ಒಂದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ, ಆಯ್ಕೆ ಮಾಡಿದಂತೆ ಜನಪ್ರತಿನಿಧಿಗಳನ್ನು ವಾಪಸ್ ಕರೆಸುವ, ಅನರ್ಹಗೊಳಿಸುವ ಅಧಿಕಾರವನ್ನು ಪ್ರಜೆಗಳಿಗೆ ನೀಡಬೇಕು ಎಂದು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.
ವಿಜಯಪುರ (ಆ.2) : ಒಂದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ, ಆಯ್ಕೆ ಮಾಡಿದಂತೆ ಜನಪ್ರತಿನಿಧಿಗಳನ್ನು ವಾಪಸ್ ಕರೆಸುವ, ಅನರ್ಹಗೊಳಿಸುವ ಅಧಿಕಾರವನ್ನು ಪ್ರಜೆಗಳಿಗೆ ನೀಡುವುದು, ನೋಟಾ ಮತಕ್ಕೆ ಮೌಲ್ಯ ಕಲ್ಪಿಸುವುದೂ ಸೇರಿದಂತೆ ಹತ್ತು ಹಲವು ಸಲಹೆಗಳು ವಿಜಯಪುರ ಜಿಲ್ಲೆಯ ಸಾರ್ವಜನಿಕರು, ಸಂಘ-ಸಂಸ್ಥೆಯ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳಿಂದ ಕೇಳಿಬಂದವು. ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಂವಾದ ಕಾರ್ಯಕ್ರಮದಲ್ಲಿ ಈ ಎಲ್ಲ ಮಹತ್ವದ ಸಲಹೆಗಳು ಕೇಳಿಬಂದವು. ಎಲ್ಲ ಸಲಹೆಗಳನ್ನು ಸಮಾಧಾನ ಚಿತ್ತದಿಂದ ಆಲಿಸಿದ ಕಾಗೇರಿ ಅವುಗಳನ್ನು ನೋಟ್ ಮಾಡಿಕೊಂಡು ಹಲವು ಸಲಹೆಗಳ ಕುರಿತು ಉನ್ನತಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಸಲಹೆ ನೀಡಿದವರನ್ನು ಹುರಿದುಂಬಿಸಿದರು.
ಗುಲಾಮಿತನದ ಮಾನಸಿಕತೆಯಲ್ಲಿ ಅಧಿಕಾರಿ ವರ್ಗ: ವಿಶ್ವೇಶ್ವರ ಹೆಗಡೆ ಕಾಗೇರಿ
undefined
ಸಮಾಜಸೇವಕ ವಾಸುದೇವ ತೋಳಬಂದಿ, ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವುದು ಸಂಪೂರ್ಣ ನಿಲ್ಲಿಸಬೇಕು ಎಂಬ ಸಲಹೆ ನೀಡಿದರೆ, ಹಿರಿಯ ಪತ್ರಕರ್ತ ಜಿ.ಎಸ್.ಕಮತರ ನೋಟಾಕ್ಕೆ ಮೌಲ್ಯ ನಿಗದಿಪಡಿಸಿ, ಶೇ.50ಕ್ಕಿಂತ ಹೆಚ್ಚು ನೋಟಾ ಚಲಾವಣೆಯಾಗಿದ್ದರೆ ಆ ಕ್ಷೇತ್ರದಲ್ಲಿ ಮತ್ತೊಮ್ಮೆ ಚುನಾವಣೆ ನಡೆಸುವ ವ್ಯವಸ್ಥೆಯಾಗಬೇಕು ಎಂದು ಸಲಹೆ ನೀಡಿದರು.
ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಗೊಳಿಸಬೇಕು ಎಂಬ ಸಲಹೆಯನ್ನು ಜಗದೀಶ ಅಕ್ಕಿ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಗೇರಿ ಅವರು, ಅನಕ್ಷರಸ್ಥರೇ ಜನರ ಭಾವನೆಗೆ ಸ್ಪಂದಿಸಿದ ಉದಾಹರಣೆ ಇದೆ. ನಮಗಿಂತ ಅವರಿಗೆ ವ್ಯಾವಹಾರಿಕ ಜ್ಞಾನ ಅಧಿಕವಾಗಿರುವ ವಿಷಯವವನ್ನು ಅಲ್ಲಗಳೆಯುವಂತಿಲ್ಲ. ಆದರೆ, ಜನಪ್ರತಿನಿಧಿಯಾಗಿ ಆಯ್ಕೆಯಾದವರಿಗೆ ಸೂಕ್ತ ಆಡಳಿತಾತ್ಮಕ ಹಾಗೂ ನಾಯಕತ್ವದ ತರಬೇತಿ ನೀಡಬೇಕು ಎಂಬುದು ನನ್ನ ಪ್ರತಿಪಾದನೆ ಎಂದರು.
