ಚಿಕ್ಕಬಳ್ಳಾಪುರ (ನ.18): ಜಿಲ್ಲಾದ್ಯಂತ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ (Heavy Rain) ಹಾಗೂ ಮುಂದಿನ ಎರಡು ದಿನ ಹೆಚ್ಚು ಮಳೆ ಬರುವ ಸಾಧ್ಯತೆಯ ಹಿನ್ನೆಲೆ ಯಲ್ಲಿ ಮಕ್ಕಳು (Children) ಹಾಗೂ ವಿದ್ಯಾರ್ಥಿಗಳ (Students) ಹಿತ ದೃಷ್ಟಿಯಿಂದ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಬರುವ ಎರಡು ದಿನಗಳ (ಇಂದು - ನಾಳೆ) ಕಾಲ ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಿಗೆ (School and Colleges) ರಜೆ ಘೋಷಣೆ ಮಾಡಲಾಗಿದೆ.
ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು ಈ ಸಂಬಂದ ಜಿಲ್ಲಾಧಿಕಾರಿಗಳ (DC) ಮೌಖಿಕ ಸೂಚನ ಮೇರಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ (Education Department) ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪ್ರತ್ಯೇಕವಾಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿರುವ ಸಂಬಂದ ಆದೇಶ ಹೊರಡಿಸಿದ್ದಾರೆ.
ಸತತ ಮಳೆಯಿಂದಾಗಿ (Rain) ಚಿಕ್ಕಬಳ್ಳಾಪುರ ಜಿಲ್ಲೆಯ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಮಳೆಯಿಂದಾಗಿ ಸರ್ಕಾರಿ ಶಾಲಾ, ಕಾಲೇಜುಗಳ ಕೊಠಡಿಗಳು ಕೆಲವು ಸೋರಿಕೆ ಆಗುತ್ತಿದ್ದು ಮಕ್ಕಳ ಭದ್ರತೆಯ ಹಿತ ದೃಷ್ಟಿಯಿಂದಾಗಿ ಹಾಗೂ ಪೋಷಕರು (parents) ಮಕ್ಕಳ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಎರಡು ದಿನಗಳ ಕಾಲ ಜಿಲ್ಲೆಯ ಎಲ್ಲ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿರುವುದಾಗಿ ಜಿಲ್ಲಾಧಿಕಾರಿ ಆರ್.ಲತಾ (R latha) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಾಲ್ಕೈದು ಮಂದಿ ನದಿಪಾಲು: ಈಗಾಗಲೇ ಜಿಲ್ಲಾದ್ಯಂತ ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ ಜೀವ ನದಿಗಳಾದ ಪಾಲಾರ್, ಪಾಪಾಗ್ನಿ, ಕುಶವಾತಿ, ಚಿತ್ರಾವತಿ ನದಿಗಳು ಸೇರಿದಂತೆ ನೂರಾರು ಕೆರೆ, ಕುಂಟೆಗಳು ಅಪಾಯ ಮಟ್ಟ ತುಂಬಿ ಹರಿಯುತ್ತಿವೆ. ಈಗಾಗಲೇ ಗುಡಿಬಂಡೆ (Gudibande), ಚಿಂತಾಮಣಿ (chintamani) ತಾಲೂಕುಗಳಲ್ಲಿ ಹರಿಯುತ್ತಿದ್ದ ನದಿಗಳಲ್ಲಿ ನಾಲ್ಕೈದು ಮಂದಿ ಕೊಚ್ಚಿ ಹೋಗಿದ್ದಾರೆ. ಗುಡಿಬಂಡೆ ತಾಲೂಕಿನಲ್ಲಿಯೆ ಗ್ರಾಪಂ ಸದಸ್ಯ ಸೇರಿ ಇಬ್ಬರು ಅಸು ನೀಗಿದ್ದಾರೆ. ಅಲ್ಲದೆ ಮಳೆಯಿಂದಾಗಿ ಕೃಷಿ (agriculture), ತೊಟಗಾರಿಕಾ ಬೆಳೆಗಳು ಅಪಾರ ಪ್ರಮಾಣದಲ್ಲಿ ನಾಶವಾಗಿ ರೈತರು (farmers) ಕಣ್ಣೀರು ಸುರಿಯುತ್ತಿದ್ದಾರೆ.
905 ಹೆಕ್ಟೇರ್ ತೋಟಗಾರಿಕಾ ಬೆಳೆ ನಾಶ
ಜಿಲ್ಲೆಯಲ್ಲಿ ಮಹಾ ಮಳೆಗೆ ಬರೋಬ್ಬರಿ 905.25 ಹೆಕ್ಟೇರ್ ಪ್ರದೇಶದಲ್ಲಿ ಹೂ, ಹಣ್ಣು, ತರಕಾರಿ ಸೇರಿದಂತೆ ಒಟ್ಟು ತೋಟಗಾರಿಕಾ ಬೆಳೆಗಳು ಇಡೀ ಜಿಲ್ಲಾದ್ಯಂತ ನಾಶವಾಗಿದ್ದು ಒಟ್ಟು 1,972.92 ಲಕ್ಷ ರು, ಪರಿಹಾರ ಬೇಕಿದೆ. 814.74 ಹೆಕ್ಟೇರ್‌ನಲ್ಲಿ ತರಕಾರಿ ನಾಶವಾದರೆ 90.51 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣು, ಹೂ ನಾಶವಾಗಿದೆ. ಸುಮಾರು ಒಟ್ಟು 1,283 ರೈತರು ಮಳೆಗೆ ತಮ್ಮ ಅಪಾರ ಪ್ರಮಾಣದ ಬೆಳೆ ಕಳೆದುಕೊಂಡಿದ್ದಾರೆಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
3,754 ಹೆಕ್ಟೇರ್‌ನಲ್ಲಿ ಕೃಷಿ ಬೆಳೆ
ಜಿಲ್ಲಾದ್ಯಂತ ಈ ಬಾರಿ 1,45,033 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದ್ದು ಆ ಪೈಕಿ ತೀವ್ರ ಮಳೆಯಿಂದ ಶೇ.33ರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಗೆ ರಾಗಿ, ಶೇಂಗಾ ಸೇರಿದಂತೆ ವಿವಿಧ ಕೃಷಿ ಬೆಳೆಗಳು ಒಟ್ಟು 3,754 ಹೆಕ್ಟೇರ್ ಪ್ರದೇಶದಲ್ಲಿ ನಾಶವಾಗಿದೆ. ಚಿಕ್ಕಬಳ್ಳಾಫುರದಲ್ಲಿ 918, ಗೌರಿಬಿದನೂರು 307, ಗುಡಿಬಂಡೆ 233,ಬಾಗೇಫಲ್ಲಿ 326, ಚಿಂತಾಮಣಿ 783 ಹಾಗೂ ಶಿಡ್ಲಘಟ್ಟದಲ್ಲಿ 1,532 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಠವಾಗಿದೆ. ಒಟ್ಟು 266.36 ಲಕ್ಷ ಪರಿಹಾರ ಬೇಕಿದೆ.