* ಧಾರಾಕಾರ ಮಳೆಗೆ ಹೆದರಿ ರಾತ್ರಿ ಪೂರಾ ಹಾಸ್ಟೆಲ್ ಮಕ್ಕಳ ಜಾಗರಣೆ
* ಒಂದೇ ರಾತ್ರಿ 117 ಮಿಮಿ ಮಳೆ
* ನಿರಂತರ ಮಳೆಗೆ ಮುಂಗಾರು ಹಂಗಾಮಿನ ಬೆಳೆಗಳು ಹಾನಿ
ಚಿತ್ತಾಪುರ(ಸೆ.27): ಕಲಬುರಗಿ(Kalaburagi) ಜಿಲ್ಲೆಯ ಚಿತ್ತಾಪುರ ಪಟ್ಟಣವು ಭಾರೀ ಪ್ರಮಾಣದ ಮಳೆಗೆ ತತ್ತರಿಸಿಹೋಗಿದೆ. ಶನಿವಾರ ರಾತ್ರಿ ಈ ಊರಲ್ಲಿ 117 ಮಿಮಿ ಮಳೆ ಸುರಿದು ಜನಜೀವನ ಪರೇಶಾನ್ ಆಗಿದೆ.ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವುದು ಒಂದೆಡೆಯಾದರೆ, ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿದೆಯಲ್ಲದೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಪ್ರದೇಶಗಳಲ್ಲಿ ಮತ್ತು ಹೊಲಗಳಲ್ಲಿ ಮಳೆ ನೀರು ಸಂಗ್ರಹಗೊಂಡಿರುವ ಸನ್ನಿವೇಶಗಳು ಕಂಡುಬಂದಿವೆ.
ಸೋಮವಾರ ರಾತ್ರಿ 11.30ಕ್ಕೆ ಆರಂಭಗೊಂಡು ಇಡೀ ರಾತ್ರಿಯವರೆಗೆ ಎಡಬಿಡದೆ ಒಂದೇ ಸಮನೆ ಮಳೆ(Rain) ಸುರಿಯುವ ಮೂಲಕ ಎಲ್ಲೆಂದರಲ್ಲಿ ಮಳೆ ನೀರು ನದಿಯಂತೆ ಹರಿಯುತ್ತೀರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯನ್ನುಂಟು ಮಾಡಿದೆ.
undefined
ಪಟ್ಟಣದ ಹೊರವಲಯದಲ್ಲಿರುವ ಬಿಸಿಎಂ ಮೆಟ್ರಿಕ್ ಪೂರ್ವ ವಸತಿ ನಿಲಯವು ಹಳ್ಳದ ದಂಡೆಯಲ್ಲಿದ್ದು ರಾತ್ರಿ ಸುರಿದ ಭಾರಿ ಮಳೆಗೆ ವಸತಿ ನಿಲಯದ ಒಳಗಡೆ ಮತ್ತು ಸುತ್ತ ಮುತ್ತ ಭಾರಿ ನೀರು ಬಂದಿದ್ದರಿಂದ ವಸತಿ ನಿಲಯದಲ್ಲಿದ್ದ 13 ದ್ಯಾರ್ಥಿಗಳು ರಾತ್ರಿ ವೇಳೆ ಮಳೆಯಲ್ಲಿಯೇ ಕಟ್ಟದ ಮೇಲೆ ಭಯದಿಂದ ಕುಳಿತ್ತಿದ್ದರು. ಸುದ್ದಿ ತಿಳಿದ ನಂತರ ಅಧಿಕಾರಿಗಳು ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಆಂಧ್ರ, ಒಡಿಶಾಕ್ಕೆ ಅಪ್ಪಳಿಸಿದ ಗುಲಾಬ್: ಕಟ್ಟೆಚ್ಚರ!
