Dharwad: ಹಳಿ ಬಿಟ್ಟ ಸರಕು ಸಾಗಾಣಿಕೆ ರೈಲು: ತಪ್ಪಿದ ಭಾರೀ ದುರಂತ

By Kannadaprabha News  |  First Published Jan 9, 2022, 10:16 AM IST

*  ಅದೃಷ್ಟವಶಾತ್‌ ಯಾವುದೇ ಅವಘಡ ಸಂಭವಿಸಿಲ್ಲ
*  ಕೆಲ ರೈಲುಗಳ ವೇಳಾಪಟ್ಟಿಯಲ್ಲಿ ಬದಲು
*  ಹಳಿ ಬಿಟ್ಟು ಕೆಳಗಿಳಿದು ಅರ್ಧ ಕಿಮೀದಷ್ಟು ಚಲಿಸಿದ ರೈಲು  
 


ಅಳ್ನಾವರ(ಜ.09): ಇಲ್ಲಿನ ನಿಲ್ದಾಣದೊಳಗೆ ಆಗಮಿಸುತ್ತಿದ್ದ ಸಿಮೆಂಟ್‌ ತುಂಬಿದ್ದ ಸರಕು ಸಾಗಾಣಿಕೆ ರೈಲಿನ(Goods Rail) ಬೋಗಿಯೊಂದು ಹಳಿ ಬಿಟ್ಟು(Railway Track) ಬಹು ದೂರದವರೆಗೆ ಚಲಿಸಿದ ಪರಿಣಾಮ ರೈಲು ಹಳಿಗೆ ಭಾರಿ ಹಾನಿಯಾಗಿದ್ದು, ಅದೃಷ್ಟವಶಾತ್‌ ಯಾವುದೇ ಅವಘಡ ಸಂಭವಿಸದಿರುವುದು ಸ್ಥಳೀಯರಲ್ಲಿ ನೆಮ್ಮದಿ ಮೂಡಿಸಿದೆ.

ಶನಿವಾರ ಬೆಳಗ್ಗೆ ಧಾರವಾಡ(Dharwad) ಕಡೆಯಿಂದ ಲೋಂಡಾ ಕಡೆಗೆ ಹೋಗುತ್ತಿದ್ದ ಸರಕು ತುಂಬಿದ ರೈಲು ಅಳ್ನಾವರ ನಿಲ್ದಾಣದ ಐದನೇ ಮಾರ್ಗದಲ್ಲಿ ಚಲಿಸುವಾಗ ಒಂದು ಬೋಗಿ ಮಾತ್ರ ಹಳಿ ಬಿಟ್ಟು ಕೆಳಗಿಳಿದು ಸುಮಾರು ಅರ್ಧ ಕಿಮೀದಷ್ಟು ಹಾಗೆ ಚಲಿಸಿದ್ದರಿಂದ ರೈಲಿನ ಸಿಮೆಂಟ್‌ನ ಸ್ಲೀಪರ್‌ಗಳು ಪುಡಿಯಾಗಿವೆ. ಈ ಘಟನೆ ಜರುಗಿದ ಸ್ಥಳದಲ್ಲಿ ಕೆಳ ರಸ್ತೆಯ ಸೇತುವೆಯಿದ್ದು ಬೋಗಿಯು ಕೆಳಗೆ ರಸ್ತೆಯ ಮೇಲೆ ಉರುಳಿ ಬಿದ್ದಿದ್ದರೆ ಊಹಿಸಲಾರದಷ್ಟುಹಾನಿಯಾಗಿ ಜೀವ ಹಾನಿಯೂ ಸಂಭವಿಸಬಹುದಾಗಿತ್ತು. ಜೊತೆಗೆ ಹಳಿಗೆ ಹೊಂದಿಕೊಂಡಂತೆ ರೈಲ್ವೆ ವಿದ್ಯುತ್‌ ಮಾರ್ಗದ ಕಂಬಗಳೂ ಸಹ ಇದ್ದು ಅದಕ್ಕೂ ಹಾನಿಯಾಗುತ್ತಿತ್ತು ಎಂದು ಅಂದಾಜಿಸಲಾಗಿದೆ.

