Government of Karnataka: ಕೋವಿಡ್‌ ಸಂಕಷ್ಟದಲ್ಲೂ 31 ಅಪರ ಜಿಲ್ಲಾಧಿಕಾರಿಗಳಿಗೆ ಹೊಸ ಕಾರು!

By Kannadaprabha News  |  First Published Feb 19, 2022, 9:18 AM IST

*   279 ಲಕ್ಷ ವ್ಯಯಿಸಲು ತೀರ್ಮಾನ
*   ಆರ್ಥಿಕ ಮುಗ್ಗಟ್ಟಿನಲ್ಲೂ ಕೋಟ್ಯಂತರ ರು. ವೆಚ್ಚಕ್ಕೆ ವ್ಯಾಪಕ ಟೀಕೆ
*   ಸಂಕಷ್ಟದ ಸಮಯದಲ್ಲಿ ಕಾರು ಖರೀದಿಗೆ ಮುಂದಾಗಿರುವುದು ಮಾತ್ರ ವಿಪರ್ಯಾಸ
 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಫೆ.19):  ಸತತ 2 ವರ್ಷಗಳ ಕಾಲ ಕೋವಿಡ್‌(Covid-19) ಸಂಕಷ್ಟದಿಂದ ಆರ್ಥಿಕತೆ ನಲುಗಿದೆ. ಆರ್ಥಿಕ ಸಮಸ್ಯೆಯಿಂದ ಅನೇಕ ಯೋಜನೆಗಳನ್ನು ಕೈಬಿಡಲಾಗಿದೆ. ಖರ್ಚು ಕಡಿಮೆ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಕ್ರಮ ಕೈಗೊಳ್ಳವುದು ಅನಿವಾರ್ಯ ಎಂದಿದ್ದಾರೆ. ಈ ನಡುವೆಯೂ ಕಂದಾಯ ಇಲಾಖೆ ತನ್ನ ಅಧಿಕಾರಿಗಳಿಗೆ ಹೊಸ ಕಾರು ಖರೀದಿಗೆ ಮುಂದಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

Tap to resize

Latest Videos

ರಾಜ್ಯದ(Karnataka) 31 ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಿಗೆ 31 ಕಾರು(Car) ಖರೀದಿಗೆ ಮುಂದಾಗಿದೆ. ಈಗಿರುವ ಬಹುತೇಕ ವಾಹನಗಳು ಸುಸ್ಥಿತಿಯಲ್ಲಿವೆ. ಆದರೂ ಗರಿಷ್ಠ 9 ಲಕ್ಷ ಮೀರದಂತೆ ಕಡಿಮೆ ವೆಚ್ಚದ, ಕಡಿಮೆ ಇಂಧನ ಬಳಕೆಯಾಗುವ ಕಾರು ಖರೀದಿ ಮಾಡಿ ಎನ್ನುವ ಷರತ್ತಿನೊಂದಿಗೆ ಕಾರು ಖರೀದಿಗೆ ಸರ್ಕಾರ(Government of Karnataka) ಅಸ್ತು ಎಂದಿದೆ. ಇದಕ್ಕಾಗಿ ಬರೋಬ್ಬರಿ 279 ಲಕ್ಷ ವ್ಯಯ ಮಾಡಲಾಗುತ್ತಿದೆ.
ಈಗಾಗಲೇ ಅಪರ ಜಿಲ್ಲಾಧಿಕಾರಿಗಳಿಗೆ ವಾಹನ ಇದ್ದೇ ಇವೆ. ಒಂದಿಷ್ಟು ಸಣ್ಣಪುಟ್ಟ ರಿಪೇರಿ ಹೊರತಾಗಿ ಸಮಸ್ಯೆ ಇಲ್ಲದಂತೆ ಓಡಾಡುತ್ತಿದ್ದಾರೆ. ಆದರೂ ಈಗ 31 ಅಪರ ಜಿಲ್ಲಾಧಿಕಾರಿಗಳಿಗೂ ಕಾರು ಖರೀದಿಗೆ ಸಂಕಷ್ಟದ ಸಮಯದಲ್ಲಿ ಮುಂದಾಗಿರುವುದು ಮಾತ್ರ ವಿಪರ್ಯಾಸವೇ ಸರಿ.

