ಮೈಸೂರು (ಸೆ.13): ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನನಗೆ ದೇವರ ಸಮಾನ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನಲ್ಲಿ ಎಚ್.ಡಿ. ದೇವೇಗೌಡರೇ ಸುಪ್ರಿಂ ಆದರೂ, ಎಚ್.ಡಿ. ಕುಮಾರಸ್ವಾಮಿ ಸುಪ್ರಿಂ ಎಂದು ಹೇಳಬೇಕು. ಪ್ರಧಾನಿ ನರೇಂದ್ರ ಮೋದಿ ಕೂಡ ದೇವೇಗೌಡರ ಮಾತು ಕೇಳುತ್ತಾರೆ. ಗೌಡರ ಮಾತು ಕೇಳಿ ಆಶೀರ್ವಾದ ಪಡೆಯುವುದು ಸೂಕ್ತ. ಜೆಡಿಎಸ್ ಪಕ್ಷವನ್ನು ಉಳಿಸಬೇಕು ಎಂಬುದು ಅವರ ಕನಸು. ಈ ಸಂಬಂಧ ನಾನು ಹೇಳಬೇಕಾಗಿರುವುದೆಲ್ಲವನ್ನೂ ಹೇಳಿದ್ದೇನೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೂ ಕೂಡ ಹೇಳಬೇಕಾಗಿರುವುದನ್ನೆಲ್ಲಾ ಹೇಳಿದ್ದಾರೆ. ಎಚ್.ಡಿ. ದೇವೇಗೌಡರು ತಿರುಪತಿಯಲ್ಲಿ ಸಿಕ್ಕಿದ್ದರೂ, ಒಳ್ಳೆಯದಾಗಲಿ ಎಂದು ಆಶೀರ್ವದಿಸಿದ್ದಾಗಿ ತಿಳಿಸಿದರು.
undefined
ಜನರು ದಂಗೆ ಎದ್ದರೆ ನೀವು ಉಳಿಯುತ್ತೀರಾ? : ಜಿಟಿಡಿ ಪ್ರಶ್ನೆ
ನಾನು ಎಚ್.ಡಿ. ದೇವೇಗೌಡರ ಗರಡಿಯಲ್ಲಿ ಬೆಳೆದವನು. ಒಂದು ರೈತ ಕುಟುಂಬದಿಂದ ಬಂದವನು. ಉತ್ತಿರೋನು, ಬಿತ್ತಿರೋನು, ನಾಟಿ ಮಾಡಿರೋನು. ಪ್ರಾಯೋಗಿಕವಾಗಿ ಕೃಷಿ ಮಾಡಿದ್ದೇನೆ. ಆದರೆ ಈಗ ಹೋಗಿ ಫೋಟೋ ತೆಗೆಸಿಕೊಳ್ಳೋಕೆ ಕೃಷಿ ಮಾಡಿದವನಲ್ಲ. ಅಲ್ಲೆಲ್ಲೋ ಹೋಗಿ ನಾಟಿ ಮಾಡಿ ಫೋಟೋ ತೆಗೆಸಿಕೊಂಡು ರೈತ ಅನ್ನಿಸಿಕೊಳ್ಳವುದಿಲ್ಲ. ನಾನು ನಿಜವಾದ ಪ್ರಗತಿಪರ ರೈತ ಎನ್ನುವ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಎಚ್.ಡಿ. ದೇವೇಗೌಡರು ಜನತಾ ಪರಿವಾರದಿಂದ ಬಂದವರು. ಎಷ್ಟೋ ಜನ ನಾಯಕರನ್ನು ಬೆಳೆಸಿದ್ದಾರೆ. ಎಷ್ಟೋ ಜನರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ರೈತರ, ಬಡವರ ಪರವಾದ ಜೆಡಿಎಸ್ ಕಟ್ಟಿಬೆಳೆಸಿದ್ದಾರೆ. ಹೀಗಾಗಿ ಅವರಿಗೆ ರೈತ ನಾಯಕರನ್ನು ನಮ್ಮ ಜೊತೆ ಇರಿಸಿಕೊಳ್ಳಬೇಕು ಎಂಬುದು ಗೊತ್ತಿದೆ. ದೇವೇಗೌಡರಿಗೆ ಆ ಕಾನ್ಸೆಪ್ಟ್ ಇದೆ ಎಂದರು.
ನಾನು ಪಕ್ಷದಲ್ಲಿ ಉಳಿಯೋದು ನನ್ನೊಬ್ಬನ ತೀರ್ಮಾನವಲ್ಲ. ಆದರೆ ಎಚ್.ಡಿ. ಕುಮಾರಸ್ವಾಮಿ ನನ್ನನ್ನು ಪಕ್ಷದಿಂದ ಉಚ್ಛಾಟಿಸುವುದಾಗಿ ಹೇಳಿದ್ದಾರೆ ಎಂದು ಅವರು ಹೇಳಿದರು.