₹46.33 ಲಕ್ಷ ವೇತನದ ಉದ್ಯೋಗ ಪಡೆದ ಆಳ್ವಾಸ್ ಕಾಲೇಜಿನ ಹಾವೇರಿ ರೈತನ ಮಗಳು ಸೃಷ್ಟಿ ಉಳ್ಳಾಗಡ್ಡಿ

Published : Sep 01, 2026, 08:50 AM IST
moodubidire

ಸಾರಾಂಶ

ಹಾವೇರಿಯ ರೈತ ಕುಟುಂಬದ ಸೃಷ್ಟಿ ಮಂಜುನಾಥ ಉಳ್ಳಾಗಡ್ಡಿ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ, ಜಾಗತಿಕ ಸಂಸ್ಥೆ ವೀಸಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ. ಇಂಟರ್ನ್‌ಶಿಪ್ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ ಇವರು, ವಾರ್ಷಿಕ ₹46.33 ಲಕ್ಷ ವೇತನದ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.

ಮೂಡುಬಿದಿರೆ: ಹಾವೇರಿಯ ಹಟ್ಟಿಮತ್ತೂರು ಗ್ರಾಮದ ರೈತನ ಮಗಳೊಬ್ಬಳ ಪ್ರತಿಭೆ ಇದೀಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸೃಷ್ಟಿ ಮಂಜುನಾಥ ಉಳ್ಳಾಗಡ್ಡಿ, ಜಾಗತಿಕ ಪಾವತಿ ತಂತ್ರಜ್ಞಾನ ಸಂಸ್ಥೆ ವೀಸಾದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಆಯ್ಕೆಯಾಗಿದ್ದು, ವೇತನ ಹಾಗೂ ಇನ್ನಿತರ ಸೌಲಭ್ಯಗಳನ್ನು ಒಳಗೊಂಡಂತೆ ₹46.33 ಲಕ್ಷದ ವಾರ್ಷಿಕ ವೇತನವನ್ನು ಪಡೆದುಕೊಂಡಿದ್ದಾರೆ.

ಆರನೇ ಸೆಮಿಸ್ಟರ್‌ನ ಸಂದರ್ಶನದಿಂದ ವೀಸಾ ಉದ್ಯೋಗ

ಸೃಷ್ಟಿಯ ವೃತ್ತಿಜೀವನಕ್ಕೆ ವೀಸಾದಲ್ಲಿನ ಇಂಟರ್ನ್ ಶಿಪ್ ಮಹತ್ವದ ತಿರುವು ನೀಡಿತು. ಆಳ್ವಾಸ್‌ನಲ್ಲಿ ವಿದ್ಯಾರ್ಥಿಗಳ ವೃತ್ತಿಪರ ಕೌಶಲ್ಯ ವೃದ್ಧಿಗೆ ಗುಣಮಟ್ಟದ ಇಂಟರ್ನ್ ಶಿಪ್ ಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಅದರ ಭಾಗವಾಗಿ ಆರನೇ ಸೆಮಿಸ್ಟರ್‌ನಲ್ಲಿ ವೀಸಾದಲ್ಲಿ ಇಂಟರ್ನ್ ಶಿಪ್ ಮಾಡಲು ಅವಕಾಶ ಪಡೆದರು.

10 ವಾರಗಳ ಅವಧಿಯಲ್ಲಿ ರೂ. 90,000 ಸ್ಟೈಪೆಂಡ್‌ನೊಂದಿಗೆ ಕಾರ್ಯನಿರ್ವಹಿಸಿದ ಅವರು, ಸಂಸ್ಥೆಯ ವಾತಾವರಣದಲ್ಲಿ ತಮ್ಮ ತಾಂತ್ರಿಕ ಜ್ಞಾನ ಹಾಗೂ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದರು. ಅವರ ಇಂಟರ್ನ್ ಶಿಪ್ ಸಾಧನೆ ಮೆಚ್ಚಿದ ವೀಸಾ ಸಂಸ್ಥೆ, ಬಳಿಕ ಅವರನ್ನು ಸಾಫ್ಟ್ ವೇರ್ ಎಂಜಿನಿಯರ್ ಹುದ್ದೆಗೆ ಪೂರ್ಣಾವಧಿ ಯಾಗಿ ಆಯ್ಕೆ ಮಾಡಿತು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಇಂಟರ್ನ್ ಶಿಪ್ ಅವಕಾಶಗಳನ್ನು ಕಲ್ಪಿಸುವ ಆಳ್ವಾಸ್‌ನ ಪ್ರಯತ್ನವು ಸೃಷ್ಟಿಯ ಪಾಲಿಗೆ ನೇರವಾಗಿ ಜಾಗತಿಕ ಉದ್ಯೋಗಕ್ಕೆ ಅರ್ಹತೆಯನ್ನು ನೀಡಿತು.

