5 ತಿಂಗಳಲ್ಲಿ ನಗರದ ವಿವಿಧ ವ್ಯಾಪಾರಿ ಕೇಂದ್ರಗಳ ಮೇಲೆ ದಾಳಿ ಮಾಡಿ 32 ಟನ್ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆದು 86 ಲಕ್ಷ ರು. ದಂಡ ವಿಧಿಸಲಾಗಿದೆ.
ಬೆಂಗಳೂರು [ಸೆ.08]: ಬಿಬಿಎಂಪಿ ಆರೋಗ್ಯಾಧಿಕಾರಿಗಳು ಕಳೆದ 5 ತಿಂಗಳಲ್ಲಿ ನಗರದ ವಿವಿಧ ವ್ಯಾಪಾರಿ ಕೇಂದ್ರಗಳ ಮೇಲೆ ದಾಳಿ ಮಾಡಿ 32 ಟನ್ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆದು 86 ಲಕ್ಷ ರು. ದಂಡ ವಿಧಿಸಿದ್ದಾರೆ.
ಪರಿಸರಕ್ಕೆ ಮಾರಕವಾಗುವ ಮತ್ತು ಒಂದು ಬಾರಿ ಬಳಕೆ ಮಾಡಿ ಎಸೆಯುವ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಮಾಡಿದೆ. ಆದರೂ ನಗರದ ಹೋಟೆಲ್, ರೆಸ್ಟೋರೆಂಟ್, ತರಕಾರಿ-ಹಣ್ಣು ಮಳಿಗೆ, ಮೆಡಿಕಲ್ ಶಾಪ್, ಬೀದಿ ಬದಿ ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಸ್ಪೂನ್, ಪ್ಲೇಟ್ ಬಳಕೆ ಮತ್ತು ಮಾರಾಟ ಮಾಡುತ್ತಿದ್ದು, ಕಡಿವಾಣ ಹಾಕುವ ಉದ್ದೇಶದಿಂದ ವ್ಯಾಪಾರಿ ಮಳಿಗೆಗಳ ಮೇಲೆ ದಾಳಿ ನಡೆಸಿ ಪ್ರಸಕ್ತ ಸಾಲಿನಲ್ಲಿ 32,118 ಕೆ.ಜಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಮತ್ತು ಬಳಕೆ ಮಾಡಿದಕ್ಕೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಕಳೆದ ಏಪ್ರಿಲ್‌ನಿಂದ ಆಗಸ್ಟ್ ಅಂತ್ಯದ ವರೆಗೆ 86,78,580 ರು. ದಂಡ ವಿಧಿಸಿದ್ದಾರೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
4 ವರ್ಷದಲ್ಲಿ 3.45 ಕೋಟಿ ರು. ದಂಡ:
ಕಳೆದ ನಾಲ್ಕು ವರ್ಷದಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಎಂಟು ವಲಯದಲ್ಲಿ ದಾಳಿ ನಡೆಸಿ ಈವರೆಗೆ 2.64 ಲಕ್ಷ ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ವಶಕ್ಕೆ ಪಡೆದುಕೊಂಡು ವ್ಯಾಪಾರಿಗಳಿಗೆ 3.45 ಕೋಟಿ ರು. ದಂಡ ವಿಧಿಸಲಾಗಿದೆ. 2015-16ನೇ ಸಾಲಿನಲ್ಲಿ 16 ಸಾವಿರ ಕೆ.ಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು 29.03 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ. 2016-17ರಲ್ಲಿ 54 ಸಾವಿರ ಕೆ.ಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು ವ್ಯಾಪಾರಿಗಳಿಂದ 1 ಕೋಟಿ ರು. ದಂಡ ವಸೂಲಿ ಮಾಡಲಾಗಿತ್ತು. 2017-18ರಲ್ಲಿ 40 ಸಾವಿರ ಕೆ.ಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು 55.93 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ. 2018-19ರಲ್ಲಿ 1.12 ಲಕ್ಷ ರು. ಕೆ.ಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು 73.90 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಾವ ವಲಯದಲ್ಲಿ ಎಷ್ಟುದಂಡ? (ಏಪ್ರಿಲ್‌ನಿಂದ ಆಗಸ್ಟ್)
ವಲಯ ಪ್ಲಾಸ್ಟಿಕ್ ದಂಡ
ಪಶ್ಚಿಮ 2,877 ಕೆ.ಜಿ. 17,47,300 ರು.
ಉತ್ತರ 1,375 ಕೆ.ಜಿ. 10,21,700 ರು.
ದಕ್ಷಿಣ 4,174 ಕೆ.ಜಿ. 11,59,650 ರು.
ಬೊಮ್ಮನಹಳ್ಳಿ 3,403 ಕೆ.ಜಿ. 16,40,800 ರು.
ದಾಸರಹಳ್ಳಿ 3,135 ಕೆ.ಜಿ. 4,58,400 ರು.
ಆರ್.ಆರ್.ನಗರ 6,941 ಕೆ.ಜಿ. 3,73,600 ರು.
ಯಲಹಂಕ 3,841 ಕೆ.ಜಿ. 6,00,230 ರು.
ಮಹದೇವಪುರ 6,372 ಕೆ.ಜಿ. 16,76,900 ರು.
ಒಟ್ಟು 32,118 ಕೆ.ಜಿ. 86,78,580 ರು.