Tap to resize

Latest Videos

Railway News: ನವೀಕೃತ ರೈಲ್ವೇ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ

ಸ್ಥಳಕ್ಕೆ ಇಲಾಖೆಯ ಹಿರಿಯ ಅ​ಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ನೂರಾರು ಜನ ಸಿಬ್ಬಂದಿಯೊಂದಿಗೆ ಯುದ್ಧೋಪಾದಿಯಲ್ಲಿ ಹಾಳಾದ ರೈಲು ಮಾರ್ಗದ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡು ಕೆಲವು ಗಂಟೆಗಳಲ್ಲಿ ರೈಲುಗಳ ಓಡಾಟಕ್ಕೆ ಸುಗಮ ಮಾರ್ಗ ಮಾಡಿಕೊಡಲಾಯಿತು.

ಬೆಂಗಳೂರು- ಮೀರಜ್‌ ರೈಲಿನ ವೇಗ ಹೆಚ್ಚಳ

ಹುಬ್ಬಳ್ಳಿ(Hubballi): ನೈರುತ್ಯ ರೈಲ್ವೆ ವಲಯದ(South Western Railway) ವ್ಯಾಪ್ತಿಯಲ್ಲಿ ಸಂಚರಿಸುವ ಬೆಂಗಳೂರು- ಮೀರಜ್‌(Bengaluru-Miraj) ರೈಲಿನ ವೇಗವನ್ನು ಹೆಚ್ಚಿಸಲಾಗಿದೆ. ಜತೆಗೆ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ. ಇದರಿಂದ ಉಳಿದ ಕೆಲ ರೈಲುಗಳ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಿದೆ.

ಕೆಎಸ್‌ಆರ್‌ ಬೆಂಗಳೂರು - ಮೀರಜ್‌ (ರೈಲು ಸಂಖ್ಯೆ 16589) ರಾತ್ರಿ 10.05 ಬದಲಿಗೆ 11 ಗಂಟೆಗೆ ಬೆಂಗಳೂರನ್ನು ಬಿಡಲಿದೆ. ಹುಬ್ಬಳ್ಳಿ 5.35ರ ಬದಲಿಗೆ 6 ಗಂಟೆಗೆ ಆಗಮಿಸಿ ಇಲ್ಲಿಂದ 6.10ಕ್ಕೆ ಮೀರಜ್‌ನತ್ತ ಪ್ರಯಾಣ ಬೆಳೆಸಲಿದೆ. ಮೀರಜ್‌ಗೆ ಮಧ್ಯಾಹ್ನ 12.05ರ ಬದಲಿಗೆ 12.10 ನಿಮಿಷಕ್ಕೆ ತಲುಪಲಿದೆ.

ಈ ರೈಲಿನ ವೇಗವನ್ನು ಹೆಚ್ಚಿಸಿದ ಪರಿಣಾಮದ ಉಳಿದ ಕೆಲ ರೈಲುಗಳ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಿದೆ. ಕೆಎಸ್‌ಆರ್‌ ಬೆಂಗಳೂರು- ಜೋಧಪುರ (ರೈಲಿನ ಸಂಖ್ಯೆ 16508) ರೈಲು ಬೆಂಗಳೂರನ್ನು ರಾತ್ರಿ 10.45ರ ಬದಲಿಗೆ 10.20ಕ್ಕೆ ಬಿಡಲಿದೆ. ಈ ರೈಲು ಹುಬ್ಬಳ್ಳಿಯನ್ನು 6.10ಕ್ಕೆ ತಲುಪಲಿದೆ. ಇಲ್ಲಿಂದ 6.20ಕ್ಕೆ ಹೊರಡುವ ಈ ರೈಲು ಮೀರಜ್‌ನ್ನು 12.45ರ ಬದಲಿಗೆ 12.50ಕ್ಕೆ ತಲುಪಲಿದೆ. ಮೀರಜ್‌ನಿಂದ ಜೋಧಪುರವರೆಗೆ ಯಾವುದೇ ಬದಲಾವಣೆಯಿಲ್ಲ. ಇದು ಜ.8ರಿಂದ ಅನ್ವಯವಾಗಲಿದೆ.

Railway News : ಮಿಷನ್ ಜೀವನ್ ರಕ್ಷಾ ಅಡಿಯಲ್ಲಿ 2021ರಲ್ಲಿ 601 ಮಂದಿಯ ರಕ್ಷಣೆ ಮಾಡಿದ ರೈಲ್ವೇ ರಕ್ಷಣಾ ಪಡೆ!

