PSI Recruitment Scam: ಸದನದಲ್ಲಿ ಸುಳ್ಳು ಉತ್ತರ ನೀಡಿತೇ ಸರ್ಕಾರ..?

By Kannadaprabha News  |  First Published Feb 19, 2022, 8:51 AM IST

*  ಅಕ್ರಮದ ಆರೋಪ ಬಂದಿಲ್ಲವೆಂದು ಉತ್ತರಿಸಿದ ಗೃಹ ಇಲಾಖೆ 
*  ಎಂಎಲ್ಸಿ ಅರವಿಂದ ಅರಳಿ ಪ್ರಶ್ನೆಗೆ ಸುಳ್ಳು ಉತ್ತರ ?
*  ಪಿಎಸೈ ಪರೀಕ್ಷೆ ಅಕ್ರಮ ಆರೋಪ 
 


ಆನಂದ್ ಎಂ. ಸೌದಿ

ಯಾದಗಿರಿ(ಫೆ.19): ಪಿಎಸ್‌ಐ(PSI) ಅಕ್ರಮ ಪರೀಕ್ಷೆಗೆ ಸಂಬಂಧಿಸಿದಂತೆ ಆರೋಪಗಳ ಬಗ್ಗೆ ‘ತಣ್ಣಗೆ’ ಪ್ರತಿಕ್ರಿಯಿಸಿರುವ ಗೃಹ ಇಲಾಖೆ, ಸದನದಲ್ಲಿ ಸದಸ್ಯರಿಗೆ ಸುಳ್ಳು ಉತ್ತರ ನೀಡೀತೇ? ಎಂಬ ಮಾತುಗಳು ಕೇಳಿಬರುತ್ತಿವೆ.

Tap to resize

Latest Videos

undefined

ಅಕ್ರಮ ಕುರಿತು ಪರಿಷತ್ ಸದಸ್ಯ ಅರವಿಂದ ಅರಳಿ(Aravind Arali) ಹಾಗೂ ನೇಮಕಾತಿ(Recruitment) ಮತ್ತು ಹುದ್ದೆಗಳ ಕುರಿತ ಶಾಸಕ ಸತೀಶ ಜಾರಕಿಹೊಳಿ(Satish Jarkiholi) ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಉತ್ತರ ನೀಡಿರುವ ಪರಿ ನೋಡಿದರೆ, ಅದ್ಯಾವುದೋ ಕಾಣದ ಕೈಗಳ ಒತ್ತಡಕ್ಕೆ ಮಣಿದಂತಿರುವ ಗೃಹ ಇಲಾಖೆ(Home Department) ಹಾರಿಕೆಯ ಉತ್ತರ ನೀಡಿ ಪಾರಾಗುವ ಪ್ರಯತ್ನ ನಡೆಸೀತೇ ಎಂಬ ಅನುಮಾನಗಳು ನೊಂದ ಅಭ್ಯರ್ಥಿಗಳ ವಲಯದಲ್ಲಿ ಮೂಡಿಬರುತ್ತಿದೆ. 

PSI ನೇಮಕಾತಿ ಆದೇಶಕ್ಕೆ ತಾತ್ಕಾಲಿಕ ತಡೆ

ಪರಿಷತ್ ಸದಸ್ಯ ಅರಳಿ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ(ಸಂಖ್ಯೆ 258) ಫೆ.17ರಂದು ಲಿಖಿತ ಉತ್ತರ ನೀಡಲಾಗಿದೆ. ರಾಜ್ಯದಲ್ಲಿ(Karnataka) ಜರುಗಿದ ಸುಮಾರು 545 ಪಿಎಸ್‌ಐ (ಸಿವಿಲ್) ಹುದ್ದೆ ನೇಮಕಾತಿಯಲ್ಲಿ ನಡೆದ ಪರೀಕ್ಷೆಯಲ್ಲಿ ಅಕ್ರಮದ(Illegal) ಆರೋಪ ಬಂದಿದ್ದು, ಅದು ನಿಜವೇ? ಎಂಬುದು ಸೇರಿದಂತೆ ನಾಲ್ಕು ಪ್ರಶ್ನೆಗಳನ್ನು ಅರಳಿ ಕೇಳಿದ್ದರು. ಇದಕ್ಕೆ, ಗೃಹ ಸಚಿವರು ಯಾವುದೇ ಅಕ್ರಮದ ಆರೋಪ ಬಂದಿರುವುದಿಲ್ಲ ಎಂದು ಲಿಖಿತ ಉತ್ತರ ನೀಡಿದ್ದಾರೆ. ಇನ್ನುಳಿದ ಮೂರು ಪ್ರಶ್ನೆಗಳಿಗೆ ಉತ್ತರ ಕಾಲಂನಲ್ಲಿ ’ಅನ್ವಯಿಸುವುದಿಲ್ಲ’ ಎಂದಿದ್ದಾರೆ.

