ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಗಗನಚುಕ್ಕಿ-ಭರಚುಕ್ಕಿ ಜಲಪಾತ; ಕಬಿನಿ ಜಲಾಶಯ ಭರ್ತಿ

Published : Sep 01, 2026, 08:33 AM IST
Gaganachukki and Bharachukki

ಸಾರಾಂಶ

ಕೇರಳದಲ್ಲಿನ ವ್ಯಾಪಕ ಮಳೆಯಿಂದ ಕಬಿನಿ ಜಲಾಶಯ ಭರ್ತಿಯಾಗಿದ್ದು, ನದಿಗೆ ಹೆಚ್ಚಿನ ನೀರು ಬಿಡಲಾಗಿದೆ. ಇದರಿಂದಾಗಿ, ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಈ ನೈಸರ್ಗಿಕ ಜಲವೈಭವವು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಮಂಡ್ಯ: ಗಗನದಿಂದ ಹಾಲಿನ ನೊರೆಯಂತೆ ದುಮ್ಮಿಕ್ಕಿ ಹರಿಯುತ್ತಿರುವ ವಿಶ್ವ ಪ್ರಸಿದ್ಧ ಗಗನಚುಕ್ಕಿ ಜಲಪಾತಕ್ಕೆ ನೈಸರ್ಗಿಕ ಸೌಂದರ್ಯದ ಜೀವಕಳೆ ಬಂದಿದ್ದು, ಜಲ ಸಿರಿಯ ವೈಭವ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

ಕಳೆದ ವಾರವಷ್ಟೇ ನೀರಿಲ್ಲದೇ ಕಲ್ಲು ಬಂಡಗಳಿಂದ ಭಣಗುಡುತ್ತಿದ್ದ ಗಗನ ಚುಕ್ಕಿ ಜಲಪಾತ ಪ್ರವಾಸಿಗರಿಲ್ಲದೆ ಸೊರಗಿತ್ತು. ಇತ್ತೀಚಿಗೆ ಕೇರಳದಲ್ಲಿ ವ್ಯಾಪಕ ಮಳೆಯಾಗಿ ಕಬಿನಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ನದಿಗೆ ಸುಮಾರು ೩೦ ಸಾವಿರ ಕ್ಯುಸೆಕ್ ನೀರು ಬಿಡುತ್ತಿರುವುದರಿಂದ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ ಮೈದುಂಬಿಕೊಂಡಿವೆ. ಜಲಪಾತದಲ್ಲಿನ ಜಲವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ದಿನದಿನಕ್ಕೆ ಹೆಚ್ಚಾಗುತ್ತಿದೆ.

ನೂರಾರು ಅಡಿಗಳ ಎತ್ತರದಿಂದ ಧುಮ್ಮಿಕ್ಕುವ ಗಗನಚುಕ್ಕಿ ಜಲಪಾತ ಹಾಗೂ ಕಲ್ಲು ಬಂಡೆಗಳ ನಡುವೆ ಮೈ ದುಂಬಿ ಹರಿಯುವ ಕೊಳ್ಳೇಗಾಲದ ಭರಚುಕ್ಕಿ ಜಲಪಾತಗಳು ತನ್ನ ಸೌಂದರ್ಯದ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಎರಡೂ ಜಲಧಾರೆಗಳು ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಗಡಿಯಂಚಿನನಲ್ಲಿದ್ದು, ಕೊಡಗಿನ ತಲಕಾವೇರಿಯಲ್ಲಿ ಉಗಮವಾಗುವ ಕಾವೇರಿ ನದಿಯು ಬೆಟ್ಟ-ಗುಡ್ಡ, ಕಾಡು-ಮೇಡುಗಳ ಮೂಲಕ ಸಾಗಿ ಶಿವನಸಮುದ್ರ ತಲುಪುತ್ತಿದ್ದಂತೆಯೇ ಧುಮುಕಿ ಗಗನಚುಕ್ಕಿ ಬಳಿಕ ಭರಚುಕ್ಕಿಯಾಗಿ ರೂಪಾಂತರಗೊಂಡು ಹರಿಯುತ್ತದೆ.

ಸಮಸ್ಯೆಗೆ ಪರಿಹಾರ, ವಿವಾದ ಜೀವಂತ

ಕಾವೇರಿ ನ್ಯಾಯಮಂಡಳಿ ತೀರ್ಪಿನ ಪ್ರಕಾರ ಪ್ರತಿದಿನ 10 ಸಾವಿರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕೆಂಬ ಆದೇಶದ ವಿರುದ್ಧ ರಾಜ್ಯಾದ್ಯಂತ ಹೋರಾಟದ ಕಿಚ್ಚನ್ನು ಹೆಚ್ಚಿಸಿತ್ತು. ಕೆಆರ್‌ಎಸ್ ಅಣೆಕಟ್ಟೆಯಲ್ಲಿಯೇ ನೀರಿಲ್ಲದ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸಬಾರದೆಂಬ ಕೂಗು ಎಲ್ಲೆಡೆಯೂ ಕೇಳಿ ಬರುತ್ತಿತ್ತು.

