ಧಾರವಾಡ ಯೂಥ್ ಕಾಂಗ್ರೆಸ್ ನಾಯಕನ ಕೊಲೆ ಆರೋಪಿಗೆ ಕಿಮ್ಸ್‌ನಲ್ಲಿ ರಾಜಾತಿಥ್ಯ! ಮೊಬೈಲ್ ಚಾಟಿಂಗ್, ಮದ್ಯದ ಬಾಟಲಿ ಪತ್ತೆ?

Published : Jun 09, 2026, 07:59 PM IST
Dharwad mainuddin nadaph mobile

ಸಾರಾಂಶ

ಯೂಥ್ ಕಾಂಗ್ರೆಸ್ ಮುಖಂಡ ಪೈರೋಜ್ ಪಠಾಣ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮೈನುದ್ದೀನ್ ನಧಾಪ್, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಸ್ಪತ್ರೆಯಲ್ಲೇ ಆತ ಮೊಬೈಲ್ ಬಳಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಮದ್ಯದ ಬಾಟಲಿಗಳು ಪತ್ತೆಯಾಗಿವೆ ಎಂಬ ಆರೋಪ ಕೇಳಿಬಂದಿದೆ.

ವರದಿ : ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಜೂ.09) : ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೈರೋಜ್ ಪಠಾಣ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮೈನುದ್ದೀನ್ ನಧಾಪ್‌ಗೆ ಕಿಮ್ಸ್ ಆಸ್ಪತ್ರೆಯಲ್ಲಿ ರಾಜಾತಿಥ್ಯ ಸಿಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

 ಹೌದು ಕಳೆದ ಎಪ್ರಿಲ್ 10 ರಂದು ಯೂಥ್ ಕಾಂಗ್ರೇಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪೈರೋಜ್ ಪಠಾಣ ಎಂಬಾತನನ್ನ 14 ಜನರ ಗ್ಯಾಂಗ್ ಕೊಲೆ ಮಾಡಿ ಜೈಲು ಸೇರಿದ್ದಾರೆ. ಆದರೆ ಅದರಲ್ಲಿ ಕೊಲೆ ಆರೋಪಿ ಮೈನೂದ್ದಿನ್ ನಧಾಪ ಎಂಬುವನು ಅನಾರೋಗ್ಯದ ಕಾರಣದಿಂದ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ

ಆದರೆ, ಕಳೆದ ಒಂದು ವಾರದ ಹಿಂದೆ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯಲು ಧಾರವಾಡ ಕೇಂದ್ರ ಕಾರಾಗೃಹದಿಂದ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿತ್ತು. ಆದರೆ ಆರೋಪಿ ಮೈನೂದ್ದಿನ ನಧಾಪ್ ಮೊಬೈಲ್ ಬಳಸಿ ಮಾತನಾಡುತ್ತಿರುವ ಹಾಗೂ ಚಾಟಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಆಸ್ಪತ್ರೆಯಲ್ಲೇ ಮದ್ಯದ ಬಾಟಲಿಗಳು ಪತ್ತೆಯಾಗಿರುವ ಆರೋಪವೂ ಕೇಳಿಬಂದಿದ್ದು, ಭದ್ರತಾ ವ್ಯವಸ್ಥೆಯ ಮೇಲೆಯೇ ಅನುಮಾನ ಮೂಡಿಸಿದೆ.

ಜೈಲಿನ ನಿಯಮಗಳ ಉಲ್ಲಂಘನೆ

ಕಳೆದ ಏಪ್ರಿಲ್ 10ರಂದು ಯೂಥ್ ಕಾಂಗ್ರೆಸ್ ನ ಪೈರೋಜ್ ಪಠಾಣ್ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಮೈನುದ್ದೀನ್ ನಧಾಪ್ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದರೆ ಇದೀಗ ಆಸ್ಪತ್ರೆಯ ಬೆಡ್ ಮೇಲೆಯೇ ಮಲಗಿಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಿರುವ ಹಾಗೂ ಚಾಟಿಂಗ್ ನಡೆಸುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಜೈಲು ನಿಯಮಗಳ ಪ್ರಕಾರ ಬಂಧಿತ ಆರೋಪಿಗಳಿಗೆ ಮೊಬೈಲ್ ಬಳಕೆಗೆ ಅವಕಾಶ ಇಲ್ಲ. ಆದರೆ ಮೈನುದ್ದೀನ್ ನಧಾಪ್ ಕೈಯಲ್ಲಿ ಮೊಬೈಲ್ ಹೇಗೆ ಬಂತು ಎಂಬ ಪ್ರಶ್ನೆ ಉದ್ಭವಿಸಿದೆ. ಇನ್ನೂ ಪೈರೋಜ್ ಪಠಾಣ್ ಕುಟುಂಬಕ್ಕೆ ಇದೇ ಮೊಬೈಲ್ ಮೂಲಕ ಬೆದರಿಕೆ ಸಂದೇಶಗಳು ಹೋಗಿವೆ ಎಂಬ ಗಂಭೀರ ಆರೋಪವೂ ಕೇಳಿಬರುತ್ತಿದೆ.