ಆರೋಪಗಳ ಬಗ್ಗೆ ಗೃಹ ಸಚಿವರಿಗೆ ಅರೆ ಜ್ಞಾನ ?

545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ(Exam) ಅಕ್ರಮಗಳು ನಡೆದಿವೆ ಎಂಬ ಕುರಿತು ಆರೋಪಗಳು ಪುಂಖಾನುಪುಂಖವಾಗಿ ಕೇಳಿಬರುತ್ತಿವೆ. ಆದರೆ, ಇದಕ್ಕೆ ಯಾವುದೇ ಆರೋಪ ಬಂದಿಲ್ಲ ಎಂದು ಸರ್ಕಾರ ಉತ್ತರಿಸಿದೆ. ಅಚ್ಚರಿ ಎಂದರೆ, ಇದಕ್ಕೆ ಸಂಬಂಧಿಸಿದಂತೆ ನೊಂದ ಅಭ್ಯರ್ಥಿಗಳು ಪೊಲೀಸ್ ಮಹಾ ನಿರ್ದೇಶಕರಿಗೆ ಜ.25 ರಂದೇ ಲಿಖಿತ ದೂರು ನೀಡಿದ್ದರು.

ಪ್ರಮುಖ ಸೂತ್ರಧಾರನೆನ್ನಲಾದ, ಯಾದಗಿರಿಯ(Yadgir) ಡಿಆರ್ ಪೊಲೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರ ಬಗ್ಗೆ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ನೊಂದ ಅಭ್ಯರ್ಥಿಯೊಬ್ಬರ(Candidates) ಎಲ್ಲ ವಿವರಗಳ ಸಮೇತ ದೂರು ನೀಡಿದ್ದರು. ದೊರೆತ ಅಂಕಗಳ ಬಗ್ಗೆ ಇನ್ ಸರ್ವೀಸ್ ಅಭ್ಯರ್ಥಿಗಳಿಬ್ಬರು ಪೊಲೀಸ್ ಮಹಾನಿರ್ದೇಶಕರಿಗೆ ಲಿಖಿತ ದೂರು ನೀಡಿ, ಮರುಮೌಲ್ಯಮಾಪನಕ್ಕೆ(Revaluation) ಮನವಿ ಮಾಡಿದ್ದರು.

ಬಹುಮುಖ್ಯವಾಗಿ, ಈ ವಿಚಾರದಲ್ಲಿ ಸರ್ಕಾರಕ್ಕೆ ಕೆಟ್ಟು ಹೆಸರು ಬರುವುದು ಬೇಡ, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ ಎಂದು ಖುದ್ದು ಸಚಿವ ಪ್ರಭು ಚವ್ಹಾಣ್(Prabhu Chauhan) ಅವರೇ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಜೊತೆಗೆನೇ, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ನೊಂದ ಅಭ್ಯರ್ಥಿಗಳು ಟ್ವೀಟ್, ಫೇಸ್‌ಬುಕ್‌ನಲ್ಲಿ ಒಂದಿಷ್ಟು ಸತ್ಯಕ್ಕೆ ಸಮೀಪವಿರುವ ಸಾಕ್ಷಿಗಳ ಸಮೇತ ಮುಖ್ಯಮಂತ್ರಿ, ಗೃಹಸಚಿವರು, ಪೊಲೀಸ್ ಮಹಾನಿದೇರ್ಶಕರು ಸೇರಿದಂತೆ ಅನೇಕರಿಗೆ ದೂರಿದ್ದರು. ಸಂಸದ ಪ್ರಹ್ಲಾದ್ ಜೋಷಿ(Pralhad Joshi) ಸೇರಿದಂತೆ ಅನೇಕರನ್ನು ಭೇಟಿಯಾಗಿ ತಮ್ಮ ಅಳಲು ವ್ಯಕ್ತಪಡಿಸಿದ್ದರು.

