ಬೆಳಗಾವಿ (ಸೆ.27): ಬೆಳಗಾವಿ (Belagavi) ಭೇಟಿ ವೇಳೆ ಬಿಡುವಿಲ್ಲದ ಕಾರ‍್ಯಕ್ರಮಗಳ ನಡುವೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraj Bommai) ಅವರು ಭಾನುವಾರ ರೈತ ಮುಖಂಡರನ್ನು ಭೇಟಿಯಾಗಿ ಸಮಸ್ಯೆ ಆಲಿಸಿದರು. ಈ ವೇಳೆ ಹತ್ತಾರು ಮನವಿಗಳನ್ನು ಮುಂದಿಟ್ಟುಕೊಂಡು ಪರಿಹಾರ ಒದಗಿಸುವಂತೆ ರೈತ ಮುಖಂಡರು ಆಕ್ರೋಶಭರಿತರಾಗಿ ಮಾತನಾಡಿದರೂ ಸಾವಧಾನದಿಂದಲೇ ಅವರ ಸಮಸ್ಯೆ ಆಲಿಸಿ ಪರಿಹಾರ ಒದಗಿಸುವ ಭರವಸೆ ನೀಡಿದರು.
ಬೊಮ್ಮಾಯಿ ಅವರು ನಗರದ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ ರೈತರು (farmers) ಸೇರಿ ವಿವಿಧ ಸಂಘಟನೆಗಳ ಮುಖಂಡರ ಭೇಟಿಗಾಗಿ ಸಮಯ ಮೀಸಲಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮನವಿ ಸಲ್ಲಿಸಲು ಆಗಮಿಸಿದ್ದ ರೈತರು ಸಿಎಂ ಭೇಟಿಗೆ ಮುಗಿಬಿದ್ದರು. ಒಂದು ಹಂತದಲ್ಲಿ ಕೆಲ ರೈತರು ಏರುಧ್ವನಿಯಲ್ಲಿ ಮಾತನಾಡಿದರಾದರೂ ಸಿಎಂ ಮಾತ್ರ ಶಾಂತಚಿತ್ತರಾಗಿಯೇ ಅವರ ಸಮಸ್ಯೆ ಆಲಿಸಿ ಎಲ್ಲ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದರು.
ಪ್ರತಿಭಾನ್ವಿತ ಬಡ ಸೈಕ್ಲಿಸ್ಟ್‌ಗೆ ಕರ್ನಾಟಕ ಸರ್ಕಾರದಿಂದ 5 ಲಕ್ಷ ರೂ ಮೌಲ್ಯದ ಸೈಕಲ್
ಭೂಸ್ವಾಧೀನ ಕೈಬಿಡಿ: ರಾಷ್ಟ್ರೀಯ ಹೆದ್ದಾರಿಗೆ ಯಾವುದೇ ಕಾರಣಕ್ಕೂ ಫಲವತ್ತಾದ ಜಮೀನು ಸ್ವಾಧೀನಪಡಿಸಿಕೊಳ್ಳಬೇಡಿ ಎಂದು ರೈತನೊಬ್ಬ ತಾನು ಬೆಳೆದ ಬೆಳೆ ಹಿಡಿದು ಮುಖ್ಯಮಂತ್ರಿಗೆ ಮನವಿ ಮಾಡಲು ಮುಂದಾದ ಪ್ರಸಂಗವೂ ಪ್ರವಾಸಿಮಂದಿರದಲ್ಲಿ ನಡೆಯಿತು.
ಮಚ್ಚೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ (National highway) ನಿರ್ಮಾಣಕ್ಕೆ ಸರ್ಕಾರ ಜಮೀನು ಸ್ವಾಧೀನಕ್ಕೆ ಮುಂದಾಗಿದೆ. ಈ ಭಾಗದಲ್ಲಿ ಭೂಸ್ವಾಧೀನ ಕೈಬಿಡಬೇಕೆಂದು ಆಗ್ರಹಿಸಿ ರೈತ ಪ್ರಕಾಶ ನಾಯಕ ಎಂಬುವರು ತನ್ನ ಜಮೀನಿನಲ್ಲಿ ಬೆಳೆದಿದ್ದ ಭತ್ತ, ಚನ್ನಂಗಿ ಬೇಳೆ ಸಮೇತ ಸಿಎಂ ಭೇಟಿಗೆ ಆಗಮಿಸಿದ್ದರು.
ಸಿಎಂ ಬಂದಾಗೆಲ್ಲ ಬಾದಾಮಿ ಹಾಲು ನೀಡುವ ಅಭಿಮಾನಿ!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅಭಿಮಾನಿಯೊಬ್ಬ ಬಾದಾಮಿ ಹಾಲು (almond Milk) ನೀಡಿ ಸತ್ಕರಿಸಿದ ಪ್ರಸಂಗ ಭಾನುವಾರ ಬೆಳಗಾವಿಯಲ್ಲಿ ನಡೆದಿದೆ. ಅತ್ಯಾಧುನಿಕ ರವೀಂದ್ರ ಕೌಶಿಕ್ ಇ-ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಷಣ ಆರಂಭಿಸುವ ಮುನ್ನ ವೇದಿಕೆಗೆ ಆಗಮಿಸಿದ ಅಭಿಮಾನಿ ಬಾದಾಮಿ ಹಾಲು ನೀಡಿದ್ದಾನೆ.
ಇಲ್ಲಿನ ಶಿವಾಜಿ ಉದ್ಯಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಭಾಷಣ ಮಾಡಲು ಆಗಮಿಸುತ್ತಿದ್ದಂತೆ ಬಾದಾಮಿ ಹಾಲಿನ ಬಾಟಲ್ ನೀಡಲು ಬಂದ ಅಭಿಮಾನಿಯನ್ನು ಪೊಲೀಸರು ತಡೆದರು. ಬಳಿಕ ಮುಖ್ಯಮಂತ್ರಿ ಆತನಿಗೆ ಮೇಲೆ ಬರಲು ಬಿಡಿ ಎಂದು ಸೂಚಿಸಿದ್ದು, ಅಭಿಮಾನಿ ನೀಡಿದ ಹಾಲಿನ ಬಾಟಲ್ ಸ್ವೀಕರಿಸಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿ, ನಾನು ಉತ್ತರ ಕರ್ನಾಟಕ ಭಾಗಕ್ಕೆ ಹೋದಾಗಲೆಲ್ಲಾ ಆತ ಬರುತ್ತಾನೆ. ಹಾವೇರಿ ಮೂಲದ ಬೆಳಗಾವಿ ನಿವಾಸಿ ಅಶೋಕ ತಡಪಟ್ಟಿ ಬಾದಾಮಿ ಹಾಲು ತಂದುಕೊಡುತ್ತಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.