ಕರ್ನಾಟಕದಲ್ಲಿ ಮತ್ತೆ ಪ್ರವಾಹ : 3 ಜಿಲ್ಲೆಯಲ್ಲಿ ಹೈ ಅಲರ್ಟ್‌

By Kannadaprabha News  |  First Published Sep 8, 2019, 9:12 AM IST

ಮತ್ತೆ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ,ಮೂರು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 


ಬೆಂಗಳೂರು [ಸೆ.08]:  ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಶನಿವಾರವೂ ಧಾರಾಕಾರ ಮಳೆ ಮುಂದುವರಿದಿರುವುದರಿಂದ ಕೃಷ್ಣಾ ನದಿಗೆ 1.50 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತಿದ್ದು, ಉತ್ತರ ಕರ್ನಾಟಕದಲ್ಲಿ ಪ್ರವಾಹದ ಭೀತಿ ಮತ್ತಷ್ಟುಹೆಚ್ಚಾಗಿದೆ. ಅಲ್ಲದೆ, ಮಲೆನಾಡಿನ ಹಲವೆಡೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಣ್ಣಪುಟ್ಟಭೂಕುಸಿತಗಳು ಸಂಭವಿಸಿವೆ. ಇದೇ ವೇಳೆ ಉತ್ತರ ಕನ್ನಡ, ಕೊಡಗಿನಲ್ಲಿ ಮಳೆಯಬ್ಬರ ಕಡಿಮೆಯಾಗಿದ್ದು, ಪ್ರವಾಹ ಪರಿಸ್ಥಿತಿ ನಿಧಾನಕ್ಕೆ ತಹಬದಿಗೆ ಬರುತ್ತಿದೆ. ಶಿವಮೊಗ್ಗ, ದಕ್ಷಿಣ ಕನ್ನಡ, ಜಿಲ್ಲೆಗಳಲ್ಲೂ ಉತ್ತಮ ಮಳೆ ಸುರಿದಿದೆ.

ಮಹಾರಾಷ್ಟದ ಜಲಾಶಯಗಳಿಂದ ಕೃಷ್ಣಾ, ಭೀಮಾ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಮತ್ತೆ ಪ್ರವಾಹ ಭೀತಿ ಉಂಟಾಗಿದ್ದು ಜಿಲ್ಲಾಡಳಿತಗಳು ಹೈ ಅಲರ್ಟ್‌ ಘೋಷಿಸಿವೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟೂರು ಹಾಗೂ ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ ತಾಲೂಕಿನ ನಾಗನೂರು ಗ್ರಾಮಗಳ ಮಧ್ಯೆ ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಜಲಾವೃತ್ತಗೊಂಡಿದೆ. ವಿಜಯಪುರ ಜಿಲ್ಲೆಯ ಖಾನಾಪುರದಲ್ಲಿ ಜಾಂಬೋಟಿ-ಜತ್ತ, ಸಿಂಧನೂರ-ಹೆಮ್ಮಡಗಾ ರಾಜ್ಯ ಹೆದ್ದಾರಿಗಳೂ ಸ್ಥಗಿತಗೊಂಡಿವೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ 9 ಸೇತುವೆ ಜಲಾವೃತಗೊಂಡಿದೆ. ಜತೆಗೆ ಜಾಂಬೋಟಿ ಮತ್ತು ಕಣಕುಂಬಿ ಅರಣ್ಯ ಪ್ರದೇಶದ 60 ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿವೆ. ಜಿಲ್ಲೆಯ ನಾಲ್ಕು ದೇವಾಲಯಗಳು ಜಲಾವೃತವಾಗಿವೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೊಚ್ಚಿ ಹೋದ ಆಂಜನೇಯ ದೇವಸ್ಥಾನ:

ನವಿಲುತೀರ್ಥ, ತುಂಗಭದ್ರಾ, ಗೇರುಸೊಪ್ಪ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ಬಿಟ್ಟಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಗದಗ ಜಿಲ್ಲೆಯಲ್ಲಿ ತಿಂಗಳಲ್ಲಿ ಎರಡನೇ ಬಾರಿಗೆ ಮೂರು ಗ್ರಾಮಗಳು ಮುಳುಗಡೆಯಾಗಿದೆ. ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿರುವ ಹೊಳೆ ಆಂಜನೇಯ ದೇವಸ್ಥಾನವೇ ಕೊಚ್ಚಿ ಹೋದ ಘಟನೆ ಸಂಭವಿಸಿದೆ. ಗದಗದಲ್ಲಿ 4 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದ್ದು, 280ಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ತುಂಗಭದ್ರಾ ಅಣೆಕಟ್ಟಿಂದ 1.09 ಲಕ್ಷ ಕ್ಯು. ನೀರನ್ನು ನದಿಗೆ ಬಿಟ್ಟಿರುವುದರಿಂದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ನವವೃಂದಾವನ ಗಡ್ಡೆ, ಕೃಷ್ಣದೇವರಾಯನ ಮಂಟಪ, ಹಂಪಿಯ ಕೆಲ ಸ್ಮಾರಕಗಳು ಮುಳುಗಡೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಘಟ್ಟಪ್ರದೇಶಗಳಲ್ಲಿ ಗಾಳಿಯಿಂದ ಕೂಡಿದ ಭಾರೀ ಮಳೆಯಾಗುತ್ತಿರುದ್ದು ಹೇಮಾವತಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ ಸೇರಿದಂತೆ ಕೆಲವೆಡೆ ಚಿಕ್ಕಪುಟ್ಟಭೂಕುಸಿತ ಉಂಟಾಗಿದೆ.

ಮಳೆ ಸಂಬಂಧಿ ಕಾರಣಕ್ಕೆ ಮೂವರು ಸಾವು

ಬೆಂಗಳೂರು: ಪ್ರವಾಹ ಹಾಗೂ ಮಳೆ ಸಂಬಂಧಿ ಕಾರಣಗಳಿಗಾಗಿ ಶನಿವಾರ ರಾಜ್ಯದಲ್ಲಿ ಮೂವರು ಮಹಿಳೆಯರು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ವರದಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಳಹಳ್ಳಿ ಗ್ರಾಮದಲ್ಲಿ ಜಡಿ ಮಳೆಗೆ ಮನೆ ಕುಸಿದು ಉಮರ್‌ ಅಂಜುಮ್‌ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿ ಕಾವೇರಿ ನದಿಯಲ್ಲಿ ಬಟ್ಟೆತೊಳೆಯಲು ಹೋಗಿದ್ದ ಮಹದೇವಮ್ಮ(56) ನೀರುಪಾಲಾಗಿದ್ದಾರೆ. ಮನೆಯಿಂದ ಪಾತ್ರೆ ಸಾಮಾನುಗಳನ್ನು ತೆಗೆದುಕೊಂಡು ಗಂಜಿ ಕೇಂದ್ರಕ್ಕೆ ಹೋಗುತ್ತಿದ್ದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಜನವಾಡದ ಶೋಭಾ ಬಾಳಪ್ಪ ಸುತಾರ (40) ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ.

click me!