ಮಾಗಳಕ್ಕೆ ಕುಡಿಯಲು ಚರಂಡಿ ನೀರು ಪೂರೈಕೆ!

By Kannadaprabha News  |  First Published Aug 2, 2022, 4:13 PM IST
  • ಮಾಗಳಕ್ಕೆ ಕುಡಿಯಲು ಚರಂಡಿ ನೀರು ಪೂರೈಕೆ!
  • ಹುಳು ತುಂಬಿದ ನೀರು ನೋಡಿ ಬೆಚ್ಚಿ ಬಿದ್ದ ಜನ
  • ಅರ್ಧ ಗ್ರಾಮಕ್ಕೆ ಬಹುಗ್ರಾಮ ಕುಡಿವ ನೀರು
  • ಇನ್ನರ್ಧ ಗ್ರಾಮಕ್ಕೆ ಕಲುಷಿತ ನೀರು ಪೂರೈಕೆ
  • ಕಣ್ಮುಚ್ಚಿ ಕುಳಿತ ಅಧಿಕಾರಿಗಳು, ಜನಪ್ರತಿನಿಧಿಗಳು

ಹೂವಿನಹಡಗಲಿ (ಆ.2) : ಈ ಊರಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಇದ್ದರೂ ಪ್ರಯೋಜನವಿಲ್ಲ. ನಿತ್ಯ ದುರ್ನಾತ ಬೀರುವ, ಹುಳುಗಳು ತುಂಬಿದ ನೀರೇ ಗತಿಯಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನರ ಜೀವನದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ. ತುಂಗಭದ್ರಾ ತಟದಲ್ಲಿರುವ ಮಾಗಳ ಸರಿ ಸುಮಾರು 8ರಿಂದ 10 ಸಾವಿರ ಜನಸಂಖ್ಯೆ ಇರುವ ಬಹು ದೊಡ್ಡ ಕಂದಾಯ ಗ್ರಾಮ. ಈ ಊರಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕೆಂಬ ಉದ್ದೇಶದಿಂದ, ಹಿರೇಹಡಗಲಿ -ಮಾಗಳ ರಾಜೀವ್‌ ಗಾಂಧಿ ಕುಡಿಯುವ ನೀರಿನ ಯೋಜನೆ ಇದೆ. ಅರ್ಧ ಊರಿಗೆ ಮಾತ್ರ ಯೋಜನೆಯಿಂದ ನೀರು ಪೂರೈಕೆಯಾಗುತ್ತಿದೆ. ಉಳಿದ ಅರ್ಧ ಊರಿನ ಜನರಿಗೆ ನದಿ ತೀರದ ಬಾವಿ ನೀರು ಪೂರೈಕೆಯಾಗುತ್ತಿದೆ.

ಬಳ್ಳಾರಿ: ಕಲುಷಿತ ನೀರು ಕುಡಿದು 10 ವರ್ಷದ ಬಾಲಕಿ ಸಾವು

Tap to resize

Latest Videos

undefined

ತಾಲೂಕಿನ ಮಕರಬ್ಬಿ(Makarabbi) ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಸರಣಿ ಸಾವನ್ನಪ್ಪಿರುವ ಘಟನೆ ಕಣ್ಮುಂದೆ ಇದ್ದರೂ ಕಲುಷಿತ ನೀರು ಪೂರೈಕೆ ಮಾತ್ರ ನಿಂತಿಲ್ಲ. ಇದರಿಂದ ಅಧಿಕಾರಿಗಳು ಇನ್ನೂ ಪಾಠ ಕಲಿತಿಲ್ಲ. ನಿರಂತರವಾಗಿ ಇದೇ ಕಲುಷಿತ ನೀರು ಕುಡಿದರೆ ನಮ್ಮಲ್ಲಿಯೂ ವಾಂತಿ-ಭೇದಿ ಪ್ರಕರಣ ಕಂಡುಬರುವ ಸಂಭವ ಹೆಚ್ಚಿದೆ ಎಂಬ ಭಯದಲ್ಲಿ ಗ್ರಾಮಸ್ಥರಿದ್ದಾರೆ. ಮಾಗಳ ಪಕ್ಕದಲ್ಲೇ ತುಂಗಭದ್ರೆ ತುಂಬಿ ಹರಿಯುತ್ತಿದೆ. ಆದರೆ ಶುದ್ಧ ಕುಡಿಯುವ ನೀರಿಗೆ ಜನರ ತಾತ್ವಾರ ಮಾತ್ರ ತಪ್ಪಿಲ್ಲ. ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗಿದ್ದು, ದುರ್ನಾತ ಬೀರುವ, ಹುಳು ತುಂಬಿದ ನೀರು ಪೂರೈಕೆಯಾಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.

