ಶೇಷಮೂರ್ತಿ ಅವಧಾನಿ
ಕೋರಳ್ಳಿ (ಆಳಂದ) : ಕಬ್ಬಿನಗದ್ದೆಯಲ್ಲಿ ಕಾಮಾಂಧ ನಡೆಸಿರುವ ಪಾಶವಿ ಕೃತ್ಯದಿಂದಾಗಿ ಕೋರಳ್ಳಿ ಮಹಿಳೆಯರು, ಯುವತಿಯರು, ಹೈಸ್ಕೂಲ್ ಬಾಲಕಿಯರು ಬಯಲಲ್ಲಿ ಬಹಿರ್ದೆಸೆಗೆ ಹೋಗಲಿಕ್ಕೂ ಭಯ ಪಡುವಂತಾಗಿದೆ. ಅಮರ್ಜಾ ನದಿ ತೀರದ ಕಬ್ಬಿನ ಗದ್ದೆಯಲ್ಲಿ ನಡೆದಿರುವ ಅಪ್ರಾಪ್ತೆಯ ಅತ್ಯಾಚಾರ, ಕೊಲೆಯ ಕಹಿ ಘಟನೆ ಕೋರಳ್ಳಿ ಮಹಿಳೆಯರಲ್ಲಿ ಅವ್ಯಕ್ತ ಭಯ ಹುಟ್ಟು ಹಾಕಿದೆ.
undefined
ಅವಧಿಪೂರ್ವ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ: ಯುವಕನ ಮೇಲೆ ಪೋಕ್ಸೋ ಕೇಸ್
’ಕನ್ನಡಪ್ರಭ’ ಈ ಊರಿಗೆ ಭೇಟಿ ನೀಡಿದ ಸಮಯದಲ್ಲಿ ಅಜ್ಜಿಯೊಬ್ಬರು ಮುಳ್ಳು ಪೊದೆಗಳ ಹತ್ರ ನಿಂತುಕೊಂಡಿದ್ದನ್ನು ಗಮನಿಸಿ ಮಾತಿಗೆ ಮುಂದಾದಾಗ ಆ ಅಜ್ಜಿ, ‘ನನ್ನ ಮೂರು ಮೊಮ್ಮಕ್ಕಳು (ಬಾಲಕಿಯರು) ಬೈಲ್ಕಡಿಗೆ ಹೋಗ್ಯಾರಪ್ಪ, ಅದ್ಕ ಕೋಲ ಹಿಡ್ಕೊಂಡು ಕಾಯ್ಕೊಂತ ಇದ್ದೀನಿ’ ಎಂದು ಹೇಳಿದ ಮಾತು ಊರಲ್ಲಿನ ಮಡುಗಟ್ಟಿದ ಭೀತಿಗೆ ಕನ್ನಡಿ ಹಿಡಿದಂತಿತ್ತು.
ಇಡೀ ಕುಟುಂಬದ ವಾಸಕ್ಕೇ ಸ್ಥಳವಿಲ್ಲದ ಈ ಊರಿನ ಅನೇಕ ಕುಟುಂಬಗಳಿಗೆ ಇಂದಿಗೂ ಬಯಲೇ ಶೌಚಾಲಯ. 4 ವರ್ಷದ ಹಿಂದಿಲ್ಲಿ ಕಟ್ಟಲಾಗಿರುವ ಸಾಮೂಹಿಕ ಶೌಚಗೃಹ ಮುಳ್ಳು ಕಂಟಿಗಳಲ್ಲಿ ಅವಿತು ಕುಳಿತಿದೆ!. ಈ ಶೌಚಗೃಹದಲ್ಲಿ ನಿರ್ವಹಣೆ, ನೀರಿನ ವ್ಯವಸ್ಥೆ ಇಲ್ಲ. ಹೀಗಾಗಿ, ಈ ಶೌಚಗೃಹವನ್ನು ಬಳಕೆ ಮಾಡಲಾಗದೆ ಮಹಿಳೆಯರಿಗೆ ಬಯಲಲ್ಲೇ ತಮ್ಮ ನಿಸರ್ಗದ ಕರೆಯನ್ನು ಪೂರೈಸಿಕೊಳ್ಳೋ ಅನಿವಾರ್ಯತೆ ಇದೆ. ಮೇಲಾಗಿ ಹೆಂಗಸರು ಬಯಲು ಬಹಿರ್ದೆಸೆ ಹೋಗೋ ದಾರಿಯಲ್ಲೇ ದಾರು ದುಕಾನ್ ಇದ್ದು, ಇದರಿಂದಾಗಿ ಇಲ್ಲಿನ ಮಹಿಳೆಯರು ನಿತ್ಯ ಕಿರಿಕಿರಿ ಎದುರಿಸುತ್ತಿದ್ದಾರೆ.