ಕೋವಿಡ್‌ ಸಂಕಷ್ಟ ನಿರ್ವಹಣೆಗೆ ನೋಟು ಮುದ್ರಣ ಇಲ್ಲ: ಸಚಿವೆ ನಿರ್ಮಲಾ ಸ್ಪಷ್ಟನೆ!

ಆದೇಶದಲ್ಲಿ ಏನಿದೆ?:

ಕಂದಾಯ ಇಲಾಖೆಯ(Department of Revenue) ಅಧೀನ ಕಾರ್ಯದರ್ಶಿ ವಿಮಲಮ್ಮ ಸಿ. ಅವರು ಫೆ. 16ರಂದು ಈ ಆದೇಶ ಮಾಡಿದ್ದಾರೆ. ರಾಜ್ಯದ 31 ಜಿಲ್ಲೆಗಳಲ್ಲಿ 31 ಅಪರ ಜಿಲ್ಲಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಇತರೆ ಇಲಾಖೆಯ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ಅದರಲ್ಲೂ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ವಿಕೋಪ ಪರಿಸ್ಥಿತಿಯಂಥ ಸಂದರ್ಭದಲ್ಲಿ ಸೂಕ್ಷ್ಮವಾದ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ರಾಜ್ಯದ 31 ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಿಗೆ ಹೊಸ ಕಾರು ಖರೀದಿ ಮಾಡುವ ಅಗತ್ಯವಿದೆ.

ರಾಜ್ಯದ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಪರ ಜಿಲ್ಲಾಧಿಕಾರಿಗಳಿಗೆ ಹೊಸ ಕಾರು ಖರೀದಿ ಮಾಡಲು ಅನುಮೋದನೆ ನೀಡಿ, ಪ್ರತಿ ವಾಹನಕ್ಕೆ ಗರಿಷ್ಠ .9 ಲಕ್ಷ ಮೀರದಂತೆ ಖರೀದಿಸಲು ಷರತ್ತು ವಿಧಿಸಲಾಗಿದೆ. ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯ ಬೆಂಗಳೂರು(Bengaluru) ನಗರ ಜಿಲ್ಲೆಯಲ್ಲಿ ಇಟ್ಟಿರುವ ಠೇವಣಿಯ ಮೇಲೆ ಆಕರಣೆಯಾಗಿರುವ ಬಡ್ಡಿ ಮೊತ್ತದಲ್ಲಿ 279 ಲಕ್ಷ ವ್ಯಯಿಸಲು ಅನುಮತಿ ನೀಡಲಾಗಿದೆ. ಇಂಧನ ಮಿತವ್ಯಯ ಹಾಗೂ ಕಡಿಮೆ ನಿರ್ವಹಣಾ ವೆಚ್ಚ ಇರುವ ವಾಹನ ಖರೀದಿ ಮಾಡುವಂತೆ ಸೂಚಿಸಲಾಗಿದೆ.

3-4 ತಿಂಗಳಿಂದ ಆರ್ಥಿಕ ಪರಿಸ್ಥಿತಿ ಚೇತರಿಕೆ: ಕೋವಿಡ್‌ ಸಂಕಷ್ಟದಲ್ಲೂ ಬಜೆಟ್ ಕಡಿತ ಇಲ್ಲ!

