ಚಿಕ್ಕಬಳ್ಳಾಪುರ (ನ.22): ನಗರ ಅಥವಾ ಗ್ರಾಮೀಣ ಪ್ರದೇಶದಲ್ಲಿ (rural) ಯಾರೇ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರೂ ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ (Sudhakar) ತಿಳಿಸಿದರು.
ಮಳೆಯಿಂದ ಹಾನಿಯಾಗಿರುವ ಜಿಲ್ಲಾ ಕೇಂದ್ರದ ಬಿಬಿ ರಸ್ತೆಗೆ ಶನಿವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾಲುವೆಗಳನ್ನು ಕೆಲವರು ಒತ್ತುವರಿ ಮಾಡಿಕೊಂಡು ಮನೆ, ಲೇಔಟ್ ಮಾಡಿದರೆ, ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಸಂದರ್ಭದಲ್ಲಿ ವ್ಯಥೆ ಪಡಬೇಕಾಗುತ್ತದೆಯೆಂದರು.
ಹಾನಿಗೊಂಡ ಮನೆಗೆ 5 ಲಕ್ಷ ಪರಿಹಾರ
ಮಳೆಯಿಂದ ಸಾಕಷ್ಟು ಬಡವರ ಮನೆಗಳು (house) ಹಾಳಾಗಿದೆ. ಸುಮಾರು 436 ಮನೆಗೆ ಹಾನಿಯಾಗಿದೆ. ಸಂಪೂರ್ಣ ಹಾನಿಯಾದ ಮನೆಗೆ ರಾಜ್ಯ ಸರ್ಕಾರದಿಂದ 5ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಪುನರ್ವಸತಿ ಕಲ್ಪಿಸಲಾಗುತ್ತದೆ. ಇನ್ನೂ ಎರಡು, ಮೂರು ದಿನ ಮಳೆ ಬರುವ ಸಂಭವ ಇದೆ ಎಂದು ಹವಾಮಾನ ಇಲಾಖೆಯವರು (Weather Department) ಮಾಹಿತಿ ನೀಡಿದ್ದಾರೆ. ಹಾಗಾಗಿ ಮತ್ತಷ್ಟುಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.
ರಾಜಕಾಲುವೆಗಳ ಒತ್ತುವರಿ ಮಾಡಿರುವೆಡೆ ಹಾಗೂ ರಾಜಕಾಲುವೆ ಸರಿಯಾಗಿ ನಿರ್ಮಾಣ ಮಾಡದ ಕಡೆ ಗುರುತಿಸಬೇಕು. ಕೇವಲ ಮಳೆ ಬರುವ ಸಂದರ್ಭದಲ್ಲಿ ತಗ್ಗಿರುವಂತ, ಮುಳುಗಡೆ ಪ್ರದೇಶದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರೆ ಬಿಡಬೇಕು. ರಾಜಕಾಲುವೆ ಗಮನಿಸದೆ ಮನೆಗಳನ್ನು ನಿರ್ಮಿಸಿಕೊಳ್ಳುವುದು, ಲೇಔಟ್ ನಿರ್ಮಾಣ ಮಾಡುವುದು, ಬಳಿಕ ಸರ್ಕಾರ, ಚುನಾಯಿತ ಜನಪ್ರತಿನಿಧಿಗಳನ್ನು ನಿಂಧನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದರು. ಮಳೆಯಿಂದಾದ ಹಾನಿಗೆ ಸಂಬಂಧಿಸಿದಂತೆ ವರದಿಯನ್ನು ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಈಗಾಗಲೇ 31 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಆರೋಗ್ಯ ಇಲಾಖೆಯಿಂದ ಅಗತ್ಯ ಔಷಧವನ್ನು (Medicine) ಸಾಂಕ್ರಾಮಿಕ ರೋಗ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಔಷಧಗಳನ್ನು ಆರೋಗ್ಯ ಇಲಾಖೆಯಿಂದ ಕಾಳಜಿ ಕೇಂದ್ರಗಳಿಗೆ ಸರಬರಾಜು ಮಾಡಲಾಗಿದೆ ಎಂದರು.
ಅವಘಡ ನಿರ್ವಹಣೆಗೆ ತಂಡ
ಜಿಲ್ಲೆಯಲ್ಲಿ ಮಳೆ ಹಾನಿ ಬಗ್ಗೆ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಗ್ರೂಪ್ ಮಾಡಲಾಗಿದೆ. ಅಧಿಕಾರಿಗಳು ಯಾವುದೇ ಅವಘಡವಾದರೂ, ಕೂಡಲೇ ಸ್ಪಂದಿಸಲಿದ್ದಾರೆ. ಇದುವರೆಗೂ ಮೂರು ವ್ಯಕ್ತಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸೇತುವೆಗಳ ಬಳಿ ಸಂಚಾರ ನಿರ್ಬಂಧಕ್ಕೆ ಕ್ರಮ ವಹಿಸಲಾಗಿದೆ. ಅತಿ ವೃಷ್ಟಿಯಿಂದ ಎದುರಾಗಬಹುದಾದ ಸಮಸ್ಯೆ ಎದುರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನ ಸಹ ಸಹಕಾರ ನೀಡಬೇಕಿದೆ. ಜನರಿಗೆ ಅರಿವು ಮೂಡಿಸಲು ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಈ ಮಳೆಯಿಂದ ಊಂಟಾಗುವ ಅನಾಹುತ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು. ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ನಗರಸಭಾ ಸದಸ್ಯರು ಇದ್ದರು. ಇದೇ ವೇಳೆ ಜಿಲ್ಲೆಯ ಶಿಡ್ಲಘಟ್ಟಪಟ್ಟಣದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಮಳೆಯಿಂದ ಆಗಿರುವ ಹಾನಿಯನ್ನು ಖದ್ದು ಪರಿಶೀಲಿಸಿದರು.