ಇದಕ್ಕಿಂತಲೂ ಆತಂಕಕಾರಿ ಸಂಗತಿ ಎಂದರೆ, ಕಿಮ್ಸ್ ಆಸ್ಪತ್ರೆಯಲ್ಲೇ ಮೊಬೈಲ್ ಜೊತೆಗೆ ಮದ್ಯದ ಬಾಟಲಿಗಳು ಪತ್ತೆಯಾಗಿವೆ ಎನ್ನಲಾಗುತ್ತಿದೆ. ಇದರಿಂದ ಆಸ್ಪತ್ರೆಯ ಭದ್ರತಾ ವ್ಯವಸ್ಥೆ ಹಾಗೂ ಆರೋಪಿಯ ಮೇಲಿನ ನಿಗಾ ಕುರಿತು ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ. ಆರೋಪಿಗೆ ಈ ಎಲ್ಲ ಸೌಲಭ್ಯಗಳನ್ನು ಯಾರು ಒದಗಿಸುತ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪೊಲೀಸ್ ಅಧಿಕಾರಿಗಳೇ ಶಾಮೀಲು ಆರೋಪ

ಮೈನುದ್ದೀನ್ ನಧಾಪ್, ಪ್ರಕರಣದ ಮತ್ತೊಬ್ಬ ಆರೋಪಿ ಹಾಗೂ ಕಳೆದ ಎರಡು ತಿಂಗಳಿಂದ ತಲೆಮರೆಸಿಕೊಂಡಿರುವ ಇಸ್ಮಾಯಿಲ್ ತಮಾಟಗಾರನ ಸಂಬಂಧಿ ಎನ್ನಲಾಗುತ್ತಿದೆ. ಈ ನಡುವೆ ವೈರಲ್ ವಿಡಿಯೋ ಹೊಸ ವಿವಾದಕ್ಕೆ ಕಾರಣವಾಗಿದ್ದು ಜೈಲು ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿವೆ. ಆಸ್ಪತ್ರೆಯಲ್ಲಿರುವ ಕೊಲೆ ಆರೋಪಿಗೆ ಮೊಬೈಲ್ ಮತ್ತು ಇತರೆ ಸೌಲಭ್ಯಗಳು ಹೇಗೆ ಲಭ್ಯವಾದವು ಭದ್ರತಾ ಲೋಪ ನಡೆದಿದೆಯೇ ಇದಕ್ಕೆ ಯಾರು ಹೊಣೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಪೈರೋಜ್ ಪಠಾಣ್ ಕುಟುಂಬ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಕೊಲೆ ಪ್ರಕರಣದ ಆರೋಪಿ ಆಸ್ಪತ್ರೆಯಲ್ಲೇ ರಾಜಾರೋಷವಾಗಿ ಮೊಬೈಲ್ ಬಳಸುತ್ತಿರುವ ವಿಡಿಯೋ ಹೊರಬಿದ್ದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

ಪಾಕಿಸ್ತಾನ ವಿರುದ್ಧ ಗೆದ್ದು ಚಿನ್ನದ ಪದಕ ಮುಡಿಗೇರಿಸಿಕೊಂಡ ಬೆಂಗಳೂರು ಪೊಲೀಸ್ ಪುತ್ರ ಶ್ರೀಹರ್ಷ!
ಕನಕಗಿರಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ಮಹಿಳೆ ಮೇಲೆ ಸಾಮೂಹಿಕ ಅತ್ಯಾ*ಚಾರ ಶಂಕೆ, ಬೆಂಕಿ ಹಚ್ಚಿ ಹ*ತ್ಯೆ?