ವಿಚಿತ್ರ ಅಂದರೆ, ಟ್ವಿಟರ್ ಹಾಗೂ ಫೇಸ್‌ಬುಕ್‌ಗಳಲ್ಲಿ ತಮ್ಮ ಸಾಧನೆಗಳು, ಶುಭಾಶಯಗಳು ವಿನಿಮಯ ಹಂಚಿಕೆ ಮಾಡುವ, ವಿಪಕ್ಷಗಳ ಬಗ್ಗೆ ಸಾಲುಗಟ್ಟಲೇ ಟೀಕೆಗಳ ಬರೆಯುವ ಸರ್ಕಾರದ ಜವಾಬ್ದಾರಿಯುತರು ಹಾಗೂ ಜನಪ್ರತಿನಿಽಗಳು, ಈ ವಿಚಾರದಲ್ಲಿ ತುಟಿಪಿಟಕ್ಕೆನ್ನದೇ ಇರುವುದು ಶಂಕಾಸ್ಪದ.

ಇನ್ನು, ಈ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಸಹ ತಮ್ಮ ಟ್ವಿಟರ್ ಹಾಗೂ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ಸರ್ಕಾರಕ್ಕೆ ವಿಸ್ಕೃತವಾಗಿ ಪ್ರಶ್ನಿಸಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.

ಬಲ್ಲ ಮೂಲಗಳ ಪ್ರಕಾರ, ಈಗ ಆಯ್ಕೆಯಾಗಿರುವ ಈ ನೇಮಕಾತಿಯಲ್ಲಿ ಕೆಲವು ಜನಪ್ರತಿನಿಽಗಳ ಸಂಬಂಽಕರು- ಆಪ್ತರು ಹಿರಿಯ ಪೊಲೀಸ್ ಅಧಿಕಾರಿಗಳ, ಅಣ್ತಮ್ಮಂದಿರರು, ಮಕ್ಕಳು, ಮೊಮ್ಮಕ್ಕಳು ಅಕ್ರಮ ಮೂಲಕ ನುಸುಳಿದ್ದಾರೆ. ಹೀಗಾಗಿ, ಅಕ್ರಮದ ಬಗ್ಗೆ ಮತ್ಯಾಕೆ ಪ್ರಶ್ನೆ ಮಾಡೋದು ಎಂಬ ದೂರಾಲೋಚನೆಯೂ ಇರಬಹುದಂತೆ.

ಅಲ್ಲದೆ, ಆಯ್ಕೆಯಾದ ಅಭ್ಯರ್ಥಿಗಳ ಪೈಕಿ, ಬ್ಲೂಟತ್ ಪಿಎಸೈಗಳ ವಲಯದಲ್ಲಿಯೂ ಇದು ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರ ಈ ಬಗ್ಗೆ ಸದನದಲ್ಲಿ ಉತ್ತರಿಸುವುದಿಲ್ಲ. ಕೆಲ ದಿನಗಳ ಮಟ್ಟಿಗೆ ಇದು ಕಾವು ಪಡೆಯುತ್ತಷ್ಟೇ. ಸದನದಲ್ಲಿ ಸರ್ಕಾರ ತನಿಖೆಗೆ ಆದೇಶ ನೀಡದಂತೆ ಮಾಡಲು ನಾವೆಲ್ಲರೂ ಈ ಬಗ್ಗೆ ವ್ಯವಸ್ಥೆ ಹೊಂದಾಣಿಕೆ ಮಾಡಿದ್ದೇವೆ ಎಂಬ ಸಂದೇಶಗಳೂ ಸಹ ಅನುಮಾನ ಮೂಡಿಸಿದೆ.

ಜಾರಕಿಹೊಳಿ ಅವರಿಗೆ ನೀಡಿದ ಉತ್ತರದಲ್ಲೂ ಗೊಂದಲ?

ಇನ್ನು, ಹುದ್ದೆಗಳ ಭರ್ತಿ ವಿಚಾರದಲ್ಲಿ ಸತೀಶ ಜಾರಕಿಹೊಳಿ ಅವರಿಗೆ ಗೃಹ ಸಚಿವರು ನೀಡಿರುವ ಉತ್ತರವೂ ಗೊಂದಲ ಮೂಡಿಸಿದೆ. ಪೊಲೀಸ್ ಇಲಾಖೆಯಲ್ಲಿನ ಆಂತರಿಕ ವಿಭಾಗಗಳು, ವಿವರ, ಮಂಜೂರಾದ ಹಾಗೂ ಖಾಲಿಯಿರುವ ಹುದ್ದೆಗಳು ಹಾಗೂ ಖಾಲಿ ಹುದ್ದೆಗಳ ಭರ್ತಿ ಮಾಡುವ ಕ್ರಮಗಳ ಬಗ್ಗೆ ಸತೀಶ ಎಲ್. ಜಾರಕಿಹೊಳಿ(Satish Jarkiholi) ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆ (ಸಂಖ್ಯೆ 142)ಗೆ ಸರ್ಕಾರ ನೀಡಿದ ಉತ್ತರವೂ ಅನುಮಾನ ಮೂಡಿಸಿದೆ.

