ಸರ್ಕಾರ ಈ ಹಿಂದೆ ಜಲಾಶಯದಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿರುವ ಮಾತನ್ನು ಉಳಿಸಿಕೊಳ್ಳಬೇಕಿದೆ. ಕಾವೇರಿ ನೀರು ಪ್ರಾಧಿಕಾರ ಹೇಳಿದಂತೆ ತಮಿಳುನಾಡಿಗೆ ನೀರು ಹರಿಸಿ, ಸರ್ಕಾರ ತಮಿಳುನಾಡನ್ನು ಓಲೈಸಿಕೊಳ್ಳಲು ಮುಂದಾಗುತ್ತಿದೆ ಎಂದು ಆರೋಪಿಸಿದ ಕರ್ನಾಟಕ ರೈತ ಸಂಘ, ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು
ಶ್ರೀರಂಗಪಟ್ಟಣ(ಸೆ.20): ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿ ಮೂಲಕ ತಮಿಳುನಾಡಿಗೆ ನೀರು ಬಿಟ್ಟ ಸರ್ಕಾರದ ಕ್ರಮ ಖಂಡಿಸಿ ಪಟ್ಟಣದಲ್ಲಿ ಕರ್ನಾಟಕ ರೈತ ಸಂಘ, ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಪಟ್ಟಣದ ಕುವೆಂಪು ವೃತ್ತದ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತತ್ವದಲ್ಲಿ ನೂರಕ್ಕೂ ಹೆಚ್ಚು ಮಂದಿ ಸಂಘಟಕರು ಸೇರಿ ಸರ್ಕಾರ ಹಾಗೂ ಕಾವೇರಿ ಪ್ರಾಧಿಕಾರದ ವಿರುದ್ಧ ಘೋಷಣೆಗಳ ಕೂಗಿದರು.
undefined
ಕಾವೇರಿ ನೀರು ನಿಗಮದ ಅಧಿಕಾರಿಗಳಿಗೆ ಸಚಿವರ ಎದುರೇ ಶಾಸಕ ನರೇಂದ್ರಸ್ವಾಮಿ ಹಿಗ್ಗಾಮುಗ್ಗಾ ತರಾಟೆ!
ಸರ್ಕಾರ ಈ ಹಿಂದೆ ಜಲಾಶಯದಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿರುವ ಮಾತನ್ನು ಉಳಿಸಿಕೊಳ್ಳಬೇಕಿದೆ. ಕಾವೇರಿ ನೀರು ಪ್ರಾಧಿಕಾರ ಹೇಳಿದಂತೆ ತಮಿಳುನಾಡಿಗೆ ನೀರು ಹರಿಸಿ, ಸರ್ಕಾರ ತಮಿಳುನಾಡನ್ನು ಓಲೈಸಿಕೊಳ್ಳಲು ಮುಂದಾಗುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಜಲಾಶಯದಲ್ಲಿ ಕುಡಿಯುವ ನೀರು ಸಹ ಶೇಖರಣೆಯಾಗದಿದ್ದರೂ 5೫ ಸಾವಿರ ಕ್ಯುಸೆಕ್ ನೀರು ಬಿಡುವುದು ಯಾವ ನ್ಯಾಯ. ಕೂಡಲೇ ನೀರು ನಿಲ್ಲಿಸಿ ಇಲ್ಲಿನ ರೈತರು, ಜನರ ಹಿತ ಕಾಪಾಡಬೇಕು. ಇಲ್ಲದಿದ್ದರೆ ಮಂಡ್ಯ ಜಿಲ್ಲೆ ಅಲ್ಲದೇ, ಪ್ರತಿ ಜಿಲ್ಲೆಗಳ ಹೆದ್ದಾರಿ ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಮಾತನಾಡಿ, ರೈತರ ಹೋರಾಟಕ್ಕೆ ರಾಜ್ಯದಲ್ಲಿ ಬೆಲೆ ಇಲ್ಲದಂತಾಗಿದೆ. ಸರ್ಕಾರಗಳು ತಾವು ಉಳಿದುಕೊಳ್ಳಲು ರಾಜ್ಯದ ಜನರನ್ನು ಬಲಿಕೊಡುತ್ತಿವೆ. ಅಲ್ಲದೇ, ರಾಜ್ಯ ಹಾಗೂ ಜಿಲ್ಲೆಯ ಸಂಸದರೂ ಸಹ ನೀರಿನ ವಿಚಾರದಲ್ಲಿ ಮೌನ ವಹಿಸಿ ಮತ ಹಾಕಿದ ಮತದಾರರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರ ಕೂಡಲೇ ಕಾವೇರಿ ಪ್ರಾಧಿಕಾರದ ತೀರ್ಪನ್ನು ತಿರಸ್ಕರಿಸಿ ಕೆಆರ್‌ಎಸ್ ಜಲಾಶಯವನ್ನು ಕಾವೇರಿ ಪ್ರಾಧಿಕಾರದಿಂದ ಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಿ ರಾಜ್ಯದ ರೈತರು, ಜನರೊಂದಿಗೆ ನಿಲ್ಲಬೇಕು ಎಂದು ಆಗ್ರಹಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಪ್ರಸನ್ನ, ತಾಲೂಕು ಅಧ್ಯಕ್ಷ ಕೃಷ್ಣೇಗೌಡ, ದೊಡ್ಡಪಾಳ್ಯ ಜಯರಾಮು, ಪಾಂಡು, ಶಂಕರೇಗೌಡ, ಮಂಡ್ಯ ರಕ್ಷಣಾ ವೇದಿಕೆ ಶಂಕರ್ ಬಾಬು, ರಕ್ಷಣಾ ವೇದಿಕೆ ಚಂದಗಾಲು ಶಂಕರ್, ಉಗಮ ಚೇತನ ಟ್ರಸ್ಟ್ ಪ್ರಿಯಾ ರಮೇಶ್, ದಲಿತ ಸಂಘಟನೆಯ ರವಿಚಂದ್ರ, ಬಾಲಣ್ಣ, ಪುರುಷೋತ್ತಮ, ಮಂಜುನಾಥ್ ಸೇರಿದಂತೆ ಇತರ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.