ಅತ್ಯಧಿಕ ಮನೆ ಕುಸಿತ :
ನವೆಂಬರ್‌ನಲ್ಲಿ ವಾಡಿಕೆ ಮಳೆಗಿಂತ ಶೇ.10 ಪಟ್ಟು ಹೆಚ್ಚಿಗೆ ಮಳೆಯಾಗಿದೆ, ಜಿಲ್ಲೆಯಲ್ಲಿ ಹಲವು ಕೆರೆ ಕುಂಟೆ ಕಾಲುವೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ 157 ಗ್ರಾಮ ಪಂಚಾಯಿತಿಗಳ ಪೈಕಿ 80 ಗ್ರಾಮ ಪಂಚಾಯಿತಿಗಳಲ್ಲಿ ನೆನ್ನೆ ಒಂದೇ ದಿನ ಸುಮಾರು 56 ಮಿ.ಮೀ ಮಳೆಯಾಗಿದೆ. ಈವರೆಗೆ ಬಾರೀ ಮಳೆಯಿಂದಾಗಿ (rain) ಜಿಲ್ಲೆಯಾದ್ಯಂತ 28 ಮನೆಗಳು ಬಿದ್ದು ಹೋಗಿ ಸಂಪೂರ್ಣವಾಗಿ ಹಾನಿಯಾಗಿವೆ. 360 ಮನೆಗಳು ಭಾಗಶಃ ಹಾನಿಯಾಗಿವೆ. ಇದಲ್ಲದೇ 24 ಸೇತುವೆಗಳು ಹಾನಿಯಾಗಿವೆ.
ಇದು ಜಿಲ್ಲಾದ್ಯಂತ ಸತತ ಒಂದು ವಾರದಿಂದ ತೀವ್ರ ಮಳೆಯಿಂದಾಗಿ ಸದ್ಯಕ್ಕೆ ಜಿಲ್ಲೆಯಲ್ಲಿ ಜನ ವಾಸ ಇರುವ ಮನೆಗಳು (house), ಸಾರ್ವಜನಿಕರು ಓಡಾಡುವ ಸೇತುವೆ, ಮನೆಗಳಿಗೆ ಹಾಗಿರುವ ಹಾನಿಯ ಲೆಕ್ಕಾಚಾರದ ಕುರಿತು ಜಿಲ್ಲಾಧಿಕಾರಿ ಶುಕ್ರವಾರ ನೀಡಿರುವ ಅಂಕಿ, ಅಂಶ ಇದು. ಜನ ಜೀವನದ ಸುರಕ್ಷತಾ ದೃಷ್ಟಿಯಿಂದ ಜಿಲ್ಲೆಯಲ್ಲಿ 31 ಕಾಳಜಿ ಕೇಂದ್ರಗಳನ್ನು ಈಗಾಗಲೇ ಸ್ಥಾಪಿಸಲಾಗಿದ್ದು ಈ ಪೈಕಿ ಗೌರಿಬಿದನೂರಿನ 5 ಕಾಳಜಿ ಕೇಂದ್ರಗಳಲ್ಲಿ 1015 ಜನರಿಗೆ ಆಶ್ರಯ ನೀಡಲಾಗಿದೆ ಎಂದರು.
ಉತ್ತರ ಪಿನಾಕಿನಿ ಹುಕ್ಕಿ ಹರಿಯುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮುಂದಾಗುವ ಅವಗಡಗಳನ್ನು ತಪ್ಪಿಸಲು ಉತ್ತರ ಪಿನಾಕಿನಿ ನದಿ ಪಾತ್ರದ 200 ಕುಟುಂಬಗಳ 1015 ಜನರನ್ನು 5 ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿ ಊಟ, ವಸತಿ ಸಹಿತ ಕನಿಷ್ಠ ಮೂಲ ಸೌಕರ್ಯಗಳೊಂದಿಗೆ ಆಶ್ರಯ ನೀಡಲಾಗಿದೆ ಅಲ್ಲದೆ ಅಪಾಯದ ಹಂಚಿನಲ್ಲಿರುವ ಮನೆಗಳಲ್ಲಿರುವವರನ್ನು ಗುರ್ತಿಸಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಸಿಬ್ಬಂದಿ ಕಾರ್ಯ ಪ್ರವೃತ್ತ ರಾಗಿದ್ದಾರೆ. ಬೆಳೆ ನಷ್ಟದ ಅಂದಾಜಿನ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಆದಷ್ಟುಶೀಘ್ರ ಸಲ್ಲಿಸಿ ಪರಿಹಾರೋಪಾಯಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ (Chikkaballapura) ನಗರಸಭಾ ಅಧ್ಯಕ್ಷ ಆನಂದರೆಡ್ಡಿ ಬಾಬು, ಪೌರಾಯುಕ್ತ ಮಹಂತೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.