ಶೌಚಗೃಹ ಕಟ್ಟಿಕೊಡಲಿಕ್ಕೆ ಯಾರೂ ಒಲ್ಲರು:
ಈ ಕ್ಷೇತ್ರ ಪ್ರತಿನಿಧಿಸುವ ಶಾಸಕರು ಕೋರಳ್ಳಿಗೆ ಬಂದಾಗೆಲ್ಲಾ ಸುಸಜ್ಜಿತ ಶೌಚಾಲಯಕ್ಕಾಗಿ ನಾವು ಮೊರೆ ಇಟ್ಟರೂ ಅವರ್ಯಾರೂ ನಮ್ಮ ಮೊರೆ ಆಲಿಸಿಲ್ಲ. ನಾಲ್ಕು ವರ್ಷದ ಹಿಂದೆ ಕಟ್ಟಿರೋ ಶಾಚಾಲಯ ಮುಳ್ಳುಕಂಟ್ಯಾಗ ಮುಚ್ಚಿ ಹೋಗ್ಯದ. ಆ ಶೌಚಗೃಹ ನಿರ್ವಹಣೆ ಇಲ್ಲ, ಒಬ್ಬೊಬ್ಬರೆ ಅಲ್ಲಿ ಹೋಗಿ ಅದನ್ನ ಬಳಸಲಿಕ್ಕೂ ಆಗೋದಿಲ್ಲ. ಹೆಣ್ಮಕ್ಕಳ ಸಮಸ್ಯೆಯಾರಿಗೂ ಅರ್ಥ ಆಗ್ತಿಲ್ಲ ಎಂದು ಅನೇಕರು ‘ಕನ್ನಡಪ್ರಭ‘ ಮುಂದೆ ಗೋಳು ತೋಡಿಕೊಂಡರು.
ನಮಗೂ ಮಕ್ಕಳು ಇದ್ದಾರ, ವಯಸ್ಸಿಗೆ ಬಂದವರು ಶೌಚಕ್ಕೆಂದು ಹೊರಗ ಹೋಗೋ ಅನಿವಾರ್ಯತೆ ಅದ. ಮೊದಲೇ ಮನ್ಯಾಗ ನಮಗೆ ಇರಾಕ್ಕ ಜಾಗ ಇಲ್ಲ, ಇನ್ನೆಲ್ಲಿ ನಾವು ವೈಯಕ್ತಿಕ ಶೌಚಗೃಹ ಕಟ್ಟಿಸ್ಕೊಳ್ಳೋದು. ಇನ್ನಾದರೂ ಕೋರಳ್ಳಿಗೆ ಹೆಣ್ಮಕ್ಕಳ ಬಳಕೆಗೆ ಪ್ರತ್ಯೇಕ ಶೌಚಾಲಯ ಕಟ್ಟಿಕೊಡ್ಲಿ ಎಂದು ಬೇಡಿಕೆ ಮಂಡಿಸಿದರು.