ಕೋವಿಡ್‌ ಸಂಕಷ್ಟದ ನಡುವೆಯೂ ನಿಲ್ಲದ ಖಾಸಗಿ ಶಾಲೆಗಳ ಡೊನೇಷನ್‌ ಹಾವಳಿ

ಬಳ್ಳಾರಿ:  ಕಳೆದ ವರ್ಷ ನಗರದ ಕೆಲ ಪ್ರತಿಷ್ಠಿತ ಶಾಲೆಗಳು ಡೊನೇಷನ್‌ ಕಿರುಕುಳ ಶುರು ಮಾಡಿಕೊಂಡಿದ್ದವು. ಪೂರ್ಣ ಪ್ರಮಾಣದ ಶುಲ್ಕ ಕಟ್ಟಲೇಬೇಕು ಎಂದು ಪಟ್ಟು ಹಿಡಿದು ಕುಳಿತಿವೆ. ಕೋವಿಡ್‌ ಸಂಕಷ್ಟದ ನಡುವೆಯೂ ಖಾಸಗಿ ಶಾಲೆಗಳ ಡೊನೇಷನ್‌ ಹಾವಳಿ ಮಿತಿ ಮೀರುತ್ತಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ದಟ್ಟವಾಗಿವೆ.

ಕಳೆದ ವರ್ಷ ಶೈಕ್ಷಣಿಕ ಸಾಲಿನಲ್ಲಿ ಪಡೆಯುತ್ತಿದ್ದ ಶುಲ್ಕದ ಶೇ.70ರಷ್ಟು ಮಾತ್ರ ಪಡೆಯಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಕೆಲವು ಹಣಬಾಕ ಖಾಸಗಿ ಶಾಲೆಗಳು ಸರ್ಕಾರದ ಆದೇಶಕ್ಕೆ ಬೆಲೆ ನೀಡದೆ, ಪೂರ್ಣ ಪ್ರಮಾಣದ ಶುಲ್ಕ ಪಾವತಿಗೆ ಪೋಷಕರ ಮೇಲೆ ಒತ್ತಡ ಹೇರುತ್ತಿವೆ. ಡೊನೇಷನ್‌, ಶುಲ್ಕ ಪಾವತಿಸದಿದ್ದರೆ ಆನ್‌ಲೈನ್‌ ಕ್ಲಾಸ್‌ಗಳಿಗೆ ಅನುಮತಿ ನೀಡುವುದಿಲ್ಲ ಎಂಬ ಪರೋಕ್ಷ ಬೆದರಿಕೆ ಹಾಕುತ್ತಿವೆ. ಕೋವಿಡ್‌ನಿಂದ ತೀವ್ರ ಸಮಸ್ಯೆಯಲ್ಲಿದ್ದೇವೆ. ಹೀಗಾಗಿ ಸದ್ಯ ಅರ್ಧ ಶುಲ್ಕ ಕಟ್ಟುತ್ತೇವೆ. ಉಳಿದ ಶುಲ್ಕವನ್ನು ಎರಡು ಕಂತುಗಳಲ್ಲಿ ನೀಡುತ್ತೇವೆ ಎಂದು ಪೋಷಕರು ಬೇಡಿಕೊಂಡರೂ ಕೆಲ ಪ್ರತಿಷ್ಠಿತ ಶಾಲೆಗಳ ಮಾಲೀಕರು ಪೋಷಕರ ಮನವಿ ತಿರಸ್ಕರಿಸಿ, ನಿಮ್ಮ ಮಕ್ಕಳ ಭವಿಷ್ಯಕ್ಕೆ ಸಾಲ ಮಾಡಿಯಾದರೂ ಶುಲ್ಕ ಕಟ್ಟಿಎಂದು ತಾಕೀತು ಮಾಡುತ್ತಿವೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಆದರೆ, ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಬಳಿ ಯಾವೊಬ್ಬ ಪೋಷಕರೂ ದೂರು ನೀಡುವ ಧೈರ್ಯ ಮಾಡುತ್ತಿಲ್ಲ. ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಸಮಸ್ಯೆಯಾಗಬಹುದು ಎಂಬ ಆತಂಕದಿಂದ ದುಬಾರಿ ಬಡ್ಡಿಗೆ ಸಾಲ ಮಾಡಿ ಶುಲ್ಕ ಕಟ್ಟಲು ಮುಂದಾಗಿವೆ ಎಂದು ತಿಳಿದು ಬಂದಿತ್ತು.
 

click me!