ಶಿಷ್ಯ ಎಚ್‌. ವಿಶ್ವನಾಥ್‌ಗೆ ಒಲಿದ ಮೊದಲ ಜಿಲ್ಲಾ ಮಟ್ಟದ ‘ಅರಸು’ ಪ್ರಶಸ್ತಿ

By Suvarna News  |  First Published Aug 20, 2022, 12:37 PM IST

 ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜಯಂತಿ ಅಂಗವಾಗಿ ಅವರ ಹೆಸರಿನಲ್ಲಿ ಜಿಲ್ಲಾ ಮಟ್ಟದಲ್ಲಿ ಈ ವರ್ಷದಿಂದ ನೀಡುವ ಪ್ರಶಸ್ತಿಯು ಅವರ ಶಿಷ್ಯರಾದ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಅವರಿಗೆ ಒಲಿದಿದೆ.


ಅಂಶಿ ಪ್ರಸನ್ನಕುಮಾರ್‌

ಮೈಸೂರು (ಆ.20): ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜಯಂತಿ ಅಂಗವಾಗಿ ಅವರ ಹೆಸರಿನಲ್ಲಿ ಜಿಲ್ಲಾ ಮಟ್ಟದಲ್ಲಿ ಈ ವರ್ಷದಿಂದ ನೀಡುವ ಪ್ರಶಸ್ತಿಯು ಅವರ ಶಿಷ್ಯರಾದ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಅವರಿಗೆ ಒಲಿದಿದೆ. ಕೆ.ಆರ್‌. ನಗರದಲ್ಲಿ ವಕೀಲಗಿರಿ ಮಾಡಿಕೊಂಡಿದ್ದ ಅಡಗೂರು ಗ್ರಾಮದ ವಿಶ್ವನಾಥ್‌ ಅವರನ್ನು ಗುರುತಿಸಿ, 1978ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡಿದ್ದೇ ಡಿ. ದೇವರಾಜ ಅರಸು. ಮೊದಲ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ವಿಶ್ವನಾಥ್‌ ಕಳೆದ ನಾಲ್ಕೂವರೆ ದಶಕಗಳಿಂದಲೂ ಸಕ್ರಿಯ ರಾಜಕಾರಣದಲ್ಲಿ ಉಳಿದುಕೊಂಡು ಬಂದಿದ್ದಾರೆ. ಗೆದ್ದ ಲೆಕ್ಕದಲ್ಲಿ ತೆಗೆದುಕೊಂಡರೇ ಮೈಸೂರು ಸೀಮೆಯ ಹಿರಿಯ ರಾಜಕಾರಣಿ. ಈವರೆಗೆ 12 ಚುನಾವಣೆ ಎದುರಿಸಿ, ಕೆ.ಆರ್‌. ನಗರದಿಂದ ಮೂರು ಬಾರಿ, ಹುಣಸೂರಿನಿಂದ ಒಂದು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಮೊದಲ ಮೂರು ಬಾರಿ ಕಾಂಗ್ರೆಸ್‌ ಆದರೆ, ನಾಲ್ಕನೇ ಬಾರಿ ಜೆಡಿಎಸ್‌ ಟಿಕೆಟ್‌. ಎಂ. ವೀರಪ್ಪ ಮೊಯ್ಲಿ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ, ನಂತರ ಅರಣ್ಯ ಖಾತೆ, ಎಸ್‌.ಎಂ. ಕೃಷ್ಣ ಸಂಪುಟದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಸಹಕಾರ ಸಚಿವರಾಗಿದ್ದರು. ಇದಲ್ಲದೇ 2009 ರಲ್ಲಿ ಮೈಸೂರು- ಕೊಡಗು ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿದ್ದರು. 2014 ರಲ್ಲಿ ಸೋತರು. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹುಣಸೂರು ಕ್ಷೇತ್ರದಿಂದ ಆಯ್ಕೆಯಾದ ಒಂದೇ ವರ್ಷದಲ್ಲಿ ರಾಜೀನಾಮೆ ನೀಡಿ, ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ ಸೋತರು. ನಂತರ ಸಾಹಿತ್ಯ ಕೋಟಾದಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ.

Latest Videos

undefined

ಹಿಂದುಳಿದ ಕುರುಬ ಜನಾಂಗಕ್ಕೆ ಸೇರಿದ ವಿಶ್ವನಾಥ್‌ ಹಳ್ಳಿ ಹಕ್ಕಿಯ ಹಾಡು,ಮತಸಂತೆ,ಆಪತ್‌ಸ್ಥಿತಿಯ ಆಲಾಪಗಳು, ದಿ ಟಾಕಿಂಗ್‌ಶಾಪ್‌, ಅಥೆನ್ಸಿನ ರಾಜ್ಯಾಡಳಿತ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಅತ್ಯುತ್ತಮ ವಾಕ್ಪುಟವೂ ಹೌದು. ಬಿಸಿಯೂಟ ಯೋಜನೆ, ನಮ್ಮ ಊರು, ನಮ್ಮ ಶಾಲೆ, ಸಮೂದಾಯದತ್ತ ಶಾಲೆ, ಯಶಶ್ವಿನಿ ಯೋಜನೆ, ದಸರಾ ಗಜಪಯಣ ಮೊದಲಾದವು ವಿಶ್ವನಾಥ್‌ ಜಾರಿ ಮಾಡಿದ ಕಾರ್ಯಕ್ರಮಗಳು. ಕಾಗಿನೆಲೆಯಲ್ಲಿ ಕನಕ ಗುರುಪೀಠ ಆರಂಭಕ್ಕೂ ಇವರದೇ ನೇತೃತ್ವ.

