ಬೆಂಗಳೂರು (ನ.4) ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು ಮಹತ್ವದ ತೀರ್ಪು ನೀಡಿರುವ ಹೈಕೋರ್ಟ್, ಚಿಕ್ಕಮಗಳೂರು ಕ್ಷೇತ್ರದ ಮತದಾರರ ಪಟ್ಟಿಗೆ ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ ಮತ್ತು ಕೊಪ್ಪ ಪಟ್ಟಣ ಪಂಚಾಯ್ತಿಗಳ 12 ನಾಮ ನಿರ್ದೇಶಿತ ಸದಸ್ಯರನ್ನು ಸೇರಿಸಿದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಮತದಾರರ ಪಟ್ಟಿನೋಂದಣಾಧಿಕಾರಿಯ ಕ್ರಮವನ್ನು ರದ್ದುಪಡಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದ ಬಿಜೆಪಿಯ ಎಂ.ಕೆ.ಪ್ರಾಣೇಶ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭ್ರೂಣಲಿಂಗ ಪತ್ತೆ ಕೇಂದ್ರಗಳ ಮೇಲೆ ದಾಳಿಗೆ ಹೈಕೋರ್ಟ್ ಆದೇಶ
ಪ್ರಾಣೇಶ್‌ಗೆ ಸಂಕಷ್ಟ?
ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ.ಪ್ರಾಣೇಶ್ ಕಾಂಗ್ರೆಸ್ಸಿನ ಗಾಯತ್ರಿ ಶಾಂತೇಗೌಡ ವಿರುದ್ಧ ಕೇವಲ 6 ಮತಗಳಿಂದ ಗೆದ್ದಿದ್ದರು. ಈಗ 12 ನಾಮನಿರ್ದೇಶಿತ ಸದಸ್ಯರ ಮತವನ್ನು ಹೈಕೋರ್ಟ್ ಅಸಿಂಧು ಎಂದು ಘೋಷಿಸಿರುವುದರಿಂದ ಅವರಿಗೆ ಸಂಕಷ್ಟಎದುರಾಗಿದೆ. ಮತ್ತೊಂದೆಡೆ, ಪ್ರಾಣೇಶ್ ಆಯ್ಕೆಯನ್ನೇ ಅಸಿಂಧು ಎಂದು ಘೋಷಿಸಲು ಕೋರಿರುವ ಅರ್ಜಿ ಹೈಕೋರ್ಟಲ್ಲಿ ವಿಚಾರಣೆ ಹಂತದಲ್ಲಿದೆ.
ಮತದಾರರ ಪಟ್ಟಿನೋಂದಣಾಧಿಕಾರಿಯ ಕ್ರಮ ಪ್ರಶ್ನಿಸಿ ಚುನಾವಣೆಯಲ್ಲಿ 6 ಮತಗಳ ಅಂತರದಲ್ಲಿ ಸೋಲುಂಡಿದ್ದ ಕಾಂಗ್ರೆಸ್ ಪಕ್ಷದ ಗಾಯತ್ರಿ ಶಾಂತೇಗೌಡ ಮತ್ತು ಇತರರು ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ನ್ಯಾಯಪೀಠ ಗುರುವಾರ ಈ ತೀರ್ಪು ನೀಡಿದೆ.
ಸಂವಿಧಾನದ ಪರಿಚ್ಛೇದ 243(6) ಮತ್ತು ಕರ್ನಾಟಕ ಮುನ್ಸಿಪಲ್ ಕಾಯ್ದೆ ಪ್ರಕಾರ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ಮುನಿಸಿಪಾಲಿಟಿ ಸಭೆಗಳಲ್ಲೂ ಸಹ ಮತದಾನ ಮಾಡುವ ಹಕ್ಕಿಲ್ಲ. ಅವರು ಸಲಹೆ-ಸೂಚನೆಗಳನ್ನು ನೀಡಬಹುದಷ್ಟೇ. ಹಾಗಾಗಿ, ವಿಧಾನಪರಿಷತ್ ಚುನಾವಣೆಯಲ್ಲೂ ಸಹ ಮತದಾನದ ಹಕ್ಕು ಇರುವುದಿಲ್ಲ ಎಂದು ನ್ಯಾಯಪೀಠ ಆದೇಶ ನೀಡಿದೆ.
ಪ್ರಕರಣದ ವಿವರ:
ಕೇಂದ್ರ ಚುನಾವಣಾ ಆಯೋಗ 2021ರ ನ.9ರಂದು ಚಿಕ್ಕಮಗಳೂರು ಸೇರಿದಂತೆ ರಾಜ್ಯದ 20 ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ 25 ಸದಸ್ಯ ಸ್ಥಾನಗಳಿಗೆ ಚುನಾವಣೆಯನ್ನು ಘೋಷಣೆ ಮಾಡಿತ್ತು. ಚಿಕ್ಕಮಗಳೂರು ಕ್ಷೇತ್ರದ ಚುನಾವಣೆಯಲ್ಲಿ ಎಂ.ಕೆ.ಪ್ರಾಣೇಶ್ 1,182 ಮತಗಳನ್ನು ಮತ್ತು ಗಾಯತ್ರಿ ಶಾಂತೇಗೌಡ ಅವರು 1176 ಮತಗಳನ್ನು ಪಡೆದಿದ್ದರು. ಎಂ.ಕೆ.ಪ್ರಾಣೇಶ್ 6 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
11 ಲಕ್ಷಕ್ಕೆ ಒಪ್ಪದ ವಿಮಾ ಕಂಪನಿ ಈಗ 44 ಲಕ್ಷ ಕೊಡಬೇಕು: ಹೈಕೋರ್ಟ್ ಆದೇಶ
ಇದರಿಂದ ಹೈಕೋರ್ಚ್ ಮೆಟ್ಟಿಲೇರಿದ್ದ ಅರ್ಜಿದಾರರು, ಮೂಡಿಗೆರೆ, ಎನ್.ಆರ್.ಪುರ. ಶೃಂಗೇರಿ ಮತ್ತು ಕೊಪ್ಪ ಟೌನ್ ಪಂಚಾಯ್ತಿಗಳ 12 ನಾಮನಿರ್ದೇಶಿತ ಸದಸ್ಯರ ಹೆಸರನ್ನು ಮತದಾರರರ ಪಟ್ಟಿಗೆ ಸೇರಿಸಿರುವ ಕ್ರಮ ಕಾನೂನುಬಾಹಿರವಾಗಿದೆ. ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಿರುವುದರಿಂದ ಪ್ರಾಣೇಶ್ ಅವರು ಗೆಲುವು ಸಾಧಿಸಿದ್ದಾರೆ. ಆದರೆ, ಸಂವಿಧಾನದ ನಿಯಮಗಳಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ. ಆದ್ದರಿಂದ ಮತದಾರರ ಪಟ್ಟಿಯಲ್ಲಿ ನಾಮನಿರ್ದೇಶಿತ ಸದಸ್ಯರ ಹೆಸರನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.