ತಮಿಳುನಾಡಿಗೆ ನೀರು ಹರಿದುಹೋಗುವುದು ಗಗನಚುಕ್ಕಿ ಜಲಪಾತ ಸಾಕ್ಷಿಯಾಗಿ ಪರಿಣಮಿಸಿದೆ. ಗಗನಚುಕ್ಕಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂಬ ಕೂಗು ಕೂಡ ಕೇಳಿ ಬಂದಿತ್ತು. ಕಬಿನಿ ಜಲಾಶಯ ಭರ್ತಿಯಾಗಿ ಸಾವಿರಾರು ಕ್ಯುಸೆಕ್ ಗಗನಚುಕ್ಕಿ ಜಲಪಾತದ ಕಡೆಗೆ ಹರಿದು ಬಂದ ಪರಿಣಾಮ ಎರಡು ರಾಜ್ಯಗಳ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರಕಿದ್ದರೂ, ವಿವಾದವಿನ್ನೂ ಜೀವಂತವಾಗಿದೆ.

ಜಲಪಾತದ ಸೌಂದರ್ಯ

ಗಗನಚುಕ್ಕಿ ಜಲಪಾತಕ್ಕೆ ಹೆಚ್ಚಿನ ನೀರು ಹರಿದುಬರುತ್ತಿರುವುದರಿಂದ ಪ್ರವಾಸಿತಾಣದ ವೈಭವವನ್ನು ನೋಡಿ ಆನಂದ ಪಡುವಂತಾಗಿದೆ. ಮುಂಗಾರು ಮಳೆ ಸಮರ್ಪಕವಾಗಿ ಆಗದೇ ಬರ ಎದುರಾಗುತ್ತದೆ ಎಂಬ ಭಯ ಪ್ರತಿಯೊಬ್ಬರಲ್ಲಿತ್ತು. ಕಾವೇರಿ ಕಣಿವೆಯಲ್ಲಿ ವ್ಯಾಪಕ ಮಳೆಯಾಗಿ ಕಬಿನಿ ಭರ್ತಿಯಾಗಿದ್ದು, ಜೊತೆಗೆ ಜಲಪಾತದ ಸೌಂದರ್ಯವನ್ನು ಹೆಚ್ಚಿಸಿದೆ. ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ಗೆ ಹೆಚ್ಚಿನ ನೀರು ಬರುತ್ತಿದೆ. ಜಿಲ್ಲಾಡಳಿತ ಪ್ರವಾಸಿಗರ ಅನುಕೂಲಕ್ಕಾಗಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ ಎಂದು ರಾಜು ಮಳವಳ್ಳಿ ಆಗ್ರಹಿಸಿದ್ದಾರೆ.

ನೂರಾರು ಅಡಿಗಳ ಎತ್ತರದಿಂದ ಧುಮ್ಮಿಕ್ಕುವ ಗಗನಚುಕ್ಕಿ ಜಲಪಾತ ಹಾಗೂ ಕಲ್ಲು ಬಂಡೆಗಳ ನಡುವೆ ಮೈ ದುಂಬಿ ಹರಿಯುವ ಕೊಳ್ಳೇಗಾಲದ ಭರಚುಕ್ಕಿ ಜಲಪಾತಗಳು ತನ್ನ ಸೌಂದರ್ಯದ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತಿವೆ ಎಂದು ಪ್ರವಾಸಿಗ ಸಿ.ಸಿದ್ದರಾಜು ಹೇಳುತ್ತಾರೆ.

PREV
Read more Articles on
click me!

Recommended Stories

ಇಬ್ಬರು ವ್ಯಕ್ತಿಗಳಿಗೆ ಹಂಚಿಕೆಯಾದ ಒಂದೇ ಆಧಾರ್‌ ಸಂಖ್ಯೆ: ಜಮಖಂಡಿಯಲ್ಲಿ ಅಪರೂಪದ ಘಟನೆ
Bengaluru: 3 ಸಾವಿರ ಎಕರೆಯ ಕಾರಂತ ಬಡಾವಣೆ; 3200 ರೈತರಿಗೆ ಹಂಚಿಕೆಯಾದ BDA ನಿವೇಶನ