ಈ ವಸತಿ ನಿಲಯ ಹಳ್ಳದ ದಂಡೆಯ ಮೇಲೆಯೇ ಕಟ್ಟಲ್ಪಟ್ಟಿದ್ದರಿಂದ ಮಳೆಗಾಲದಲ್ಲಿ ಇಲ್ಲಿ ಮಕ್ಕಳಿಗೆ ಇಂತಹ ನೆರೆ ಹಾವಳಿ, ಮಳೆಯ ನೀರು ಒಳಗೆ ನುಗ್ಗಿ ರಾತ್ರಿ ಪೂರಾ ಜಾಗರಣೆಯ ಹೆದರಿಕೆಯ ಸಂದರ್ಭಗಳು ಗಂಟು ಬೀಳುತ್ತಿವೆ.
ತಾಲೂಕಿನಲ್ಲಿ ಮುಂಗಾರು ಮಳೆ ಉತ್ತಮವಾಗಿ ಆರಂಭವಾಗಿದ್ದರಿಂದ ರೈತರು ಹೆಸರು, ಉದ್ದು ಅಪಾರ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರು. ಇದೀಗ ವಿಪರೀತ ಮಳೆ ಸುರಿಯುತ್ತ ರೈತರ ಹೊಲಗದ್ದೆಗಳನ್ನೇ ಕೆರೆಯಂತೆ ಮಾಡಿದೆ.
ಪಟ್ಟಣದಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಬಸವ ನಗರ, ಭೀಮನಗರ ಹಾಗೂ ಜಗಜೀವನರಾಂ ಏರಿಯಾಗಳಲ್ಲಿ 7 ಮನೆಗಳು ಬಿದ್ದಿರುವ ಮಾಹಿತಿ ಇದ್ದು ಹಲವಾರು ಮನೆಗಳಿಗೆ ನೀರು ಬಂದಿರುವ ವರದಿಯಾಗಿದೆ. ಮನೆ ಬಿದ್ದ ಫಲಾನುಭವಿಗಳಿಗೆ 3200 ಹಾಗೂ ಮನೆಗಳಲ್ಲಿ ನೀರು ಬಂದವರಿಗೆ 3800 ರಂತೆ ಪರಿಹಾರ ನೀಡಲಾಗುವುದು ಎಂದು ಚಿತ್ತಾಪುರ ತಹಸೀಲ್ದಾರ ಉಮಾಕಾಂತ ಹಳ್ಳೆ ತಿಳಿಸಿದ್ದಾರೆ.
ಪುರಸಭೆ ವ್ಯಾಪ್ತಿಯ 20, 21, 22 ನೆ ವಾರ್ಡಗಳಲ್ಲಿ ಮಳೆಯಿಂದ ಹಲವಾರು ಮನೆಗಳಿಗೆ ನೀರು ಬಂದು ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವದು ತಿಳಿದುಬಂದಿದೆ. ಈ ವಿಷಯವನ್ನು ಪುರಸಭೆಯಲ್ಲಿ ಚರ್ಚಿಸಿ ಇಲ್ಲಿನ ನಿವಾಸಿಗಳಿಗೆ ಶಾಶ್ವತ ಪರಿಹಾರ ನೀಡಲು ಕ್ಷೇತ್ರದ ಶಾಸಕರಲ್ಲಿ ಹೆಚ್ಚಿನ ಅನುದಾನ ನೀಡಿ ಶಾಶ್ವತ ಪರಿಹಾರ ನೀಡಲು ಮನವಿ ಮಾಡಿಕೊಳ್ಳಲಾಗುವದು ಎಂದು ಚಿತ್ತಾಪುರ ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ ಹೇಳಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಬರುತ್ತಿರುವ ಮಳೆಯಿಂದ ಇಲ್ಲಿ ವಾಸಿಸುವ ಜನರು ತೊಂದರೆ ಅನುಭವಿಸುತ್ತಿದ್ದು, ಅಂತಹ ಸಮಯದಲ್ಲಿ ಅಧಿಕಾರಿಗಳು ಬಂದು ಭರವಸೆಗಳು ನೀಡಿ ಹೊಗುತ್ತಿದ್ದಾರೆಯೇ ವಿನ: ಅವರಿಗೆ ಶಾಶ್ವತ ಪರಿಹಾರ ನೀಡುವಲ್ಲಿ ವಿಫಲರಾಗುತ್ತಿರುವದೇ ಇಂತಹ ಘಟನೆ ಪದೆ ಪದೆ ನಡೆಯುತ್ತಿದೆ. ಶಾಸಕರು ಇಲ್ಲಿನ ಪ್ರದೇಶಕ್ಕೆ ಭೆಟ್ಟಿನೀಡಿ ನಿವಾಸಿಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಚಿತ್ತಾಪುರ ನಗರ ಯೊಜನೆ ಪ್ರಾಧಿಕಾರದ ಅಧ್ಯಕ್ಷ ದೀಪಕ್ ಹೊಸೂರಕರ್ ಹೇಳಿದ್ದಾರೆ.