ಗ್ರಾಮದ ಹೊರ ವಲಯದ ಲೋಕಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿ ದೊಡ್ಡ ಪ್ರಮಾಣದ ಬಾವಿಗೆ, ಬಚ್ಚಲು ಹಾಗೂ ಚರಂಡಿ ನೀರು ಸೇರುತ್ತಿದೆ. ಬಾವಿಯಲ್ಲಿನ ಕಲುಷಿತ ನೀರನ್ನು ಮೋಟಾರ್‌ ಅಳವಡಿಸಿ ಹೊರಗೆ ಹಾಕುತ್ತಿದ್ದಾರೆ. ಆ ನೀರು ಚರಂಡಿ ಮೂಲಕ ನದಿ ತೀರದ ಕುಡಿಯುವ ನೀರಿನ ಬಾವಿಗೆ ಸೇರುತ್ತಿದೆ. ಅದೇ ದುರ್ನಾತ ಹಾಗೂ ಹುಳು ತುಂಬಿದ ನೀರು ಗ್ರಾಮಕ್ಕೆ ಪೂರೈಕೆಯಾಗುತ್ತಿದೆ.

ಬಗೆಹರಿಯದ ರಾಯಚೂರು ಕಲುಷಿತ ನೀರು ಸಮಸ್ಯೆ, ಮಹಿಳೆ ಸಾವು, 40 ಜನರು ಅಸ್ವಸ್ಥ

ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್‌ ಅವೈಜ್ಞಾನಿಕವಾಗಿದೆ. ಗ್ರಾಮದಲ್ಲಿ 4 ಟ್ಯಾಂಕ್‌ಗಳಿದ್ದರೂ ಸಮರ್ಪಕ ರೀತಿಯಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಮೂರು ಟ್ಯಾಂಕ್‌ಗೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ಇನ್ನೂ ಒಂದು ಟ್ಯಾಂಕ್‌ ಇದ್ದರೂ ಅದಕ್ಕೆ ಬಹು ಗ್ರಾಮ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿ, ಜನರಿಗೆ ನೀರು ಪೂರೈಕೆ ಮಾಡಿಲ್ಲ. ಆದ್ದರಿಂದ ನಮಗೆ ಗ್ರಾಪಂ ಕಲುಷಿತ ನೀರನ್ನು ಕುಡಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬಾವಿಯಿಂದ ಪೂರೈಕೆಯಾಗುವ ಹುಳು ತುಂಬಿದ ನೀರು ಕುಡಿದ ಜನರು ಆನಾರೋಗ್ಯಕ್ಕೀಡಾಗಿದ್ದಾರೆ. ಈಗಾಗಲೇ ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದಾರೆ. ಗ್ರಾಪಂ ಸಿಬ್ಬಂದಿ ಪೂರೈಕೆ ಮಾಡುವ ಈ ನೀರು ಚರಂಡಿ ನೀರಿಗಿಂತ ಕೀಳಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ನದಿ ತೀರದ ಬಾವಿಗೆ ಚರಂಡಿ ನೀರು ಮಿಶ್ರಣವಾಗಿ ಗ್ರಾಮಕ್ಕೆ ಕಲುಷಿತ ನೀರು ಪೂರೈಕೆಯಾಗಿತ್ತು. ಈಗ ಗ್ರಾಮಕ್ಕೆ ಆ ನೀರಿನ ಪೂರೈಕೆ ನಿಲ್ಲಿಸಲಾಗಿದ್ದು, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಅರ್ಧ ಗ್ರಾಮಕ್ಕೆ ಪ್ರತ್ಯೇಕವಾಗಿ ನದಿಯಿಂದ ಪೈಪ್‌ಲೈನ್‌ ಮಾಡುವ ಕುರಿತು ಅಧಿಕಾರಿಗಳ ಜತೆಗೆ ಚರ್ಚಿಸಿದ್ದೇವೆ.

ಶ್ರೀನಿವಾಸ್‌ ಆರ್‌. ಹಿರೇಗೌಡರ್‌, ಅಧ್ಯಕ್ಷರು, ಗ್ರಾಮ ಪಂಚಾಯಿತಿ, ಮಾಗಳ.

 

ಮನೆಗಳ ನಳಕ್ಕೆ ಪೂರೈಕೆಯಾದ ನೀರು ದುರ್ನಾತದಿಂದ ಕೂಡಿದ್ದು, ಬಟ್ಟೆಯಲ್ಲಿ ನೀರು ಸೋಸಿದಾಗ ಬಟ್ಟೆತುಂಬಾ ಹುಳುಗಳಿವೆ. ಕೆಸರು ನೀರನ್ನು ಬಳಕೆ ಮಾಡಲು ಬರುತ್ತಿಲ್ಲ. ಮೈ ತೊಳೆದುಕೊಂಡರೆ ಮೈ ತುಂಬಾ ಗುಳ್ಳೆಗಳು ಎದ್ದಿವೆ. ಈ ಕುಡಿಯುವ ನೀರಿನ ಬಗ್ಗೆ ಗ್ರಾಪಂ ಕ್ರಮ ಕೈಗೊಳ್ಳದಿದ್ದರೇ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕುತ್ತೇವೆ.

ಮಾಗಳ ಗ್ರಾಮಸ್ಥರು. 

click me!