ಮದ್ಯದ ಅಮಲಲ್ಲಿ ಇಲ್ಲಿ ಕುಳಿತು ಹರಟೆ ಹೊಡೆಯುವ ಅನೇಕರು ಹೆಂಗಸರು ಕೈಯಲ್ಲಿ ನೀರು ತುಂಬಿದ ತರಗಿ ಹಿಡ್ಕೊಂಡು ಹೊಂಟರೆಂದರೆ ಸಾಕು, ಏನಾದರೂ ಮಾತನಾಡುತ್ತ ಅವರನ್ನು ಗೋಳು ಹೊಯ್ದುಕೊಳ್ಳೋದು ನಿತ್ಯದ ನೋಟವಾಗಿದೆ. ತಾವು ನಿತ್ಯ ಅನುಭವಿಸುವ ಇಂತಹ ಕಿರಿಕ್‌ಗಳನ್ನೆಲ್ಲ ಕಣ್ಣಿಗೆ ಕಟ್ಟುವಂತೆ ವಿವರಿಸಿದ ಕಮಲವ್ವ, ‘ಕುಡ್ದು ನಿಶಾದಾಗ ಇದ್ದವರ ಬಾಯಿಗೆ ಹತ್ತೋದಿಲ್ರಿ, ನಮ್ಮಷ್ಟಕ್ಕ ನಾವು ಹೋಗಿ ಬರ್ತೀವಿ’ ಎಂದರು.
‘ಹೆಂಗಸರು ಶೌಚಕ್ಕೆ ಹೋಗೋ ದಾರಿಯಲ್ಲೇ ದಾರು ದುಕಾನ್ ಅದ. ಕುಡದು ನಿಶಾದಾಗೇ ಕುಂತಿರ್ತಾರ. ನಾವು ಒಬ್ಬಬ್ಬರೇ ಶೌಚಕ್ಕೆ ಹೋಗೋದನ್ನೇ ನೋಡುತ್ತಾ, ಬೀದಿ ಕಾಮಣ್ಣರಂತೆ ಕಾಡುವುದನ್ನ ಮಾಡ್ತಾರೆ. ಅತ್ಯಾಚಾರಕ್ಕೊಳಗಾದ ಹುಡ್ಗಿ ವಿಚಾರದಾಗೂ ಇದೇ ಆಗಿರೋದು. ಪೊಲೀಸರೇ ತನಿಖೆಯಿಂದ ಹೊರಗ ತಗದಾರಲ್ಲ ವಿಚಾರ. ಬಯಲಿಗೆ ಬೈಲ್ಕಡಿ ಹೋಗೋದ್ರಿಂದ್ಲೇ ಇಂತಹ ಅನಾಹುತಕ್ಕೆ ಹೆಂಗಸರು ತುತ್ತಾಗೋಂದ್ರ ನಮ್ಮ ಮುಂದಿನ ಗತಿ ಏನು? ಅನ್ನೋದು ಊಹಿಸಲಿಕ್ಕೂ ಆಗ್ತಿಲ್ಲ’ ಎಂದು ಅನೇಕರು ಆತಂಕ ಹೊರಹಾಕಿದರು.
12 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ, ಆರೋಪಿ ವಿರುದ್ಧ ಕೇಸ್ ದಾಖಲು
ಗ್ರಾಪಂ ಬೇಜವಾಬ್ದಾರಿತನಕ್ಕೆ ಕನ್ನಡಿ:
ಶಾಸಕರ ನಿಧಿಯಲ್ಲಿ ಇಲ್ಲಿ ಶೌಚಾಲಯ ಕಟ್ಟಲಾಗಿದ್ದರೂ ಅದರ ನಿರ್ವಹಣೆ ಮಾಡುವಲ್ಲಿ ಸ್ಥಳೀಯ ಪಂಚಾಯ್ತಿ ಎಡವಿದೆ. ಹೀಗಾಗಿ, ಶೌಚಗೃಹ ಬಳಕೆಯಾಗದೆ ಹಾಗೇ ಬಿದ್ದಿದೆ. ಸ್ಥಳೀಯರು ಶೌಚಗೃಹಕ್ಕೆ ಆಗ್ರಹಿಸಿದ್ದರೂ ಪಂಚಾಯ್ತಿಯವರ ಬೇಜವಾಬ್ದಾರಿತನದಿಂದಾಗಿ ಇಂದಿಗೂ ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿರೋದು ದುರಂತ.