ಉತ್ತರ ಕರ್ನಾಟಕದ 7 ಜಿಲ್ಲೆಗಳಲ್ಲಿ ಭಾರೀ ಮಳೆ: ಸಿಡಿಲಿಗೆ ರೈತ ಬಲಿ
ನಾವುಗಳು ಇಲ್ಲಿ ಹೆಚ್ಚಿನ ಮಳೆ ಬಂದಾಗ ತೊಂದರೆ ಅನುಭವಿಸುತ್ತಿರುವದು ತಪ್ಪುತ್ತಿಲ್ಲಾ. ಮಳೆ ಬಂದಾಗ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಂದು ಪರಿಹಾರದ ಭರವಸೆ ನೀಡಿ ಹೊಗುತ್ತಿರುವದೇ ನಡೆಯುತ್ತಿದೆ. ನಮ್ಮ ಪ್ರದೇಶವು ತಗ್ಗು ಪ್ರದೇಶದಲ್ಲಿದ್ದು ಇಲ್ಲಿ ನಿವಾಸಿಗಳಿಗೆ ಬೇರೆ ಕಡೆ ವಸತಿ ವ್ಯವಸ್ಥೆ ಮಾಡಬೇಕು ಇಲ್ಲವೇ ಇಲ್ಲಿ ಮನೆಗಳನ್ನು ಕೆಡವಿ ಹೊಸ ಮನೆಗಳನ್ನು ನಿರ್ಮಿಸಿಕೊಡಲು ಆಗ್ರಹಿಸುತ್ತೇವೆ ಎಂದು ಭೀಮನಗರ ನಿವಾಸಿ ಸಾಯಬಣ್ಣ ಆರಬೊಳ ತಿಳಿಸಿದ್ದಾರೆ.
ಬೆಳೆ ನಾಶ:
ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಫಜಲ್ಪುರ ತಾಲೂಕಿನಾದ್ಯಂತ ಮುಂಗಾರು ಹಂಗಾಮಿನ ಬೆಳೆಗಳು ಹಾನಿಗಿಡಾಗುತ್ತಿವೆ. ಮುಂಗಾರು ಹಂಗಾಮಿನ ತೊಗರಿ, ಹತ್ತಿ, ಸೂರ್ಯಕಾಂತಿ, ಸಜ್ಜೆ, ಮೆಕ್ಕೆಜೋಳ, ಸೆಂಗಾ ವಾಣಿಜ್ಯ ಬೆಳೆಗಳಾದ ಕಬ್ಬು, ಬಾಳೆ ಬೆಳೆಗಳು ಹಾಳಾಗಿವೆ. ಅಮರ್ಜಾ ನದಿ, ಕೆರೆ ಕುಂಟೆಗಳು, ತೆರೆದ ಬಾವಿಗಳಲ್ಲಿ ನೀರು ತುಂಬಿಕೊಳ್ಳುತ್ತಿದೆ.