ಇನ್ನೂ ಮೈಸೂರು- ಅಜ್ಮೀರ್‌ ಎಕ್ಸ್‌ಪ್ರೆಸ್‌ (ರೈಲಿನ ಸಂಖ್ಯೆ 16210) ಮೈಸೂರಿನಿಂದ ಎಂದಿನಂತೆ ಸಂಜೆ 7ಗಂಟೆಗೆ ಹೊರಡಲಿದೆ. ಆದರೆ ಬೆಂಗಳೂರನಿಂದ 10.10ಕ್ಕೆ ತಲುಪುವ ಈ ರೈಲು ಅಲ್ಲಿಂದ ಮೊದಲು 10.40ಕ್ಕೆ ಹೊರಡುತ್ತಿತ್ತು. ಆದರೆ ಬದಲಾದ ಸಮಯದಂತೆ 10.20ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಹುಬ್ಬಳ್ಳಿಗೆ ಎಂದಿನಂತೆ ಬೆಳಿಗ್ಗೆ 6.10ಕ್ಕೆ ತಲುಪಿ, ಇಲ್ಲಿಂದ 6.20ಕ್ಕೆ ಹೊರಡಲಿದೆ. ಮೀರಜ್‌ನ್ನು ಮಧ್ಯಾಹ್ನ 12.45ಕ್ಕೆ ತಲುಪಿ ಅಲ್ಲಿಂದ ಅಜ್ಮೀರ್‌ ಕಡೆಗೆ 12.50ಕ್ಕೆ ಹೊರಡಲಿದೆ. ಮೀರಜ್‌ನಿಂದ ಅಜ್ಮೀರ್‌ವರೆಗೂ ಯಾವುದೇ ಬದಲಾವಣೆಯಿಲ್ಲ. ಜ.10ರಿಂದ ಈ ಸಮಯ ಅನ್ವಯವಾಗುವುದು.

ಕೆಎಸ್‌ಆರ್‌ ಬೆಂಗಳೂರು- ಗಾಂಧಿಧಾಮ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ- 16506) ರಾತ್ರಿ 10.45ರ ಬದಲಿಗೆ 10.20ಕ್ಕೆ ಬಿಡಲಿದೆ. ಹುಬ್ಬಳ್ಳಿಗೆ ಎಂದಿನಂತೆ 6.10ಕ್ಕೆ ತಲುಪಿ ಇಲ್ಲಿಂದ 6.20ಕ್ಕೆ ಹೊರಡಲಿದೆ. ಮೀರಜ್‌ನ್ನು ಮಧ್ಯಾಹ್ನ 12.45ಕ್ಕೆ ತಲುಪುವ ಈ ರೈಲು ಅಲ್ಲಿಂದ 12.50ಕ್ಕೆ ಹೊರಡಲಿದೆ. ಮೀರಜ್‌ - ಗಾಂಧಿಧಾಮದ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಬದಲಾವಣೆಯೂ ಜ.14ರಿಂದ ಅನ್ವಯವಾಗಲಿದೆ.

ಇನ್ನೂ ಯಶವಂತಪುರ- ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದ ಮಧ್ಯೆ ಸಂಚರಿಸುವ ಹುಬ್ಬಳ್ಳಿ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ - 16543) ರಾತ್ರಿ 11.50ರ ಬದಲಿಗೆ ಮಧ್ಯರಾತ್ರಿ 12.05ಗಂಟೆಗೆ ಬಿಡಲಿದೆ. ತುಮಕೂರನ್ನು ರಾತ್ರಿ 12.38ರ ಬದಲಿಗೆ 12.55ಕ್ಕೆ ತಲುಪಲಿದೆ. ಅಲ್ಲಿಂದ 12.57ಕ್ಕೆ ಹೊರಡಲಿದೆ. ತುಮಕೂರನಿಂದ ಹುಬ್ಬಳ್ಳಿವರೆಗೂ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಬದಲಾವಣೆಯೂ ಜ.13ರಿಂದ ಅನ್ವಯವಾಗಲಿದೆ ಎಂದು ನೈರುತ್ಯ ರೈಲ್ವೆ ವಲಯ ಪ್ರಕಟಣೆ ಸ್ಪಷ್ಟಪಡಿಸಿದೆ.
 

click me!