ಕಾನೂನು ವಿದ್ಯಾರ್ಥಿ ಮುಖೇಶ್ ಅವರು ಆನಲೈನ್ ಮೂಲಕ ಮತದಾನ ಪ್ರಕ್ರಿಯೆ ನಿರ್ವಹಣೆಯಾಗಬೇಕು. ಇದರಿಂದ ಮತದಾನ ಪ್ರಮಾಣ ಏರಿಕೆಯಾಗಲು ಸಾಧ್ಯ ಎಂದು ಸಲಹೆ ನೀಡಿದರು. ರಾಜ್ಯಶಾಸ್ತ್ರ ವಿದ್ಯಾರ್ಥಿ ಬಾಳಪ್ಪ, ಮತದಾನಕ್ಕೆ ಒಂದೇ ಕ್ಷೇತ್ರದಲ್ಲಿ ಅವಕಾಶ, ಸ್ಪರ್ಧೆಗೆ ಎರಡು ಅಥವಾ ಅದಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಅವಕಾಶವೇಕೆ ಎಂದು ಪ್ರಶ್ನೆ ಮಾಡಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಒಳ್ಳೆಯ ಒಂದು ವಿಚಾರ ಎಂದು ಕಾಗೇರಿ ಶ್ಲಾಘಿಸಿದರು.
Mangaluru: ‘ನನ್ನ ಮತ ಮಾರಾಟಕ್ಕಿಲ್ಲ’ ಎಂದು ಜನಾಂದೋಲನವಾಗಲಿ: ಸ್ಪೀಕರ್ ಕಾಗೇರಿ
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಡಾ.ದೇವಾನಂದ ಚವ್ಹಾಣ, ಸೋಮನಗೌಡ ಪಾಟೀಲ ಸಾಸನೂರ, ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಜಿಪಂ ಸಿಇಒ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಉಪಸ್ಥಿತರಿದ್ದರು.
ವಿಜಯಪುರ ಜೊತೆ ಅವಿನಾಭಾವ ಸಂಬಂಧ:
ವಿಜಯಪುರದ ಜೊತೆ ನನ್ನ ಒಡನಾಟ, ಬಾಂಧವ್ಯದ ಬೆಸುಗೆ ಆತ್ಮೀಯವಾಗಿದೆ. ವಿಜಯಪುರದ ಬಗ್ಗೆ ನನಗೆ ಅಭಿಮಾನವಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಮಹನೀಯರಾದ ಪ್ರೊ.ಸಿ.ಎಸ್.ಕಲ್ಮಠ, ಡಾ.ಮಹೀಂದ್ರಕರ, ಭೀಮಣ್ಣ ಕೋವಳ್ಳಿ ಅವರನ್ನು ನೆನಪಿಸಿಕೊಳ್ಳಬೇಕು. ವಿಜಯಪುರವೆಂದರೆ ಸಿದ್ದೇಶ್ವರ ದೇವಾಲಯ, ಸಿದೇಶ್ವರ ಸ್ವಾಮೀಜಿ, ಗೋಳಗುಮ್ಮಟ ನೆನಪಾಗುತ್ತದೆ, ದ್ರಾಕ್ಷಿ, ದಾಳಿಂಬೆ, ಸಕ್ಕರೆ, ಬಿಳಿಜೋಳ, ಲಿಂಬೆ ಹೀಗೆ ಈ ನೆಲಕ್ಕೆ ಹಲವು ವಿಶೇಷತೆಗಳ ಸ್ಪರ್ಶವಿದೆ. ಈ ಭಾಗದಲ್ಲಿ ರೈಲು ಹೋರಾಟದಲ್ಲಿ ಮುಂಚೂಣಿಯ ಪಾತ್ರ ವಹಿಸಿದ ದಿನಗಳನ್ನು ನಾನು ಮರೆತಿಲ್ಲ, ವಿಜಯಪುರವೆಂದರೆ ನನಗೆ ಅವಿನಾಭಾವ ಅಭಿಮಾನ, ಹೆಮ್ಮೆ ಎಂದು ಕಾಗೇರಿ ಇದೇ ಸಂದರ್ಭದಲ್ಲಿ ಪ್ರಶಂಸೆಯ ಮಾತುಗಳನ್ನಾಡಿದರು.