಿದ್ದಿದೆ. ಇದರಿಂದಾಗೊ ರೈತರು ಸಂತಸಗೊಂಡಿದ್ದಾರೆ.
ಒಟ್ಟಿನಲ್ಲಿ ಸದಾ ಬಿಸಿಲಿನಿಂದ ಕೂಡಿರುತ್ತಿದ್ದ ಕೊಪ್ಪಳ ಜಿಲ್ಲೆ ಇದೀಗ ಮಲೆನಾಡಿನಂತಾಗಿದೆ.ಇದೇ ಮಳೆ ಮುಂದುವರೆದರೆ ರೈತರು ಸಂಕಷ್ಟಕ್ಕೆ ಸಿಲುಕುವುದಂತು ಸತ್ಯ.