
ಚನ್ನಪಟ್ಟಣ (ಏ.16): ಕುಮಾರಸ್ವಾಮಿಯವರು ಮತ್ತೆ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕೆಂದು ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರು ಬೇಡಿಕೆ ಇಟ್ಟಿದ್ದಾರೆ. ಇದು ಚನ್ನಪಟ್ಟಣ ಜನರ ಅಭಿಲಾಷೆ ಕೂಡ. ಈ ವಿಚಾರದ ಬಗ್ಗೆ ಮುಂದಿನ ದಿನಗಳಲ್ಲಿ ಕಾಲವೇ ತೀರ್ಮಾನ ಮಾಡುತ್ತದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಖಾಸಗಿ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಜೆಡಿಎಸ್ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಬಿಎಲ್‌ಎ-2ಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಎಚ್‌ಡಿಕೆ 2023ರಲ್ಲಿ ಚನ್ನಪಟ್ಟಣದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅನಿರೀಕ್ಷಿತವಾಗಿ ಸಂಸತ್ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧೆ ಮಾಡಬೇಕಾಯ್ತು. ಮತ್ತೆ ರಾಜ್ಯ ರಾಜಕಾರಣಕ್ಕೆ ಒಂದಲ್ಲ ಒಂದು ದಿನ ಬರಲೇಬೇಕಾಗುತ್ತದೆ.
ಕುಮಾರಣ್ಣನಿಗೆ ಕಾರ್ಯಕರ್ತರು ಇಲ್ಲೇ ಸ್ಪರ್ಧೆ ಮಾಡಿ ಅಂತ ಬೇಡಿಕೆ ಇಟ್ಟಿರೋದಕ್ಕೆ ನಾನೇ ಸಾಕ್ಷಿ. ಇದು ಚನ್ನಪಟ್ಟಣ ಜನರ ಅಭಿಲಾಷೆ ಎಂದು ಹೇಳಿದರು. ಈ ವಿಚಾರದ ಬಗ್ಗೆ ಮುಂದಿನ ದಿನಗಳಲ್ಲಿ ಕಾಲವೇ ತೀರ್ಮಾನ ಮಾಡುತ್ತದೆ. ನಾವು ಎನ್‌ಡಿಎ ಮೈತ್ರಿ ಕೂಟದಲ್ಲಿದ್ದೇವೆ. ಯಾವ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡುತ್ತಾರೆ. ಯಾರ್‍ಯಾರು ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದು 2028ಕ್ಕೆ ತೀರ್ಮಾನ ಆಗುತ್ತದೆ ಎಂದರು.
ಜನರ ಮನಸ್ಸಿನಲ್ಲಿ ಎಚ್ಡಿಕೆ ಸಿಎಂ ಆಗಬೇಕೆಂದಿದೆ: ಮುಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಎಂಬ ವಿಚಾರಕ್ಕೆ ಉತ್ತರಿಸಿದ ಅವರು, ಪಕ್ಷದ ಕಾರ್ಯಕರ್ತರು, ರಾಜ್ಯದ ಜನರ ಮನಸ್ಸಿನಲ್ಲಿ ಕುಮಾರಸ್ವಾಮಿ ಸಿಎಂ ಆಗಬೇಕು ಎಂಬ ಭಾವನೆ ಇದೆ. ಈ ಬಗ್ಗೆ ಎನ್‌ಡಿಎ ಮೈತ್ರಿಕೂಟದ ರಾಷ್ಟ್ರ ಹಾಗೂ ರಾಜ್ಯ ನಾಯಕರು ತೀರ್ಮಾನ ಮಾಡುತ್ತಾರೆ. ಸಿಎಂ ಆಗೋ ವಿಚಾರ ಇನ್ನೂ ಬಹಳ ದೂರ ಇದೆ. ಕಾಲ ಬರುವವರೆಗೂ ಕಾದು ನೋಡೋಣ ಎಂದರು.
ಚನ್ನಪಟ್ಟಣ ಕ್ಷೇತ್ರವನ್ನು ಎಚ್‌ಡಿಕೆ ಅಭಿವೃದ್ಧಿ ಮಾಡಿಲ್ಲ ಎಂದು ಎಸ್.ಟಿ. ಸೋಮಶೇಖರ್ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಯಶವಂತಪುರ ಕ್ಷೇತ್ರದ ಕಾರ್ಯಕರ್ತರೇ ಉತ್ತರ ಕೊಡುತ್ತಾರೆ. ಅಭಿವೃದ್ಧಿ ಆಧಾರದ ಮೇಲೆ ಓಟ್ ಹಾಕುತ್ತಿಲ್ಲ. ಒಂದು ವರ್ಗದ ಮುಗ್ದ ಜನರಿಗೆ ರಾತ್ರೋರಾತ್ರಿ ಕೂಪನ್, ಫುಡ್‌ಕಿಟ್ ಕೊಟ್ಟು ದಾರಿತಪ್ಪಿಸಿ ಓಟ್ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಶಾಸಕರ ಸೋಮಶೇಖರ್ ವಿರುದ್ಧ ಕಿಡಿಕರಿದರು.
ಚನ್ನಪಟ್ಟಣದಲ್ಲಿ ಕುಮಾರಣ್ಣ ಏಳು ವರ್ಷದಲ್ಲಿ ₹1200 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಎಸ್ ಟಿ. ಸೋಮಶೇಖರ್ ಅವರಿಗೆ ಮಾಹಿತಿ ಕೊರತೆಯಿದೆ. ಅವರಿಗೆ ನಾನೇ ಅಭಿವೃದ್ಧಿ ಲಿಸ್ಟ್‌ಗಳನ್ನು ಅವರ ಮನೆಗೆ ಕೊರಿಯರ್ ಮಾಡುತ್ತೇನೆ ಎಂದರು. ಜಮೀರ್ ಅಹ್ಮದ್ ಖಾನ್ ಜೆಡಿಎಸ್‌ಗೆ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಹೊಸ ವಿಷಯ. ಈ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.