
ಮೈಸೂರು: ಮೈಸೂರು ಅರಮನೆಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಸರ್ಕಾರ ಕಾರ್ಯಾಂಗವನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದೆ. ಆದರೆ, ನ್ಯಾಯಾಲಯದ ಮೂಲಕ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರಮನೆ ವಿಚಾರ ಕೋರ್ಟ್‌ನಲ್ಲಿ ಇದೆ. ಅದನ್ನು ನ್ಯಾಯಾಲಯವೇ ತೀರ್ಮಾನ ಮಾಡಲಿದೆ. ಆದರೆ, ಅರಮನೆಯನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಲು ಕಾರ್ಯಾಂಗ ಹಾಗೂ ಶಾಸಕಾಂಗವನ್ನು ದುರ್ಬಳಕೆ ಮಾಡಿಕೊಳ್ಳುವ ಯತ್ನಗಳು ನಡೆಯುತ್ತಿವೆ. ನಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ನಾವೀಗ ಹೋರಾಟ ಮಾಡಬೇಕಾಗಿದೆ ಎಂದು ವಿಷಾದಿಸಿದರು.
ಇಂತಹ ವಿಚಾರದಲ್ಲಿ ರಾಜಕಾರಣ ಮಾಡುವುದು ದುರ್ದೈವ. ಇದು ನಮ್ಮ ಆಸ್ತಿಯೇ? ಅಲ್ಲವೇ ಎಂಬ ಚರ್ಚೆ ಸದ್ಯಕ್ಕೆ ಅಪ್ರಸ್ತುತ. ಯಾರ ಆಸ್ತಿ ಎಂಬುದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತದೆ. ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯವೇ ಅಂತಿಮ ಎಂದರು.
ನಮಗೆ ದಸರಾ ನಡೆಯುವುದು ಮುಖ್ಯ. ದಸರಾದಲ್ಲಿ ರಾಜಕಾರಣ ಮಾಡದೆ ಉತ್ತಮ ರೀತಿ ನಡೆಸಿಕೊಳ್ಳಲಿ. ಹಿಂದಿನ ದಸರಾದಲ್ಲೂ ಲೋಪಗಳಿದ್ದವು. ಮುಂದಿನ ವರ್ಷಕ್ಕೆ ಇದನ್ನು ಸರಿಪಡಿಸಿಕೊಂಡು ಹೋಗಬೇಕಿದೆ. ಕಳೆದ ವರ್ಷ ನಮ್ಮನ್ನೇ ಒಳಗೆ ಬಿಟ್ಟಿರಲಿಲ್ಲ. ಮುಂದಿನ ವರ್ಷ ಈ ರೀತಿ ಆಗದಂತೆ ಅಗತ್ಯ ಕ್ರಮ ವಹಿಸಬೇಕಿದೆ ಎಂದರು.
ಉತ್ತಮವಾಗಿ ದಸರಾ ನಡೆದರೆ ನಮಗೂ ಅನುಕೂಲ, ಸರ್ಕಾರಕ್ಕೂ ಅನುಕೂಲ. ದಸರಾದಲ್ಲಿ ಸುಧಾರಣೆ ಆಗದಿದ್ದರೆ ಹೋರಾಟ ಅನಿವಾರ್ಯ. ಅರಮನೆ ವಿವಾದ, ಅಂಬಾರಿ, ಸಿಂಹಾಸನ, ದಸರಾ ವಿಚಾರದಲ್ಲಿ ತಾಯಿ (ಪ್ರಮೋದಾದೇವಿ ಒಡೆಯರ್) ಅವರು ತೀರ್ಮಾನ ಮಾಡುತ್ತಾರೆ. ಅವರ ನಿರ್ಧಾರದಂತೆ ಕ್ರಮ ಕೈಗೊಳ್ಳುತ್ತಾರೆ. ಈ ಕುರಿತು ಅವರಿಗೆ ಹೆಚ್ಚಿನ ಮಾಹಿತಿ ಇದೆ. ಅವರು ಈಗಾಗಲೇ ಕೂಲಂಕುಷ ಉತ್ತರ ನೀಡಿದ್ದಾರೆ. ಅಗತ್ಯ ಎನಿಸಿದರೆ ಅವರೇ ಉತ್ತರ ಕೊಡುತ್ತಾರೆ ಎಂದರು.