ಧಾರವಾಡ ಟ್ರಾಫಿಕ್‌ ನಿಯಮದಲ್ಲಿ ಅವೈಜ್ಞಾನಿಕ ಬೆಳವಣಿಗೆ; ಅನಗತ್ಯ ಒನ್‌ವೇಯಿಂದ ತೊಂದರೆ

Published : Nov 10, 2026, 09:59 AM IST
Dharwad

ಸಾರಾಂಶ

ಧಾರವಾಡದಲ್ಲಿ ಬದಲಾದ ಟ್ರಾಫಿಕ್ ನಿಯಮಗಳು ಹಾಗೂ ರಸ್ತೆಗಳ ಮುಚ್ಚುವಿಕೆಯಿಂದ ಜನರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ಮತ್ತು ಸಿಗ್ನಲ್ ಸಮಸ್ಯೆಗಳು ದಿನನಿತ್ಯದ ಓಡಾಟಕ್ಕೆ ದೊಡ್ಡ ಅಡಚಣೆಯಾಗಿವೆ.

ಧಾರವಾಡ: ಮೊದಲೇ ನಗರದಲ್ಲಿ ಚಿಕ್ಕದಾದ ವೃತ್ತ, ರಸ್ತೆಗಳಿದ್ದು ಟ್ರಾಫಿಕ್‌ ಸಮಸ್ಯೆಯಾಗುತ್ತಿದೆ. ಜತೆಗೆ ಅವೈಜ್ಞಾನಿಕ ಟ್ರಾಫಿಕ್‌ ನಿಯಮಗಳಿಂದ ಇತ್ತೀಚೆಗೆ ವಿಪರೀತ ಟ್ರಾಫಿಕ್‌ ಸಮಸ್ಯೆ ಎದುರಾಗಿದೆ.

ಜೆಎಸ್‌ಎಸ್‌ ಕಾಲೇಜು ಬಳಿ ಕಾಲೇಜು ವಿದ್ಯಾರ್ಥಿನಿಗೆ ಬಿಆರ್‌ಟಿಎಸ್ ಡಿಕ್ಕಿ ಹೊಡೆದ ಪ್ರಕರಣವನ್ನು ಪೊಲೀಸ್‌ ಆಯುಕ್ತರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಆದರೆ, ಅವೈಜ್ಞಾನಿಕವಾಗಿ ಕೆಲವು ಟ್ರಾಫಿಕ್‌ ನಿಯಮಗಳನ್ನು ಬದಲಿಸಿದ್ದು ಧಾರವಾಡ ಜನತೆ ತೀವ್ರ ಟ್ರಾಫಿಕ್‌ ಸಮಸ್ಯೆ ಎದುರಿಸುವಂತಾಗಿದೆ. ಎಲ್‌ಐಸಿ ಮೂಲಕ ಮಂದಾರ ಹೋಟೆಲ್‌ ಮೂಲಕ ಬಿಆರ್‌ಟಿಎಸ್‌ ಕಾರಿಡಾರ ದಾಟಿ ಕೋರ್ಟ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಹೀಗಾಗಿ ಕೋರ್ಟ್‌ ವೃತ್ತ, ಎನ್‌ಟಿಟಿಎಫ್‌, ಟೋಲನಾಕಾ ಹಾಗೂ ಹುಬ್ಬಳ್ಳಿಗೆ ಹೋಗಲು ಜ್ಯುಬಲಿ ವೃತ್ತಕ್ಕೆ ಹೋಗಿಯೇ ಬರುವಂತಾಗಿದೆ. ಮೊದಲೇ ಜ್ಯುಬಿಲಿ ವೃತ್ತ ವಿಪರೀತ ಟ್ರಾಫಿಕ್‌ ಸಮಸ್ಯೆ ಇದ್ದು, ಇದೀಗ ಅವೈಜ್ಞಾನಿಕ ನೀತಿಯಿಂದ ಜನರಿಗೆ ಮತ್ತಷ್ಟು ತೊಂದರೆಯಾಗಿದೆ.