46.33 ಲಕ್ಷದ ಒಟ್ಟು ಮೌಲ್ಯ

ವೀಸಾ ಸಂಸ್ಥೆಯ ಉದ್ಯೋಗ ಕೊಡುಗೆಯಲ್ಲಿ ವೇತನದ ಜತೆಗೆ ಹಲವು ಸೌಲಭ್ಯಗಳನ್ನೂ ಒದಗಿಸಲಾಗಿದೆ. ಕುಟುಂಬಕ್ಕೆ ರೂ. 7.50 ಲಕ್ಷ ಮೌಲ್ಯದ ವೈದ್ಯಕೀಯ ವಿಮೆ, ₹25,000ದ ಹೊರರೋಗಿ ಚಿಕಿತ್ಸಾ ಸೌಲಭ್ಯ ಹಾಗೂ ಗರಿಷ್ಠ ರೂ.3 ಲಕ್ಷದವರೆಗೆ ಶಿಕ್ಷಣ ಸಹಾಯಧನ ದೊರೆಯಲಿದೆ. ಇದರೊಂದಿಗೆ ಜಿಮ್ ಸೌಲಭ್ಯ, ಕಚೇರಿ ಸಾರಿಗೆ ಹಾಗೂ ವಾರ್ಷಿಕ ಆರೋಗ್ಯ ತಪಾಸಣೆಯಂತಹ ಹೆಚ್ಚುವರಿ ಸೌಲಭ್ಯಗಳೂ ಲಭ್ಯವಿವೆ.

ಇಂಟರ್ನ್ ಶಿಪ್ ಕನಸಿನ ಉದ್ಯೋಗಕ್ಕೆ ದಾರಿ ಮಾಡಿಕೊಟ್ಟಿತು: ಸೃಷ್ಠಿ

ಆಳ್ವಾಸ್ ಇಂಟರ್ನ್ ಶಿಪ್ ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಸೂಕ್ತವಾದ ಸಂಸ್ಥೆಗಳಲ್ಲಿ ಅವಕಾಶಗಳನ್ನು ಕಲ್ಪಿಸುತ್ತದೆ. ವೀಸಾದಲ್ಲಿ ದೊರೆತ ಇಂಟರ್ನ್ ಶಿಪ್ ನನಗೆ ಅಮೂಲ್ಯವಾದ ಉದ್ಯಮ ಅನುಭವ ನೀಡಿತು. ಅದೇ ಅವಕಾಶ ನನ್ನ ಕನಸಿನ ಉದ್ಯೋಗ ಪಡೆಯಲು ನೆರವಾಯಿತು ಎಂದು ಸೃಷ್ಟಿ ತಿಳಿಸಿದರು.

ಗ್ರಾಮೀಣ ಪ್ರತಿಭೆಗೆ ಜಾಗತಿಕ ಅವಕಾಶ: ಡಾ ಆಳ್ವ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಸೃಷ್ಟಿಯ ಸಾಧನೆಯನ್ನು ಅಭಿನಂದಿಸಿ, ಆಳ್ವಾಸ್‌ನ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. “ಗ್ರಾಮೀಣ ಹಿನ್ನೆಲೆಯ ರೈತ ಕುಟುಂಬದಿಂದ ಬಂದಿರುವ ಸೃಷ್ಟಿ ಅವರು ತಮ್ಮ ಪ್ರತಿಭೆ, ಪರಿಶ್ರಮ ಹಾಗೂ ಕಾರ್ಯಕ್ಷಮತೆಯ ಮೂಲಕ ಜಾಗತಿಕ ಸಂಸ್ಥೆಯಲ್ಲಿ ಅವಕಾಶ ಪಡೆದಿರುವುದು ಗಮನಾರ್ಹ.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸೂಕ್ತ ಉದ್ಯಮ ಸಂಪರ್ಕ, ಇಂಟರ್ನ್ ಶಿಪ್ ಹಾಗೂ ಪ್ರಾಯೋಗಿಕ ಅನುಭವ ದೊರೆತಾಗ ಅವರ ಪ್ರತಿಭೆಗೆ ಜಾಗತಿಕ ಮಟ್ಟದಲ್ಲಿ ಅವಕಾಶಗಳು ತೆರೆದುಕೊಳ್ಳುತ್ತವೆ. ಸೃಷ್ಟಿ ಅವರ ಸಾಧನೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದರು. ವಿದ್ಯಾರ್ಥಿಯ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಪ್ರಾಚಾರ‍್ಯರು, ಅಧ್ಯಾಪಕ ವೃಂದದವರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Haveri: SSLCಯಲ್ಲಿ 98%, PUCಯಲ್ಲಿ 95%: ಬಿಂದುಶ್ರೀಗೆ ನೀಟ್‌ನಲ್ಲಿ ಬಂದಿದ್ದು 11 ಅಂಕ

PREV
Read more Articles on
click me!

Recommended Stories

ಸವಣೂರು ಆಸ್ಪತ್ರೆಯಲ್ಲಿ ರೋಗಿಗಳಿಂದ ಮಲಗುಂಡಿ ಸ್ವಚ್ಛತೆ: ಇಬ್ಬರು ವೈದ್ಯಾಧಿಕಾರಿಗಳು ಅಮಾನತು!
ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಗಗನಚುಕ್ಕಿ-ಭರಚುಕ್ಕಿ ಜಲಪಾತ; ಕಬಿನಿ ಜಲಾಶಯ ಭರ್ತಿ