ವಿದ್ಯೆ ಕಲಿಸಿದ ಗುರುವಿನ ಕನಸು ಈಡೇರಿಸಿದ ವಿದ್ಯಾರ್ಥಿ; ನೆಚ್ಚಿನ ಮೇಸ್ಟ್ರಿಗೆ 'ಹೊಸ ಕಾರು' ಗಿಫ್ಟ್ ಕೊಟ್ಟ ಶಿಷ್ಯ!

Published : Jun 09, 2026, 08:57 PM IST
haveri Student Car gifted to Teacher

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ, ಶಿಕ್ಷಕರೊಬ್ಬರ ನಿವೃತ್ತಿ ದಿನದಂದು ಶಿಷ್ಯನೊಬ್ಬ ಕಾರನ್ನು ಉಡುಗೊರೆಯಾಗಿ ನೀಡಿ ಅಪರೂಪದ ಗುರುದಕ್ಷಿಣೆ ಸಲ್ಲಿಸಿದ್ದಾನೆ. ಶಿಕ್ಷಕರ ಬೀಳ್ಕೊಡುಗೆ ಸಮಾರಂಭದಲ್ಲಿ ನಡೆದ ಈ ಘಟನೆಯು, ಆಧುನಿಕ ಕಾಲದಲ್ಲಿಯೂ ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ಸಾರಿದೆ.

ಹಾವೇರಿ: 'ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ' ಎಂಬ ಮಾತಿಗೆ ಅನ್ವರ್ಥ ಎಂಬಂತೆ ಹಾವೇರಿ ಜಿಲ್ಲೆಯಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ತನಗೆ ಅಕ್ಷರ ಕಲಿಸಿ, ಬಡತನದ ನಡುವೆಯೂ ಆಸರೆಯಾಗಿ ನಿಂತು ಜೀವನ ರೂಪಿಸಿದ ಶಿಕ್ಷಕನಿಗೆ, ಅವರ ನಿವೃತ್ತಿಯ ದಿನದಂದು ಶಿಷ್ಯನೊಬ್ಬ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಮರೆಯಲಾಗದ 'ಗುರುದಕ್ಷಿಣೆ' ಸಮರ್ಪಿಸಿದ್ದಾನೆ.

ಹಾವೇರಿ ಜಿಲ್ಲೆಯ ಹಾನಗಲ್‌ನ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟ್ ನಡೆಸುತ್ತಿರುವ ಕುಮಾರೇಶ್ವರ ಪ್ರೌಢಶಾಲೆಯಲ್ಲಿ ಈ ಭಾವನಾತ್ಮಕ ಸನ್ನಿವೇಶ ಕಂಡುಬಂದಿದೆ. ಇಲ್ಲಿ ದೀರ್ಘಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸಿ.ಎಸ್. ವಸ್ತ್ರದ್ ಅವರ ನಿವೃತ್ತಿ ಅಂಗವಾಗಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಇಡೀ ಜಿಲ್ಲೆಯಾದ್ಯಂತ ಈಗ ಚರ್ಚೆಯ ವಿಷಯವಾಗಿದೆ.

ಸಹಸ್ರ ಶಿಷ್ಯರ ಸಮಾಗಮ:

ಮೇ 30 ರಂದು ನಡೆದ ಈ ಸಮಾರಂಭಕ್ಕೆ ಶಾಲೆಯ ಸುಮಾರು 1000ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದರು. ತಮ್ಮ ನೆಚ್ಚಿನ ಶಿಕ್ಷಕನಿಗೆ ಗೌರವ ಸಲ್ಲಿಸಲು ನಾಡಿನ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ಆದರೆ ಈ ಕಾರ್ಯಕ್ರಮದ ಹೈಲೈಟ್ ಆಗಿದ್ದು 2007ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ವಿದ್ಯಾರ್ಥಿ ನವೀನ್ ಹುಲಿಹಳ್ಳಿ ನೀಡಿದ ವಿಶೇಷ ಕಾಣಿಕೆ. ನವೀನ್ ತನ್ನ ಗುರುವಿಗೆ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ಮೌಲ್ಯದ ಹೊಸ 'ಮಾರುತಿ ಸುಜುಕಿ ಸ್ವಿಫ್ಟ್' ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಬಡ ವಿದ್ಯಾರ್ಥಿಗೆ ಪೋಷಕರಾಗಿದ್ದ ಶಿಕ್ಷಕ:

ಬೆಂಗಳೂರಿನ ಎಂಎನ್‌ಸಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ನವೀನ್ ಅವರ ಈ ನಿರ್ಧಾರದ ಹಿಂದೆ ಒಂದು ನೋವಿನ ಮತ್ತು ಸ್ಫೂರ್ತಿದಾಯಕ ಕಥೆಯಿದೆ. ನವೀನ್ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದರು. ತೀವ್ರ ಬಡತನದ ಕಾರಣ ಅವರ ಶಿಕ್ಷಣ ಅರ್ಧಕ್ಕೆ ನಿಲ್ಲುವ ಹಂತ ತಲುಪಿತ್ತು. ಅಂತಹ ಸಮಯದಲ್ಲಿ ಶಿಕ್ಷಕ ವಸ್ತ್ರದ್ ಅವರು ನವೀನ್‌ಗೆ ಆರ್ಥಿಕವಾಗಿ ಸಹಾಯ ಮಾಡಿದ್ದಲ್ಲದೆ, ರಜಾ ದಿನಗಳಲ್ಲೂ ವಿಶೇಷ ಪಾಠಗಳನ್ನು ಹೇಳಿಕೊಟ್ಟಿದ್ದರು. ಸ್ನಾತಕೋತ್ತರ ಪದವಿ ಮುಗಿಯುವವರೆಗೂ ಶಿಕ್ಷಕರು ನವೀನ್‌ಗೆ ಒಬ್ಬ ಪೋಷಕನಂತೆ ಬೆನ್ನೆಲುಬಾಗಿ ನಿಂತಿದ್ದರು.

ಶಿಷ್ಯನ ಕೃತಜ್ಞತೆ - ಗುರುವಿನ ಭಾವುಕತೆ:

ಕಾರಿನ ಕೀ ಹಸ್ತಾಂತರಿಸಿ ಮಾತನಾಡಿದ ನವೀನ್, 'ವಸ್ತ್ರದ್ ಸರ್ ಕೇವಲ ಪಠ್ಯದ ಪಾಠ ಮಾಡಲಿಲ್ಲ, ಜೀವನದ ಪಾಠ ಕಲಿಸಿದರು. ನನ್ನ ಜೀವನದ ಈ ಯಶಸ್ಸಿಗೆ ಅವರೇ ಕಾರಣ. ಅವರಿಗೆ ಈ ಕಾರು ನೀಡುತ್ತಿರುವುದು ನನ್ನ ಸಣ್ಣ ಕೃತಜ್ಞತೆ ಅಷ್ಟೇ,' ಎಂದರು. ಶಿಕ್ಷಕ ಸಿ.ಎಸ್. ವಸ್ತ್ರದ್ ಅವರು ಮಾತನಾಡಿ, 'ನನ್ನ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಸೇರಿರುವುದೇ ನನಗೆ ದೊಡ್ಡ ಪ್ರಶಸ್ತಿ. ನವೀನ್ ನಡೆ ನನಗೆ ಮಾತು ಬಾರದಂತೆ ಮಾಡಿದೆ. ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ ಅಷ್ಟೇ' ಎಂದು ಭಾವುಕರಾದರು.

ಹಾನಗಲ್‌ನ ಕುಮಾರೇಶ್ವರ ಮಠದ ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ಈ ಸಮಾರಂಭವು ಆಧುನಿಕ ಕಾಲದಲ್ಲೂ 'ಗುರು-ಶಿಷ್ಯ' ಪರಂಪರೆ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದೆ.

PREV
Read more Articles on
click me!

Recommended Stories

ಧಾರವಾಡ ಯೂಥ್ ಕಾಂಗ್ರೆಸ್ ನಾಯಕನ ಕೊಲೆ ಆರೋಪಿಗೆ ಕಿಮ್ಸ್‌ನಲ್ಲಿ ರಾಜಾತಿಥ್ಯ! ಮೊಬೈಲ್ ಚಾಟಿಂಗ್, ಮದ್ಯದ ಬಾಟಲಿ ಪತ್ತೆ?
ಪಾಕಿಸ್ತಾನ ವಿರುದ್ಧ ಗೆದ್ದು ಚಿನ್ನದ ಪದಕ ಮುಡಿಗೇರಿಸಿಕೊಂಡ ಬೆಂಗಳೂರು ಪೊಲೀಸ್ ಪುತ್ರ ಶ್ರೀಹರ್ಷ!