ಬಿಆರ್‌ಟಿಎಸ್‌ ಕಾರಿಡಾರ್‌ ಬಳಸುವುದು ಅನಿವಾರ್ಯ

ಧಾರವಾಡದ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಅನಿವಾರ್ಯವಾಗಿ ಬಿಆರ್‌ಟಿಎಸ್‌ ಕಾರಿಡಾರ್‌ ಬಳಸುವುದು ಅನಿವಾರ್ಯ. ಆದರೆ, ಒಟ್ಟಾರೆ ಕಾರಿಡಾರ್‌ ಬಂದ್‌ ಮಾಡಿದರೆ ಜನರು ಪ್ರತಿಯೊಂದು ಸ್ಥಳಕ್ಕೂ ಯೂ ಟರ್ನ್‌ ತೆಗೆದುಕೊಳ್ಳಲು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಆಯುಕ್ತರು ತಮ್ಮ ನಿರ್ಧಾರ ಕೈ ಬಿಡಬೇಕು. ಮೊದಲಿನಂತೆ ರಸ್ತೆಗಳನ್ನು ಸರಳಗೊಳಿಸಬೇಕು. ಜತೆಗೆ ಇಂತಹ ನಿರ್ಧಾರ ತೆಗೆದುಕೊಳ್ಳುವಾಗ ಸಾರ್ವಜನಿಕರ ಸಲಹೆಗಳನ್ನು ಸಹ ಪರಿಗಣಿಸಬೇಕೆಂದು ಜನರು ಆಗ್ರಹಿಸುತ್ತಾರೆ.

ಪಾರ್ಕಿಂಗ್‌ ವ್ಯವಸ್ಥೆ

ಇನ್ನು, ಧಾರವಾಡದ ಮಾರುಕಟ್ಟೆಗೆ ಕಾರು ತೆಗೆದುಕೊಂಡು ಹೋಗದ ಸ್ಥಿತಿ ಉಂಟಾಗಿದ್ದು, ಸುಭಾಸ ರಸ್ತೆ, ಸೂಪರ್‌ ಮಾರುಕಟ್ಟೆ, ನೆಹರು ಮಾರುಕಟ್ಟೆ ಸೇರಿದಂತೆ ಇಡೀ ಮಾರುಕಟ್ಟೆಯಲ್ಲಿ ಕಾರು, ಬೈಕ್‌ ನಿಲ್ಲಿಸಲು ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಇನ್ನು, ಹಬ್ಬ-ಹರಿದಿನಗಳಲ್ಲಂತೂ ಬೈಕ್‌ ಸಹ ಮಾರುಕಟ್ಟೆ ಪ್ರದೇಶದಲ್ಲಿ ಹೋಗದಂತಹ ಸ್ಥಿತಿ ಉಂಟಾಗುತ್ತದೆ. ಬರೀ ಮಾರುಕಟ್ಟೆ ಮಾತ್ರವಲ್ಲದೇ ನಗರದ ಪ್ರಮುಖ ಸ್ಥಳಗಳಲ್ಲೂ ವಾಹನ ನಿಲುಗಡೆಗೆ ಸರಿಯಾಗಿ ವ್ಯವಸ್ಥೆ ಇಲ್ಲ. ಇದು ಮಹಿಳೆಯರಿಗೆ, ವೃದ್ಧರಿಗೆ ವಾಹನ ಚಲಿಸಲು ತೀವ್ರ ಸಮಸ್ಯೆಯಾಗುತ್ತಿದೆ. ಹೀಗಾಗಿ ಜನರು ಸಹ ಟ್ರಾಫಿಕ್‌ ನಿಯಮ ಪಾಲಿಸದಂತಾಗಿದೆ.

ಜ್ಯುಬಿಲಿ ವೃತ್ತ, ಎನ್‌ಟಿಟಿಎಫ್‌, ಬಾಗಲಕೋಟ ಪಂಪ್‌ ಸೇರಿದಂತೆ ಪ್ರತಿಯೊಂದು ಸಿಗ್ನಲ್‌ನಲ್ಲಿ ಜನರು ಸಿಗ್ನಲ್‌ಗಳಿಗೆ ಕಾಯಬೇಕಾಗಿದ್ದು, ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನಾದರೂ ಟ್ರಾಫಿಕ್‌ ನಿಯಮಗಳನ್ನು ಜನರಿಗೆ ಅನುಕೂಲವಾಗುವಂತೆ ಸರಳೀಕರಿಸಬೇಕಾದ ಅನಿವಾರ್ಯವಿದೆ.

PREV
Read more Articles on
click me!

Recommended Stories

ಹೋರಿ ಬೆದರಿಸುವ ಸ್ಪರ್ಧಗೆ ಯಾರ ಅನುಮತಿ ಕಡ್ಡಾಯ? ಸಾವು-ನೋವು ಸಂಭವಿಸಿದರೆ ಯಾರು ಹೊಣೆ?
ಮೋದಿ ಭೇಟಿಯ ಸಮಯದಲ್ಲೇ ಮೈಸೂರಿಗೆ ಮತ್ತೊಂದು ಗರಿಮೆ, ಕೌಟಿಲ್ಯನ ಅರ್ಥಶಾಸ್ತ್ರ ತಾಳೆಗರಿ ಹಸ್ತಪ್ರತಿ UNESCO ಮಡಿಲಿಗೆ