ಅರಸರನ್ನು ಜ್ಞಾಪಿಸಿದ್ದು ಇವರೇ: ಕೊನೆ ಕೊನೆಯಲ್ಲಿ ಅರಸರು ಇಂದಿರಾಗಾಂಧಿ ಅವರಿಗೆ ಕೈಕೊಟ್ಟರು ಎಂಬ ಕಾರಣದಿಂದ ಕಾಂಗ್ರೆಸ್‌ನವರು ಅರಸರ ಜಯಂತಿ ಆಚರಿಸುತ್ತಿರಲಿಲ್ಲ. ಅರಸು ಜಯಂತಿ ಅರಸು ಮಂಡಳಿ ಮತ್ತಿತರ ಸಂಘಟನೆಗಳಿಗೆ ಮೀಸಲಾಗಿತ್ತು.

ಆದರೆ ವಿಶ್ವನಾಥ್‌ ಸಂಸದರಾದ ನಂತರ ಮೊದಲ ಬಾರಿಗೆ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಸಂಸದರ ಅಂಗಳದಲ್ಲಿ ಅರಸರು ಎಂಬ ಕಾರ್ಯಕ್ರಮ ಏರ್ಪಡಿಸಿದ್ದರು. ಅರಸರ ಒಡನಾಡಿಗಳಾಗಿದ್ದ ಬಿ. ಸುಬ್ಬಯ್ಯಶೆಟ್ಟಿ, ಕೆ.ಆರ್‌. ರಮೇಶ್‌ಕುಮಾರ್‌ ಮೊದಲಾದವರನ್ನು ಕರೆಸಿದ್ದರು. ಇದಾದ ನಂತರ ಪ್ರತಿ ವರ್ಷ ಅರಸರ ಜಯಂತಿ ಆಚರಣೆ ಆರಂಭವಾಯಿತು. 2013 ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದಾಗ ಡಿ. ದೇವರಾಜ ಅವರ ಜನ್ಮ ಶತಮಾನೋತ್ಸವ ಆಚರಿಸಲು ವಿಶ್ವನಾಥ್‌ ಪ್ರಮುಖ ಕಾರಣಕರ್ತರು. 

ಕಲ್ಲಹಳ್ಳಿ, ಬೆಟ್ಟದತುಂಗ ಅಭಿವೃದ್ಧಿ: ಅರಸರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಹುಣಸೂರು ತಾಲೂಕಿನ ಕಲ್ಲಹಳ್ಳಿ ಹಾಗೂ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗ ಅಭಿವೃದ್ಧಿಗೆ ಕ್ರಮಕೈಗೊಂಡರು.

ಅರಸು ಪ್ರಜಾಭೂಷಣ: ಡಿ. ದೇವರಾಜ ಅರಸು ಪ್ರತಿಷ್ಠಾಪನಾ ಸಮಿತಿಯು ಎಚ್‌. ವಿಶ್ವನಾಥ್‌ ಅವರಿಗೆ ಅರಸು ಪ್ರಜಾಭೂಷಣ ಪ್ರಶಸ್ತಿಯನ್ನು ಪ್ರಕಟಿಸಿದೆ. ಅದು ಕೂಡ ಆ.20 ರಂದೇ ಪ್ರದಾನವಾಗಲಿದೆ.

'ಅರಸು ಪರಿಕಲ್ಪನೆಗೆ ಬಿಜೆಪಿ ತಿಲಾಂಜಲಿ'

 ವಿಶ್ವನಾಥ್‌ ಸಂತಸ: ಹಿಂದುಳಿದ ವರ್ಗಗಳ ಪರ ಧ್ವನಿ ಎತ್ತಿ, ಅವರ ಕಲ್ಯಾಣಕ್ಕಾಗಿ ಕಳೆದ ನಾಲ್ಕೂವರೆ ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ವಿಶ್ವನಾಥ್‌ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿಯೇ ಬರಬೇಕಿತ್ತು. ಆದರೆ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನಮ್ಮದು ವಿಎಚ್‌ಪಿ, ಬಜರಂಗದಳ, ಆರ್‌ಎಸ್‌ಎಸ್‌ ಸರ್ಕಾರವಲ್ಲ, ಬಿಜೆಪಿ ಗೋರ್ಮೆಂಟ್‌: ವಿಶ್ವನಾಥ್‌

ಈ ಬಗ್ಗೆ ‘ಕನ್ನಡಪ್ರಭ’ ಸಂಪರ್ಕಿಸಿದಾಗ ಸಂತಸ ವ್ಯಕ್ತಪಡಿಸಿದ ಅವರು, ನಾನು ರಾಜ್ಯ ಮಟ್ಟ, ಜಿಲ್ಲಾ ಮಟ್ಟಎಂದು ತಲೆಕೆಡಿಸಿಕೊಂಡಿಲ್ಲ. ನನ್ನನ್ನು ರಾಜಕೀಯವಾಗಿ ಗುರುತಿಸಿ, ಈ ಮಟ್ಟಕ್ಕೆ ಬರಲು ಕಾರಣರಾದವರು ದೇವರಾಜ ಅರಸರು. ಹೀಗಾಗಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದಾಗಿ ಜಿಲ್ಲಾಧಿಕಾರಿ ಮತ್ತಿತರರು ಬಂದು ಕೇಳಿಕೊಂಡಾಗ ವಿನಮ್ರವಾಗಿ ಒಪ್ಪಿಕೊಂಡಿದ್ದೇನೆ. ನನಗೆ ಅರಸರ ಹೆಸರು ದೊಡ್ಡದು ಎಂದರು.

click me!