ಖಾಲಿ ಹುದ್ದೆಗಳ ಭರ್ತಿ ವಿಚಾರವಾಗಿ ನೀಡಿದ ಉತ್ತರದಲ್ಲಿ, ‘ಪೊಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆಗಳಿಗೆ ಸರ್ಕಾರವು ಮಂಜೂರಾತಿ ನೀಡಿದ್ದು, ಸದರಿ ಹುದ್ದೆಗಳಲ್ಲಿ ೬೮೬ ಹುದ್ದೆಗಳಿಗೆ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿಗಳ ಪರೀಕ್ಷೆ ನಡೆಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ’ ಎಂದು ತಿಳಿಸಲಾಗಿದೆ.

PSI Recruitment Scam: ಸರ್ಕಾರಕ್ಕೆ ಕೆಟ್ಟ ಹೆಸರು ಬೇಡ, ತನಿಖೆಯಾಗಲಿ: ಸಚಿವ ಪ್ರಭು ಚವ್ಹಾಣ್

ಆದರೆ, ಫೆ.7 ರಂದು ಈ ಪಿಎಸೈ ಹುದ್ದೆಗಳ, ವೈದ್ಯಕೀಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ಹಾಗೂ ನೇಮಕಾತಿ ಆದೇಶ ಹೊರಡಿಸುವಿಕೆ ಪ್ರಕ್ರಿಯೆಗೆ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಬೇಕೆಂದು ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪಾಲ್ ಎಲ್ಲೆಡೆ ಸಂದೇಶ ಕಳುಹಿಸಿದ್ದಾರೆ. ಒಂದೆಡೆ ಗೃಹ ಸಚಿವರು ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದಿದ್ದರೆ, ಇನ್ನೊಂದೆಡೆ ಎಡಿಜಿಪಿ ಕಚೇರಿಯ ಸ್ಥಗಿತಗೊಳಿಸುವ ಆದೇಶ ನೋಡಿದರೆ, ಒಂದೇ ವಿಷಯದ ಕುರಿತು ಇಬ್ಬಿಬ್ಬ ಪ್ರಮುಖರು (ಗೃಹ ಸಚಿವರು ಹಾಗೂ ಎಡಿಜಿಪಿ) ಪ್ರತ್ಯೇಕ ಹೇಳಿಕೆ ನೀಡಿರುವುದು ಅಭ್ಯರ್ಥಿಗಳಲ್ಲೊ ಗೊಂದಲ ಮೂಡಿಸಿದೆ.

ರಾಜ್ಯದಲ್ಲಿ ಯಾವುದೇ ಸರ್ಕಾರಿ ಹುದ್ದೆಯ ನೇಮಕಾತಿ ಅಕ್ರಮದಿಂದ ಹೊರತಾಗಿಲ್ಲ. ಈ 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಪಾರ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗದೆ ಅನ್ನೋದು ಎದ್ದು ಕಾಣುತ್ತಿದೆ. ಭ್ರಷ್ಟಾಚಾರ(Corruption) ಕೆಳಹಂತದಲ್ಲಾಗಿದ್ದರೆ, ಇಷ್ಟೊತ್ತಿಗೆ ಇದು ರದ್ದಾಗಿರುತ್ತಿತ್ತು. ಆದರೆ, ಹಲವಾರು ಎಮ್ಮೆಲ್ಲೆಗಳು, ಸಚಿವರು ಈ ಅಕ್ರಮದಲ್ಲಿ ಭಾಗಿಯಾಗಿರುವ ಕಾರಣದಿಂದಾಗೇನೋ, ಇದರಲ್ಲಿ ಯಾವುದೇ ತರಹದ ಅಕ್ರಮ ಆಗಿಲ್ಲ ಎಂದು ಸರ್ಕಾರ ಸದನದಲ್ಲಿ ಉತ್ತರ ಕೊಡುವ ಧೈರ್ಯ ಮಾಡಿದೆ ಅಂತ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.
 

click me!