
ಕಲಬುರಗಿ(ಸೆ.19): ರಾಜ್ಯದ ಬರ ಹಾಗೂ ನೀರಾವರಿ ಯೋಜನೆಗಳ ವಿಚಾರದಲ್ಲಿ ವಿಸ್ತೃತ ಮಾತುಕತೆಗೆ ತಾವು ಪತ್ರ ಬರೆದು ಸಮಯ ಕೋರಿದ್ದರೂ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಮಯ ನೀಡುತ್ತಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಬೇಸರ ಹೊರಹಾಕಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಮ್ಮ ಪತ್ರಕ್ಕೆ ತಿಂಗಳಾದರೂ ಪ್ರಧಾನಿ ಮೋದಿ ಸ್ಪಂದಿಸುತ್ತಿಲ್ಲ ಎಂದರು. ಕರ್ನಾಟಕವನ್ನು ಈ ಬಾರಿ ಭೀಕರ ಬರಗಾಲ ಕಾಡುತ್ತಿರುವ ಹಿನ್ನೆಲೆಯಲ್ಲಿ ರೈತರು, ಕಾರ್ಮಿಕರಾದಿಯಾಗಿ ಎಲ್ಲರ ನೆರವಿಗೆ ಧಾವಿಸಬೇಕಿದೆ. ಇದಕ್ಕಾಗಿ ಹೆಚ್ಚಿನ ಅನುದಾನ, ನೆರವು ಕೋರಲೆಂದು ಹಾಗೂ ಯುಕೆಪಿ, ಕಾವೇರಿ, ಮಹದಾಯಿ, ಮೇಕೆದಾಟುವಿನಂಥ ರಾಜ್ಯದ ಮಹತ್ವದ ನೀರಾವರಿ ಯೋಜನೆಗಳ ಕುರಿತ ತಕರಾರುಗಳ ಪರಿಹಾರಕ್ಕಾಗಿ ಕೇಂದ್ರದ ನೆರವು ಕೋರುವುದು ಪ್ರಧಾನಿ ಭೇಟಿಯ ಹಿಂದಿನ ಉದ್ದೇಶವಾಗಿದೆ ಎಂದರು.
ಕಲ್ಯಾಣ ರಾಜ್ಯ ಸಂಕಲ್ಪ ಸಾಕಾರಕ್ಕೆ ಬದ್ಧ: ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಬರಗಾಲವಿದ್ದರೂ ಕಾಂಗ್ರೆಸ್ ಆಡಳಿತ ನಿದ್ರೆಯಲ್ಲಿದೆ ಎಂಬ ಯಡಿಯೂರಪ್ಪನವರ ಟೀಕೆಗೆ ಇದೇ ವೇಳೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದರೂ ಅವರು ಯಾರೂ ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮಾತುಕತೆ ನಡೆಸಲು ಪ್ರಧಾನಿ ಮೋದಿಯವರ ಜತೆಗೆ ಸಮಯ ನಿಗದಿಗೂ ಆಸಕ್ತಿ ತೋರುತ್ತಿಲ್ಲ. ರಾಜಕೀಯವಾಗಿ ಟೀಕೆ ಮಾಡುವುದನ್ನು ಬಿಟ್ಟು ಮೊದಲು ಅವರು ಪ್ರಧಾನಿ ಭೇಟಿಗೆ ಸಮಯ ನಿಗದಿ ಮಾಡಲಿ ಎಂದರು.
ಕಾವೇರಿ ವಿಚಾರ ಸುಪ್ರೀಂನಲ್ಲಿ ಪ್ರಶ್ನಿಸ್ತೇವೆ-ಸಿಎಂ
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ನೀರಿಗಾಗಿ ಹಾಹಾಕಾರ ಎದ್ದಿರುವಾಗ ಈ ಹಂತದಲ್ಲಿ ಕಾವೇರಿ ನೀರನ್ನು ನಿತ್ಯ 5 ಸಾವಿರ ಕ್ಯುಸೆಕ್‌ನಂತೆ ತಮಿಳುನಾಡಿಗೆ ನೀರು ಹರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಸರಿಯಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಸಿದ್ದರಾಮಯ್ಯ ಹೇಳಿದರು.
ತಮಿಳುನಾಡಿಗೆ ಸಾಮಾನ್ಯ ಸಂದರ್ಭಗಳಲ್ಲಿ 177. 25 ಟಿಎಂಸಿ ನೀರು ಹರಿಸಬೇಕು. ಆ ಲೆಕ್ಕಾಚಾರದಂತೆ ಪ್ರಸಕ್ತ 99 ಟಿಎಂಸಿ ನೀರು ಬಿಡಬೇಕಿತ್ತು. ಇಲ್ಲಿಯವರೆಗೂ 37.7 ಟಿಎಂಸಿ ನೀರು ಬಿಟ್ಟಿದ್ದೇವೆ. ನಮಗೂ ನಮ್ಮ ರೈತರ ಹಿತಾಸಕ್ತಿ ಮುಖ್ಯತಾನೆ? ಹೀಗಾಗಿ ನಿತ್ಯ 5 ಸಾವಿರ ಕ್ಯುಸೆಕ್ ನೀರು ಹರಿಬಿಡೋದು ಹೇಗೆ ಸಾಧ್ಯ? ಎಂದರು.